KKR vs MI: 10 ರನ್‌ಗೆ 5 ವಿಕೆಟ್‌ ಕಿತ್ತ ವೇಗಿ ಜಸ್ಪ್ರೀತ್ ಬುಮ್ರಾ, ಅಪರೂಪದ ದಾಖಲೆ ಜಸ್ಟ್‌ ಮಿಸ್

Published : May 10, 2022, 09:22 AM ISTUpdated : May 10, 2022, 09:27 AM IST
KKR vs MI: 10 ರನ್‌ಗೆ 5 ವಿಕೆಟ್‌ ಕಿತ್ತ ವೇಗಿ ಜಸ್ಪ್ರೀತ್ ಬುಮ್ರಾ, ಅಪರೂಪದ ದಾಖಲೆ ಜಸ್ಟ್‌ ಮಿಸ್

ಸಾರಾಂಶ

* ಕೋಲ್ಕತಾ ನೈಟ್ ರೈಡರ್ಸ್ ಎದುರು ಅದ್ಭುತ ಪ್ರದರ್ಶನ ತೋರಿದ ಜಸ್ಪ್ರೀತ್ ಬುಮ್ರಾ * ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿದ ಮುಂಬೈ ಇಂಡಿಯನ್ಸ್‌ ವೇಗಿ * ಬುಮ್ರಾ ಅದ್ಭುತ ಪ್ರದರ್ಶನದ ಹೊರತಾಗಿಯೂ ಕೆಕೆಆರ್‌ ಎದುರು ಮುಂಬೈಗೆ ಸೋಲು

ನವಿ ಮುಂಬೈ(ಮೇ.10): ಮುಂಬೈ ಇಂಡಿಯನ್ಸ್‌ನ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಲಯಕ್ಕೆ ಮರಳಿದ್ದು, ಸೋಮವಾರ ಕೋಲ್ಕತಾ ನೈಟ್‌ರೈಡ​ರ್ಸ್‌ (Kolkata Knight Riders) ವಿರುದ್ಧದ ಪಂದ್ಯದಲ್ಲಿ ಕೇವಲ 10 ರನ್‌ಗೆ 5 ವಿಕೆಟ್‌ ಕಬಳಿಸಿದರು. ಇದು ಐಪಿಎಲ್‌ನಲ್ಲಿ 5ನೇ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ಎನಿಸಿಕೊಂಡಿದೆ. 4 ಓವರ್‌ ಬೌಲ್‌ ಮಾಡಿದ ಅವರು 1 ಮೇಡನ್‌ ಸಹ ಪಡೆದರು. ಅವರ ಸ್ಪೆಲ್‌ನಲ್ಲಿ 18 ಡಾಲ್‌ ಬಾಲ್‌ಗಳಿದ್ದವು. ಬುಮ್ರಾ ಕೇವಲ ಒಂದು ಬೌಂಡರಿ ಮಾತ್ರ ಬಿಟ್ಟುಕೊಟ್ಟರು. 

ಈ ಆವೃತ್ತಿಯಲ್ಲಿ ಮೊದಲ 10 ಪಂದ್ಯಗಳಲ್ಲಿ ಬುಮ್ರಾ ಕೇವಲ 5 ವಿಕೆಟ್‌ ಪಡೆದಿದ್ದರು. 7 ಪಂದ್ಯಗಳಲ್ಲಿ ಅವರು ಒಂದೂ ವಿಕೆಟ್‌ ಪಡೆದಿರಲಿಲ್ಲ. ಆದರೆ ಕೆಕೆಆರ್‌ ವಿರುದ್ಧ ತಮ್ಮ ಶ್ರೇಷ್ಠ ಪ್ರದರ್ಶನ ತೋರಿ ಅಭಿಮಾನಿಗಳ ಮನಗೆದ್ದರು. ಬುಮ್ರಾಗೆ ಐಪಿಎಲ್‌ನ ಶ್ರೇಷ್ಠ ಬೌಲಿಂಗ್‌ ಪ್ರದರ್ಶನದ ದಾಖಲೆ ಬರೆಯುವ ಅವಕಾಶವಿತ್ತು. 3 ಓವರ್‌ಗಳಲ್ಲಿ 5 ವಿಕೆಟ್‌ ಕಿತ್ತಿದ್ದ ಬೂಮ್ರಾ, ತಮ್ಮ ಸ್ಪೆಲ್‌ನ 4ನೇ ಹಾಗೂ ಇನ್ನಿಂಗ್ಸ್‌ನ ಅಂತಿಮ ಓವರಲ್ಲಿ ವಿಕೆಟ್‌ ಪಡೆಯಲಿಲ್ಲ. ಐಪಿಎಲ್‌ನಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನದ ದಾಖಲೆ ಅಲ್ಜಾರಿ ಜೋಸೆಫ್‌ ಹೆಸರಿನಲ್ಲಿದೆ. 2019ರಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಜೋಸೆಫ್‌, ಸನ್‌ರೈಸ​ರ್ಸ್‌ ಹೈದರಾಬಾದ್ ವಿರುದ್ಧ 12 ರನ್‌ಗೆ 6 ವಿಕೆಟ್‌ ಕಬಳಿಸಿದ್ದರು.

