
ಬೆಂಗಳೂರು(ಮಾ.26): ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 15ನೇ ಸೀಸನ್ ಶನಿವಾರದಿಂದ ಆರಂಭವಾಗುತ್ತಾ ಇದೆ. ಕೋವಿಡ್-19ನಿಂದಾಗಿ (COVID 19) 2020ರಲ್ಲಿ ಯುಎಇ, 2021ರಲ್ಲಿ ಅರ್ಧ ಭಾರತ, ಇನ್ನಾರ್ಧ ಯುಎಇನಲ್ಲಿ ನಡೆದಿತ್ತು. ಈಗ ಎರಡು ವರ್ಷದ ನಂತರ ಪೂರ್ಣಪ್ರಮಾಣದಲ್ಲಿ ಭಾರತದಲ್ಲೇ ನಡೆಯುತ್ತಿದೆ. ಕಳೆದ 14 ಸೀಸನ್ನಲ್ಲಿ 2009ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2020ರಲ್ಲಿ ಯುಎಇನಲ್ಲಿ ಪೂರ್ಣ ಪ್ರಮಾಣದ ಐಪಿಎಲ್ ನಡೆದಿತ್ತು. ಈ ಎರಡು ವರ್ಷ ಬಿಟ್ರೆ ಉಳಿದ 12 ಸೀಸನ್ಗಳು ಭಾರತದಲ್ಲಿ ನಡೆದಿವೆ. ಮತ್ತೆ ಇಂಡಿಯನ್ ಪ್ರೀಮಿಯರ್ ಲೀಗ್ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದೆ.
ಈ ಸಲ ಎರಡು ರಾಜ್ಯಕ್ಕೆ ಸೀಮಿತವಾದ ಐಪಿಎಲ್:
ಭಾರತದಲ್ಲಿ IPL ನಡೆದಾಗಲೆಲ್ಲಾ 8ರಿಂದ 10 ನಗರಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಆದ್ರೆ ಈ ಸಲ ಕೋವಿಡ್ನಿಂದಾಗಿ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಮಾತ್ರ IPL ಮ್ಯಾಚ್ಗಳು ನಡೆಯಲಿವೆ. ಮರಾಠರ ನಾಡಿನಲ್ಲಿ ಲೀಗ್ ಮತ್ತು ಅಹಮದಾಬಾದ್ನಲ್ಲಿ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಫೈಟ್ ಸೇರಿದಂತೆ ಒಟ್ಟು 4 ನಾಕೌಟ್ ಪಂದ್ಯಗಳು ನಡೆಯಲಿವೆ. ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಿರೋದ್ರಿಂದ ಕಲರ್ ಫುಲ್ ಟೂರ್ನಿ ಮತ್ತಷ್ಟು ಕಲರ್ ಫುಲ್ ಆಗಿರಲಿದೆ.
10 ತಂಡಗಳು, 5 ಸ್ಟೇಡಿಯಂ, 74 ಪಂದ್ಯಗಳು
ಮಾರ್ಚ್ 26ರಿಂದ ಅಂದರೆ ಇಂದಿನಿಂದ ಆರಂಭವಾಗೋ 15ನೇ IPL, ಮೇ 29ರಂದು ಕೊನೆಗೊಳ್ಳಲಿದೆ. 62 ದಿನಗಳ ಕಾಲ 74 ಪಂದ್ಯಗಳು ಅಂದರೆ 70 ಲೀಗ್, 4 ನಾಕೌಟ್ ಮ್ಯಾಚ್ಗಳು ನಡೆಯಲಿವೆ. ಲೀಗ್ ಪಂದ್ಯಗಳು ಮಹಾರಾಷ್ಟ್ರದ ನಾಲ್ಕು ಸ್ಟೇಡಿಯಂನಲ್ಲಿ ಮತ್ತು ಫೈನಲ್ ಸೇರಿದಂತೆ ನಾಲ್ಕು ನಾಕೌಟ್ ಮ್ಯಾಚ್ಗಳು ಅಹಮದಾಬಾದ್ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿವೆ. ಅಲ್ಲಿಗೆ ಅಹಮದಾಬಾದ್, ಮುಂಬೈ ಮತ್ತು ಪುಣೆ ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಈ ಸಲ 10 ತಂಡಗಳು ಐಪಿಎಲ್ ಆಡುತ್ತಿವೆ.
