
ಮುಂಬೈ(ಮಾ.28): ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ತಾನಾಡಿದ ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿದೆ. ಮುಂಬೈ ಕೈಯಲ್ಲಿದ್ದ ಗೆಲುವನ್ನು ಕಸಿಯುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ರೌಂಡರ್‌ಗಳಾದ ಲಲಿತ್ ಯಾದವ್ ಹಾಗೂ ಅಕ್ಷರ್ ಪಟೇಲ್ (Axar Patel) ಯಶಸ್ವಿಯಾಗಿದ್ದಾರೆ. ಈ ಸೋಲಿನ ಶಾಕ್‌ನಿಂದ ಹೊರಬರುವ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಐಪಿಎಲ್ ಆಡಳಿತ ಮಂಡಳಿಯು ಮತ್ತೊಂದು ಶಾಕ್ ನೀಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ (Slow Over Rate) ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ‘ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ನಿಗದಿತ ಅವಧಿಯಲ್ಲಿ ಬೌಲಿಂಗ್ ಮುಗಿಸಲು ವಿಫಲವಾಗಿದೆ. ಮೊದಲ ಬಾರಿ ನಿಯಮ ಉಲ್ಲಂಘನೆಗಾಗಿ ನಾಯಕ ರೋಹಿತ್‌ಗೆ ದಂಡ ವಿಧಿಸಲಾಗಿದೆ’ ಎಂದು ಐಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ಆವೃತ್ತಿಯಲ್ಲಿ ತಂಡ ಮತ್ತೊಮ್ಮೆ ನಿಧಾನಗತಿ ಬೌಲಿಂಗ್ ಮಾಡಿದರೆ, ರೋಹಿತ್ ಒಂದು ಪಂದ್ಯಕ್ಕೆ ನಿಷೇಧಗೊಳ್ಳುವ ಸಾಧ್ಯತೆಯೂ ಇರಲಿದೆ.
ಸತತ 10ನೇ ವರ್ಷವೂ ಮೊದಲ ಪಂದ್ಯದಲ್ಲಿ ಸೋಲು ಕಂಡ ಮುಂಬೈ ಇಂಡಿಯನ್ಸ್
ಮುಂಬೈ: ದಾಖಲೆಯ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ 10ನೇ ವರ್ಷ ಐಪಿಎಲ್ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿ ಕೆಟ್ಟದಾಖಲೆ ಬರೆದಿದೆ. 2012ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೊನೆಯ ಬಾರಿ ಮೊದಲ ಪಂದ್ಯದ ಗೆಲುವಿನ ಸಿಹಿ ಅನುಭವಿಸಿದ್ದ ಮುಂಬೈ, ಬಳಿಕ ಪ್ರತಿ ಬಾರಿಯೂ ಸೋಲಿನ ಆರಂಭ ಪಡೆಯುತ್ತಲೇ ಬಂದಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಪರಾಭವಗೊಂಡಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟರೋಹಿತ್ ಶರ್ಮಾ ಬಳಗ 7 ವಿಕೆಟ್ ನಷ್ಟದಲ್ಲಿ 177 ರನ್ ಕಲೆ ಹಾಕಿತು. ಕಠಿಣ ಗುರಿ ಬೆನ್ನತ್ತಿದ ಡೆಲ್ಲಿ 18.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಒಂದು ಹಂತದಲ್ಲಿ 104 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿಗೆ ಲಲಿತ್ ಯಾದವ್ ಹಾಗೂ ಅಕ್ಷರ್ ಪಟೇಲ್ ಮುರಿಯದ 7ನೇ ವಿಕೆಟ್‌ಗೆ 30 ಎಸೆತಗಳಲ್ಲಿ 75 ರನ್‌ಗಳ ಜೊತೆಯಾಟವಾಡಿ ರೋಚಕ ಗೆಲುವು ತಂದುಕೊಟ್ಟರು.
IPL 2022 DC vs MI ಸಂಪ್ರದಾಯ ಮುಂದುವರಿಸಿದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಗೆಲುವು!
ಇಶಾನ್ ಮಿಂಚಿನ ಆಟ: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್(41) ಹಾಗೂ ಇಶಾನ್ ಜೋಡಿ ಮೊದಲ ವಿಕೆಟ್‌ಗೆ 67 ರನ್ ಜೊತೆಯಾಟವಾಡಿತು. ತಿಲಕ್ ವರ್ಮಾ 22, ಟಿಮ್ ಡೇವಿಡ್ 12 ರನ್ ಕೊಡುಗೆ ನೀಡಿದರು. ಕೊನೆವರೆಗೂ ಕ್ರೀಸ್‌ನಲ್ಲಿ ಭದ್ರವಾಗಿ ನಿಂತ ಇಶಾನ್ 48 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಾಯದಿಂದ 81 ರನ್ ಗಳಿಸಿ ಔಟಾಗದೆ ಉಳಿದರು. ಕುಲ್ದೀಪ್ ಯಾದವ್ 4 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಪ್ರಮುಖ 3 ವಿಕೆಟ್ ಕಿತ್ತರು.
ಸ್ಕೋರ್:
ಮುಂಬೈ ಇಂಡಿಯನ್ಸ್ 20 ಓವರಲ್ಲಿ 177/7(ಇಶಾನ್ 81*, ರೋಹಿತ್ 41, ಕುಲ್ದೀಪ್ 3-18),
ಡೆಲ್ಲಿ ಕ್ಯಾಪಿಟಲ್ಸ್ 18.2 ಓವರಲ್ಲಿ 179/6(ಲಲಿತ್ 48*, ಪೃಥ್ವಿ 38, ಥಂಪಿ 3-35)
ಪಂದ್ಯಶ್ರೇಷ್ಠ: ಕುಲ್ದೀಪ್ ಯಾದವ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.