ಮುಂಬೈ ಇಂಡಿಯನ್ಸ್‌ಗೆ 9ನೇ ಸೋಲು

ನವಿ ಮುಂಬೈ: ದಾಖಲೆಯ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians) ಐಪಿಎಲ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ 9 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಬಾರಿ ಆರಂಭಿಕ 8 ಪಂದ್ಯಗಳಲ್ಲಿ ಸೋತು ಬಳಿಕ 2 ಪಂದ್ಯ ಗೆದ್ದಿದ್ದ ತಂಡ ಸೋಮವಾರ ಕೋಲ್ಕತಾ ವಿರುದ್ಧ 52 ರನ್‌ಗಳಿಂದ ಪರಾಭವಗೊಂಡಿತು. ಈಗಾಗಲೇ ಪ್ಲೇ-ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿರುವ ಮುಂಬೈ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದರೆ, ಕೋಲ್ಕತಾ 5ನೇ ಗೆಲುವಿನೊಂದಿಗೆ 7ನೇ ಸ್ಥಾನಕ್ಕೇರಿತು. ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದರೂ ಪ್ಲೇ-ಆಫ್‌ಗೆ ಪ್ರವೇಶಿಸುವುದು ಅನುಮಾನ.

ದಕ್ಷಿಣ ಆಫ್ರಿಕಾ ಸರಣಿಯಿಂದ ವಿರಾಟ್‌ಗೆ ವಿಶ್ರಾಂತಿ?

ಮುಂಬೈ: ರನ್‌ ಬರ ಎದುರಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ (Virat Kohli) ಮುಂಬರುವ ದ.ಆಫ್ರಿಕಾ ಸರಣಿ ಹಾಗೂ ಐರ್ಲೆಂಡ್‌ ಪ್ರವಾಸದಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೂ.9ರಿಂದ 19ರ ವರೆಗೆ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳು ನಡೆಯಲಿದ್ದು, ಬಳಿಕ ಜೂ.26ರಿಂದ ಐರ್ಲೆಂಡ್‌ನಲ್ಲಿ ಭಾರತ 2 ಟಿ20 ಪಂದ್ಯ ಆಡಲಿದೆ. 

IPL 2022 ಮತ್ತೆ ಸೋಲಿನ ಕಹಿ, ಕೆಕೆಆರ್ ಮುಂದೆ ಮಂಕಾದ ಮುಂಬೈ!

ಆದರೆ ಮುಂಬರುವ ಟಿ20 ವಿಶ್ವಕಪ್‌ ದೃಷ್ಟಿಯಿಂದ ಕೊಹ್ಲಿಗೆ ಈ ಎರಡು ಸರಣಿಗಳಲ್ಲಿ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ. ‘ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಿದ್ದೇವೆ. ಆದರೆ ಕೊಹ್ಲಿ ಆಡಲು ನಿರ್ಧರಿಸಿದರೆ ಖಂಡಿತಾ ಆಡಬಹುದು. ಈ ಬಗ್ಗೆ ಅವರ ಜೊತೆ ಚರ್ಚೆ ನಡೆಸುತ್ತೇವೆ’ ಎಂದು ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!