IPL 2022: ಬೌಲಿಂಗ್ ಪರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ಪಾಸ್..!

Published : Mar 29, 2022, 08:24 AM IST
IPL 2022: ಬೌಲಿಂಗ್ ಪರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ಪಾಸ್..!

ಸಾರಾಂಶ

* 4 ಓವರ್‌ ಬೌಲಿಂಗ್ ಮಾಡಿ ಗಮನ ಸೆಳೆದ ಹಾರ್ದಿಕ್ ಪಾಂಡ್ಯ * ತಾವು ಸಂಪೂರ್ಣ ಫಿಟ್ ಆಗಿರುವುದಾಗಿ ಸಂದೇಶ ರವಾನಿಸಿದ ಬರೋಡ ಆಲ್ರೌಂಡರ್ * ಹಲವು ವಿಶೇಷ ಸಂಗತಿಗಳಿಗೆ ಸಾಕ್ಷಿಯಾದ ಗುಜರಾತ್-ಲಖನೌ ನಡುವಿನ ಪಂದ್ಯ

ಮುಂಬೈ(ಮಾ.29): ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಹಾಗೂ ತಂಡದ ಆಯ್ಕೆಗಾರರು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಬೆಳವಣಿಗೆ ಸೋಮವಾರ ಐಪಿಎಲ್‌ನಲ್ಲಿ ನಡೆಯಿತು. ಬಹಳ ದಿನಗಳ ಬಳಿಕ ಹಾರ್ದಿಕ್‌ ಪಾಂಡ್ಯ (Hardik Pandya) ಬೌಲಿಂಗ್‌ ಮಾಡಿ ತಾವು ಸಂಪೂರ್ಣ ಫಿಟ್‌ ಆಗಿರುವುದಾಗಿ ಸಾಬೀತುಪಡಿಸಿದರು. ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡವನ್ನು ಮುನ್ನಡೆಸಿದ ಹಾರ್ದಿಕ್‌, ಲಖನೌ ಸೂಪರ್‌ ಜೈಂಟ್ಸ್‌ (Lucknow Supergiants) ವಿರುದ್ಧದ ಪಂದ್ಯದಲ್ಲಿ 4 ಓವರ್‌ ಬೌಲ್‌ ಮಾಡಿದರು.

ಹಾರ್ದಿಕ್‌ ಐಪಿಎಲ್‌ನಲ್ಲಿ ತಮ್ಮ ಬೌಲಿಂಗ್‌ ಸಾಮರ್ಥ್ಯ ಸಾಬೀತುಪಡಿಸಿದರಷ್ಟೇ ಭಾರತ ತಂಡಕ್ಕೆ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ (BCCI) ಆಯ್ಕೆ ಸಮಿತಿ ಸ್ಪಷ್ಟಪಡಿಸಿತ್ತು. ಐಪಿಎಲ್‌ ಸಿದ್ಧತೆ ನಡುವೆಯೇ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಅವರ ಸೂಚನೆ ಮೇರೆಗೆ ಹಾರ್ದಿಕ್‌, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಗೆ ಆಗಮಿಸಿ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಯೋ-ಯೋ ಟೆಸ್ಟ್‌ (Yo Yo Test) ಹಾಗೂ ಬೌಲಿಂಗ್‌ ಪರೀಕ್ಷೆಯಲ್ಲಿ ಪಾಸಾದ ಬಳಿಕ ಅವರಿಗೆ ಐಪಿಎಲ್‌ನಲ್ಲಿ ಆಡಲು ಅನುಮತಿ ದೊರೆತಿತ್ತು. ಐಪಿಎಲ್‌ ಮುಗಿದ ಬಳಿಕ ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಹಾರ್ದಿಕ್‌ ಎದುರು ನೋಡುತ್ತಿದ್ದಾರೆ.

ಮೊದಲ ಅವಕಾಶದಲ್ಲೇ ಮಿಂಚಿದ ಬದೋನಿ!

