IPL 2022: ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ..!

By Naveen Kodase  |  First Published May 7, 2022, 12:23 PM IST

* ಲಖನೌ ಸೂಪರ್‌ ಜೈಂಟ್ಸ್ ತಂಡಕ್ಕಿಂದು ಕೆಕೆಆರ್ ಸವಾಲು

* ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಕೋಲ್ಕತಾ ನೈಟ್ ರೈಡರ್ಸ್‌

* ಪ್ಲೇ ಆಫ್‌ ಹೊಸ್ತಿಲಲ್ಲಿದೆ ಲಖನೌ ಸೂಪರ್ ಜೈಂಟ್ಸ್‌


ಪುಣೆ(ಮೇ.07): 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 53ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ (Lucknow Super Giants) ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ (Kolkata Knight Riders) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕೆ ಇಲ್ಲಿನ ಎಂಸಿಎ ಮೈದಾನ ಆತಿಥ್ಯವನ್ನು ವಹಿಸಿದೆ. ಒಂದು ಕಡೆ ಕೆ.ಎಲ್. ರಾಹುಲ್ (KL Rahul) ನೇತೃತ್ವದ ಲಖನೌ ಸೂಪರ್ ಜೈಂಟ್ಸ್‌ ತಂಡವು ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಲು ಎದುರು ನೋಡುತ್ತಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡವು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯದ ಸೋಲು ಕೆಕೆಆರ್ ತಂಡದ ಪ್ಲೇ ಆಫ್‌ ಕನಸನ್ನು ನುಚ್ಚುನೂರು ಮಾಡುವ ಸಾಧ್ಯತೆಯಿದೆ. 

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಭಾರೀ ನಿರೀಕ್ಷೆ ಮೂಡಿಸಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌, ಸದ್ಯ ಲೀಗ್‌ ಹಂತದಲ್ಲೇ ಹೊರಬೀಳುವ ಭೀತಿಯಲ್ಲಿದ್ದು ಶನಿವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್‌ ತಂಡದ ಸವಾಲನ್ನು ಎದುರಿಸಲಿದೆ. ಸತತ 5 ಸೋಲುಗಳಿಂದ ಕಂಗೆಟ್ಟಿದ್ದ ಶ್ರೇಯಸ್‌ ಅಯ್ಯರ್‌ ಪಡೆಗೆ ಹಿಂದಿನ ಪಂದ್ಯದಲ್ಲಿ ಒಲಿದ ಗೆಲುವು ಆತ್ಮವಿಶ್ವಾಸ ಮರಳಿ ಪಡೆಯುವಂತೆ ಮಾಡಿದ್ದರೂ, ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವ ಒತ್ತಡ ಇದೆ.  ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆರೋನ್ ಫಿಂಚ್ (Aaron Finch) ಜವಾಬ್ದಾರಿಯುತ ಪ್ರದರ್ಶನ ತೋರುತ್ತಿಲ್ಲ. ನಾಯಕ ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ನಿತೀಶ್ ರಾಣಾ ಹಾಗೂ ಆಂಡ್ರೆ ರಸೆಲ್ ಅವರನ್ನು ಕೆಕೆಆರ್ ಬ್ಯಾಟಿಂಗ್‌ನಲ್ಲಿ ನೆಚ್ಚಿಕೊಂಡಿದ್ದಾರೆ. ಇನ್ನು ಸುನಿಲ್ ನರೈನ್ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುತ್ತಿದ್ದು, ಉಳಿದ ಬೌಲರ್‌ಗಳಿಂದ ಉತ್ತಮ ಸಾಥ್ ಸಿಗುತ್ತಿಲ್ಲ.

Tap to resize

Latest Videos

ಮತ್ತೊಂದೆಡೆ ಸತತ 3 ಗೆಲುವು ಕಂಡು ಲಯದಲ್ಲಿರುವ ಲಖನೌ ಸೂಪರ್ ಜೈಂಟ್ಸ್‌ ಈ ಪಂದ್ಯದಲ್ಲಿ ಗೆದ್ದರೆ, ಪ್ಲೇ-ಆಫ್‌ನಲ್ಲಿ ಸ್ಥಾನ ಬಹುತೇಕ ಖಚಿತವಾಗಲಿದೆ. ಕೆ.ಎಲ್‌ ರಾಹುಲ್, ಲಖನೌ ತಂಡದ ಪರ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಇದರ ಜತಗೆ ಮತ್ತೋರ್ವ ಆರಂಭಿಕ ಬ್ಯಾಟರ್‌ ಕ್ವಿಂಟನ್ ಡಿ ಕಾಕ್ ಕೂಡಾ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನುಳಿದಂತೆ ದೀಪಕ್ ಹೂಡಾ (Deepak Hooda), ಆಯುಷ್ ಬದೋನಿ, ಮಾರ್ಕಸ್ ಸ್ಟೋನಿಸ್, ಜೇಸನ್‌ ಹೋಲ್ಡರ್ ಹೀಗೆ ತಂಡದಲ್ಲಿ ಹಲವಾರು ಮ್ಯಾಚ್ ವಿನ್ನರ್‌ಗಳಿದ್ದು, ಯಾವುದೇ ಕ್ಷಣದಲ್ಲಿಯಾದರೂ ತಂಡವನ್ನು ಏಕಾಂಗಿಯಾಗಿ ಗೆಲುವಿನ ದಡ ಸೇರಿಸುವ ಕ್ಷಮತೆ ಹೊಂದಿದ್ದಾರೆ.

IPL 2022: ರಾಜಸ್ಥಾನ ರಾಯಲ್ಸ್‌-ಪಂಜಾಬ್‌ ಕಿಂಗ್ಸ್ ಹೈವೋಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆ

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಕೋಲ್ಕತಾ ನೈಟ್ ರೈಡರ್ಸ್‌
ಬಾಬಾ ಇಂದ್ರಜಿತ್, ಆರೋನ್ ಫಿಂಚ್, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಸುನಿಲ್ ನರೈನ್, ಅನ್ಕೂಲ್ ರಾಯ್, ಆಂಡ್ರೆ ರಸೆಲ್, ಉಮೇಶ್ ಯಾದವ್, ಟಿಮ್ ಸೌಥಿ, ಶಿವಂ ಮಾವಿ.

ಲಖನೌ ಸೂಪರ್ ಜೈಂಟ್ಸ್
ಕ್ವಿಂಟನ್‌ ಡಿ ಕಾಕ್, ಕೆ ಎಲ್‌. ರಾಹುಲ್ (ನಾಯಕ), ದೀಪಕ್ ಹೂಡಾ, ಮಾರ್ಕಸ್‌ ಸ್ಟೋನಿಸ್, ಕೃನಾಲ್ ಪಾಂಡ್ಯ, ಆಯುಷ್ ಬದೋನಿ, ಜೇಸನ್ ಹೋಲ್ಡರ್, ಜೇಸನ್ ಹೋಲ್ಡರ್, ದುಸ್ಮಂತ್ ಚಮೀರಾ, ಆವೇಶ್ ಖಾನ್, ಮೊಯ್ಸಿನ್ ಖಾನ್, ರವಿ ಬಿಷ್ಣೋಯಿ.

ಸ್ಥಳ: ಪುಣೆ, ಎಂಸಿಎ ಸ್ಟೇಡಿಯಂ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

click me!