
ಮುಂಬೈ (ಏ. 19): ಸೂಪರ್ ಸ್ಟಾರ್ ವೇಗಿ ಜೋಸ್ ಹ್ಯಾಸಲ್ ವುಡ್ (25ಕ್ಕೆ 4) ಅವರ ಭರ್ಜರಿ ಬೌಲಿಂಗ್ ದಾಳಿಯ ನೆರವಿನಿಂದ 15ನೇ ಆವೃತ್ತಿಯ ಐಪಿಎಲ್ ನ (IPL 2022) 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ 18 ರನ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants ) ತಂಡವನ್ನು ಸೋಲಿಸಿದೆ. ಲೀಗ್ ನಲ್ಲಿ 5ನೇ ಗೆಲುವಿನೊಂದಿಗೆ ಆರ್ ಸಿಬಿ (RCB) ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ
ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ, ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) (96ರನ್, 64 ಎಸೆತ, 11 ಬೌಂಡರಿ, 2 ಸಿಕ್ಸರ್) ಶತಕ ವಂಚಿತ ಬ್ಯಾಟಿಂಗ್ ಸಾಹಸದಿಂದಾಗಿ 6 ವಿಕೆಟ್ ಗೆ 181 ಮೊತ್ತ ಬಾರಿಸಿತು. ಪ್ರತಿಯಾಗಿ ಲಕ್ನೋ (LSG) ತಂಡದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ತನ್ನ ಶಿಸ್ತಿನ ಬೌಲಿಂಗ್ ಮೂಲಕ ಕಟ್ಟಿಹಾಕುವಲ್ಲಿ ಆರ್ ಸಿಬಿ ಯಶ ಕಂಡಿತು. ಜೋಸ್ ಹ್ಯಾಸಲ್ ವುಡ್ (Josh Hazlewood) ಮಾತ್ರವಲ್ಲದೆ, ಮೊಹಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಹರ್ಷಲ್ ಪಟೇಲ್ ಅವರ ನಿಯಂತ್ರಿತ ದಾಳಿಯಿಂದ ಲಕ್ನೋ ತಂಡವನ್ನು 8 ವಿಕೆಟ್ ಗೆ 163 ರನ್ ಗೆ ಕಟ್ಟಿಹಾಕಿತು.
ಚೇಸಿಂಗ್ ಆರಂಭಿಸಿದ ಲಕ್ನೋ ತಂಡ ಎಚ್ಚರಿಕೆಯ ಬ್ಯಾಟಿಂಗ್ ಗೆ ಮುಂದಾಯಿತು. ವೇಗ ಹಾಗೂ ಬೌನ್ಸ್ ಗೆ ಪಿಚ್ ನೆರವೀಯುತ್ತಿದ್ದ ಕಾರಣಕ್ಕೆ ಜೋಸ್ ಹ್ಯಾಸಲ್ ವುಡ್ ಅವರ ಬೆಂಕಿಯಂಥ ಎಸೆತಗಳಲ್ಲಿ ಎದುರಿಸಲು ಕ್ವಿಂಟನ್ ಡಿ ಕಾಕ್ (3) ಹಾಗೂ ಕೆಎಲ್ ರಾಹುಲ್ (30ರನ್, 24 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ ತಡಕಾಡಿತು. ಮೊದಲ 17 ಎಸೆತಗಳಲ್ಲಿ 17 ರನ್ ಕೂಡಿಸಿದ ಈ ಜೋಡಿಯನ್ನು ಹ್ಯಾಸಲ್ ವುಡ್ ಬೇರ್ಪಡಿಸಿದರು. ಕ್ವಿಂಟನ್ ಡಿ ಕಾಕ್ ಮ್ಯಾಕ್ಸ್ ವೆಲ್ ಗೆ ಕ್ಯಾಚ್ ನೀಡುವುದರೊಂದಿಗೆ ಮೊದಲ ಆಘಾತ ಕಂಡಿತು.