ಲಖನೌ ತಂಡದ ಯುವ ಬ್ಯಾಟರ್‌ ಆಯುಷ್‌ ಬದೋನಿ ಐಪಿಎಲ್‌ ಪಾದಾರ್ಪಣಾ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೆಚ್ಚು ಜನರಿಗೆ ಪರಿಚಯವೇ ಇಲ್ಲದ ಡೆಲ್ಲಿಯ ಬದೋನಿಯನ್ನು ಲಖನೌ ತಂಡಕ್ಕೆ ಕರೆತಂದಿದ್ದು ತಂಡದ ಮಾರ್ಗದರ್ಶಕ ಗೌತಮ್‌ ಗಂಭೀರ್‌ (Gautam Gambhir). ಬದೋನಿ ಡೆಲ್ಲಿ ಪರ ಅಂಡರ್‌-16, ಅಂಡರ್‌-19 ಟೂರ್ನಿಗಳಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. 2 ವರ್ಷಗಳ ಹಿಂದೆ ಭಾರತ ಅಂಡರ್‌-19 ತಂಡದಲ್ಲಿದ್ದ ಅವರು, ಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದರು. ಬದೋನಿಯ ಪ್ರತಿಭೆಯನ್ನು ಗುರುತಿಸಿದ ಗಂಭೀರ್‌, ಅವರನ್ನು ಹರಾಜಿನಲ್ಲಿ ಖರೀದಿಸುವಂತೆ ಲಖನೌ ತಂಡಕ್ಕೆ ಸಲಹೆ ನೀಡಿದ್ದರು. 20 ಲಕ್ಷ ರು.ಗೆ ತಂಡ ಸೇರಿದ 22 ವರ್ಷದ ಬದೋನಿಯ ಬಾಲ್ಯದ ಕೋಚ್‌ ತಾರಕ್‌ ಸಿನ್ಹ, ರಿಷಭ್‌ ಪಂತ್‌ ಅವರ ಬಾಲ್ಯದ ಕೋಚ್‌ ಕೂಡ ಹೌದು ಎನ್ನುವುದು ವಿಶೇಷ.

ವೈರಿಗಳಾಗಿದ್ದ ಕೃನಾಲ್‌, ಹೂಡಾ ಈಗ ಸ್ನೇಹಿತರು!

ಕಿತ್ತಾಟದ ಮೂಲಕವೇ ಸುದ್ದಿಯಾಗಿದ್ದ ಕೃನಾಲ್‌ ಪಾಂಡ್ಯ (Krunal Pandya) ಹಾಗೂ ದೀಪಕ್‌ ಹೂಡಾ (Deepak Hooda) ಈ ಬಾರಿ ಐಪಿಎಲ್‌ನಲ್ಲಿ ಸ್ನೇಹಿತರಾಗಿ ಬದಲಾಗಿದ್ದಾರೆ. 2020ರಲ್ಲಿ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಕೃನಾಲ್‌ ಜೊತೆ ಗಲಾಟೆ ಮಾಡಿ ಹೂಡಾ ಬರೋಡ ತಂಡ ತೊರೆದಿದ್ದರು. ಹರಾಜಿನಲ್ಲಿ ಇಬ್ಬರನ್ನೂ ಲಖನೌ ತಂಡ ಖರೀದಿಸಿದ್ದು, ಸೋಮವಾರ ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಗಿಲ್‌ ಬಾರಿಸಿದ ಚೆಂಡು ಹೂಡಾ ಕೈ ಸೇರಿದಾಗ, ಅವರನ್ನು ಕೃನಾಲ್‌ ತಬ್ಬಿ ಸಂಭ್ರಮಿಸಿದರು. ಇದರ ಫೋಟೊ, ವಿಡಿಯೋ ವೈರಲ್‌ ಆಗಿದೆ.

IPL 2022 ಟಿವಾಟಿಯಾ ಅಬ್ಬರ, ಲಖನೌ ವಿರುದ್ಧ ಗುಜರಾತ್ ಟೈಟಾನ್ಸ್ ಗೆಲುವು!

ಮೊದಲ ಬಾರಿ ಹಾರ್ದಿಕ್‌, ಕೃನಾಲ್‌ ಮುಖಾಮುಖಿ !

ಗುಜರಾತ್‌ ಹಾಗೂ ಲಖನೌ ನಡುವಿನ ಪಂದ್ಯ ಸಹೋದರರ ಸವಾಲಿಗೆ ಸಾಕ್ಷಿಯಾಯಿತು. ಹಾರ್ದಿಕ್‌ ಹಾಗೂ ಕೃನಾಲ್‌ ಇದೇ ಮೊದಲ ಬಾರಿಗೆ ಮುಖಾಮುಖಿಯಾದರು. ಹಾರ್ದಿಕ್‌ ಗುಜರಾತ್‌ ನಾಯಕರಾಗಿದ್ದರೆ, ಕೃನಾಲ್‌ ಲಖನೌ ಪರ ಆಡುತ್ತಿದ್ದಾರೆ. ಪಂದ್ಯದಲ್ಲಿ ಹಾರ್ದಿಕ್‌ರನ್ನು ಕೃನಾಲ್‌ ಔಟ್‌ ಮಾಡಿದ್ದು ವಿಶೇಷ. ದೇಸಿ ಕ್ರಿಕೆಟ್‌ನಲ್ಲಿ ಬರೋಡಾವನ್ನು ಪ್ರತಿನಿಧಿಸುವ ಇವರಿಬ್ಬರು, ಟೀಂ ಇಂಡಿಯಾದಲ್ಲೂ ಒಟ್ಟಿಗೇ ಆಡಿದ್ದಾರೆ. ಐಪಿಎಲ್‌ನಲ್ಲಿ ಹಲವು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?