ತವರಿನ ಪಿಚ್ನಲ್ಲಿ 4 ಪಂದ್ಯ ಆಡಲಿದೆ ಮುಂಬೈ ಇಂಡಿಯನ್ಸ್:
ತಟಸ್ಥ ಸ್ಥಳದಲ್ಲಿ ಐಪಿಎಲ್ ನಡೆಯೋದ್ರಿಂದ ಯಾವ ತಂಡವೂ ತವರಿನಲ್ಲಿ ಪಂದ್ಯ ಆಡುತ್ತಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಟೂರ್ನಿ ನಡೆಯೋದ್ರಿಂದ ಮುಂಬೈ ಇಂಡಿಯನ್ಸ್ಗೆ (Mumbai Indians) ಹೋಮ್ ಗ್ರೌಂಡ್ ವಾಂಖೆಡೆ ಸ್ಟೇಡಿಯಂನಲ್ಲಿ 4 ಪಂದ್ಯಗಳನ್ನ ಆಡಲು ಅವಕಾಶ ಮಾಡಿಕೊಡಲಾಗಿದೆ. ಇದರ ಲಾಭವನ್ನ ಮುಂಬೈ ಪಡೆಯುವ ಸಾಧ್ಯತೆಯೂ ಇದೆ. ಹಾಗೆ ಮುಂಬೈನ ಸ್ಟೇಡಿಯಂಗಳಲ್ಲಿ ಮತ್ತು ಪುಣೆಯಲ್ಲಿ ಮುಂಬೈ ಇಂಡಿಯನ್ಸ್ ಮ್ಯಾಚ್ಗಳನ್ನ ಆಡೋದ್ರಿಂದ ತವರಿನ ಪ್ರೇಕ್ಷಕರ ಬೆಂಬಲವೂ ಸಿಗುತ್ತದೆ. ಇನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ ಅಹಮದಾಬಾದ್ ತವರು. ಆದ್ರೆ ಇದೇ ಮೊದಲ ಸಲ ಐಪಿಎಲ್ ಆಡುತ್ತಿರುವ ಟೈಟಾನ್ಸ್, ಅಹಮದಾಬಾದ್ನಲ್ಲಿ ಅಭ್ಯಾಸ ಸಹ ಮಾಡಿಲ್ಲ. ಗುಜರಾತ್ ನಾಕೌಟ್ ಹಂತಕ್ಕೇರಿದ್ರೆ ಮಾತ್ರ ಆ ತಂಡ ಅಹದಾಬಾದ್ನಲ್ಲಿ ಪಂದ್ಯಗಳನ್ನಾಡಲಿದೆ. ಆಗ ತವರಿನ ಪ್ರೇಕ್ಷಕರ ಬೆಂಬಲ ಸಿಗುತ್ತದೆಯೇ ಹೊರತು, ಆ ಪಿಚ್ನಲ್ಲಿ ಆಡೋದು ಆ ತಂಡಕ್ಕೂ ಹೊಸದು.
8 ತಂಡಗಳಿಗೆ ಭಾರತೀಯರು. 2 ತಂಡಕ್ಕೆ ವಿದೇಶಿಯರು ಕ್ಯಾಪ್ಟನ್.
ಇದೇ ಮೊದಲ ಸಲ ಅನಿಸುತ್ತೆ. 8 ಮಂದಿ ಭಾರತೀಯ ಆಟಗಾರರು ಐಪಿಎಲ್ ಟೀಮ್ಗಳಿಗೆ ಕ್ಯಾಪ್ಟನ್ ಆಗಿರೋದು. ಇಷ್ಟು ವರ್ಷ ವಿದೇಶಿಯರೇ ಹೆಚ್ಚು ಇರುತ್ತಿದ್ದರು. ಆದ್ರೆ ಈ ಸಲ 10 ತಂಡಗಳ ಪೈಕಿ 8 ತಂಡಗಳಿಗೆ ಭಾರತೀಯ ನಾಯಕರಾಗಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಆರ್ಸಿಬಿ (RCB) ತಂಡಗಳಿಗೆ ಮಾತ್ರ ವಿದೇಶಿ ಆಟಗಾರರು ಕ್ಯಾಪ್ಟನ್ಗಳಾಗಿದ್ದಾರೆ. ಇನ್ನು ಸಿಎಸ್ಕೆಯ ರವೀಂದ್ರ ಜಡೇಜಾ(Ravindra Jadeja), ಆರ್ಸಿಬಿಯ ಫಾಫ್ ಡು ಪ್ಲೆಸಿಸ್, ಗುಜರಾತ್ ಟೈಟಾನ್ಸ್ನ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಪಂಜಾಬ್ ಕಿಂಗ್ಸ್ನ (Punjab Kings) ಮಯಾಂಕ್ ಅಗರ್ವಾಲ್ (Mayank Agarwal) ಫಸ್ಟ್ ಟೈಮ್ ಐಪಿಎಲ್ನಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಉಳಿದ 6 ಮಂದಿ ಈಗಾಗಲೇ ಐಪಿಎಲ್ನಲ್ಲಿ ನಾಯಕರಾಗಿ ಅನುಭವ ಹೊಂದಿದ್ದಾರೆ.