IPL 2022 ನಾಯಕ ಡು ಪ್ಲೆಸಿಸ್ ಗೆ ತಪ್ಪಿದ ಶತಕ, ಆರ್ ಸಿಬಿ ಉತ್ತಮ ಮೊತ್ತ
ಬಳಿಕ ನಾಯಕ ಕೆಎಲ್ ರಾಹುಲ್ ಗೆ ಜೊತೆಯಾದ ರಾಜ್ಯದ ಸಹ ಆಟಗಾರ ಮನೀಷ್ ಪಾಂಡೆ (6) ತಮ್ಮ ಸಾಮರ್ಥ್ಯ ತೋರುವಲ್ಲಿ ವಿಫಲರಾದರು. 8 ಎಸೆತಗಳನ್ನು ಎದುರಿಸಿ 1 ಬೌಂಡರಿ ಸಿಡಿಸಿದ್ದ ಮನೀಷ್ ಪಾಂಡೆ, ಹ್ಯಾಸಲ್ ವುಡ್ ಎಸೆತದಲ್ಲಿ ಹರ್ಷಲ್ ಪಟೇಲ್ ಗೆ ಸುಲಭದ ಕ್ಯಾಚ್ ನೀಡಿ ಹೊರನಡೆದರು. 33 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಕೆಎಲ್ ರಾಹುಲ್ ಹಾಗೂ ಕೃನಾಲ್ ಪಾಂಡ್ಯ (42ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್) 3ನೇ ವಿಕೆಟ್ ಗೆ ಅಮೂಲ್ಯ 31 ರನ್ ಗಳ ಜೊತೆಯಾಟವಾಡಿ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ, ಇದು ಬಹಳ ಹೊತ್ತು ನಡೆಯಲಿಲ್ಲ. ಹರ್ಷಲ್ ಪಟೇಲ್ ಎಸೆತವೊಂದು ರಾಹುಲ್ ರ ಬ್ಯಾಟ್ ಗೆ ಬಡಿದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈಸೇರುವುದರೊಂದಿಗೆ ಕಳೆದ ಪಂದ್ಯದ ಶತಕವೀರ ರಾಹುಲ್ ಅವರ ಇನ್ನಿಂಗ್ಸ್ ಮುಕ್ತಾಯ ಕಂಡಿತು.
IPL 2022 ಆರ್ ಸಿಬಿ ವಿರುದ್ಧ ಟಾಸ್ ಗೆದ್ದ ಲಕ್ನೋ, ಬೌಲಿಂಗ್ ಆಯ್ಕೆ
64 ರನ್ ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ 4ನೇ ವಿಕೆಟ್ ಗೆ ಕೃನಾಲ್ ಪಾಂಡ್ಯ ಹಾಗೂ ದೀಪಕ್ ಹೂಡಾ (13) ಆಸರೆಯಾಗಿ ನಿಂತು ತಂಡವನ್ನು 100ರ ಗಡಿ ದಾಟಿಸಿದ್ದರು. ತಂಡದ ಮೊತ್ತ 100ರ ಗಡಿ ದಾಟಿದ ಬೆನ್ನಲ್ಲೇ ದೀಪಕ್ ಹೂಡಾ ವಿಕೆಟ್ ಒಪ್ಪಿಸಿದರೆ, ಈ ಮೊತ್ತಕ್ಕೆ 8 ರನ್ ಸೇರಿಸುವ ವೇಳೆಗೆ ಅರ್ಧಶತಕದತ್ತ ಧಾವಿಸುತ್ತಿದ್ದ ಕೃನಾಲ್ ಕೂಡ ಔಟಾದರು. ಕೃನಾಲ್ ಔಟಾಗುವುದರೊಂದಿಗೆ ಲಕ್ನೋ ತಂಡವನ್ನು ಗೆಲ್ಲಿಸುವ ಭಾರತ ಮಾರ್ಕಸ್ ಸ್ಟೋಯಿನಸ್ ಹಾಗೂ ಆಯುಷ್ ಬದೋನಿ ಮೇಲೆ ಬಿದ್ದಿತ್ತು. ಔಟ್ ಸೈಡ್ ಆಫ್ ಸ್ಟಂಪ್ ನತ್ತ ಹೆಚ್ಚಿನ ಎಸೆತಗಳನ್ನು ಹಾಕುವ ಮೂಲಕ ಕಾಡಿದ ಹ್ಯಾಸಲ್ ವುಡ್, ಬದೋನಿ ವಿಕೆಟ್ ಅನ್ನು ಉರುಳಿಸುವ ಮೂಲಕ ಸತತ 2ನೇ ಪಂದ್ಯದಲ್ಲಿ ಮೂರು ಹಾಗೂ ಅದಕ್ಕಿಂತ ಹೆಚ್ಚಿನ ವಿಕೆಟ್ ಸಾಧನೆ ಮಾಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.