ಇಂದಿನಿಂದ ಐಪಿಎಲ್ ಹಬ್ಬ, 10 ತಂಡಗಳು ಪ್ರಶಸ್ತಿಗೆ ಪೈಪೋಟಿ..!
ಮುಂಬೈ ದಾಖಲೆ ಸರಿಗಟ್ಟುತ್ತಾ ಚೆನ್ನೈ..?:
ಹೌದು, 10 ತಂಡಗಳ ಪೈಕಿ ಎರಡು ತಂಡಗಳು ಮೊದಲ ಬಾರಿಗೆ ಐಪಿಎಲ್ ಆಡ್ತಿವೆ. ಆ ಎರಡು ತಂಡಗಳು ಸೇರಿದಂತೆ ಒಟ್ಟು 5 ತಂಡಗಳು ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆದ್ರೆ ಉಳಿದ ಐದು ಟೀಮ್ಸ್ ಮಾಜಿ ಚಾಂಪಿಯನ್ಸ್. ಮುಂಬೈ ಇಂಡಿಯನ್ಸ್ ದಾಖಲೆಯ ಐದು ಟ್ರೋಫಿ ಗೆದ್ದಿದೆ. 4 ಕಪ್ ಗೆದ್ದಿರುವ ಸಿಎಸ್ಕೆ (CSK) ಈ ಸಲ ಗೆದ್ದರೆ ಮುಂಬೈ ದಾಖಲೆ ಸರಿಗಟ್ಟಲಿದೆ.
ಮೊದಲ ಸಲ ಐಪಿಎಲ್ ಮಾದರಿಯಲ್ಲಿ ಬದಲಾವಣೆ..!
ಕಳೆದ 14 ವರ್ಷಗಳಿಂದ ಎಲ್ಲಾ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ತಲಾ ಎರಡೆರಡು ಬಾರಿ ಮುಖಾಮುಖಿಯಾಗುತ್ತಿದ್ದವು. ಆದರೆ ಈ ಸಲ ತಲಾ ಐದು ತಂಡಗಳಿರುವ ಎರಡು ಗ್ರೂಪ್ ಮಾಡಲಾಗಿದೆ. ಒಂದು ತಂಡ ತನ್ನ ಗ್ರೂಪ್ನಲ್ಲಿರುವ 4 ತಂಡಗಳ ವಿರುದ್ಧ ಎರೆಡೆರಡು ಬಾರಿ ಮತ್ತು ಇನ್ನೊಂದು ಗ್ರೂಪ್ನಲ್ಲಿರುವ ಐದು ತಂಡಗಳಲ್ಲಿ 4 ತಂಡಗಳ ವಿರುದ್ಧ ತಲಾ ಒಂದು ಮತ್ತು ಒಂದು ತಂಡದ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಲಿದೆ. ಅಲ್ಲಿಗೆ ಲೀಗ್ನಲ್ಲಿ ಒಂದು ತಂಡ 14 ಪಂದ್ಯಗಳನ್ನ ಆಡಲಿದೆ.
ಉದ್ಘಾಟನಾ ಸಮಾರಂಭ ಇಲ್ಲ:
ಕೋವಿಡ್-19 ಕಾರಣದಿಂದ ಈ ಸಲದ IPL ಉದ್ಘಾಟನಾ ಸಮಾರಂಭ ನಡೆಯುತ್ತಿಲ್ಲ. ಹೀಗಾಗಿ ಇಂದು ಸಮಾರಂಭವಿಲ್ಲದೆ ನೇರ ಪಂದ್ಯದೊಂದಿಗೆ 15ನೇ ಸೀಸನ್ ಕಿಕ್ ಆಫ್ ಆಗಲಿದೆ. ಇನ್ನು ಪಂದ್ಯಗಳು ಮಧ್ಯಾಹ್ನ 3.30 ಮತ್ತು ಸಂಜೆ 7.30ರಿಂದ ಆರಂಭವಾಗಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.