
ಮುಂಬೈ(ಏ.20): ತಂಡಕ್ಕೆ ಆವರಿಸಿದ ಕೊರೋನಾ ಸೋಂಕಿನ (Coronavirus) ಆತಂಕದ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಟ ಮುಂದುವರಿಸಲು ಸಿದ್ಧವಾಗಿದ್ದು, ಬುಧವಾರ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಸೆಣಸಾಡಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣ ಆತಿಥ್ಯವನ್ನು ವಹಿಸಿದೆ. ಎರಡೂ ತಂಡದಲ್ಲಿ ಬಲಾಢ್ಯ ಟಿ20 ಸ್ಪೆಷಲಿಸ್ಟ್ ಆಟಗಾರರಿರುವುದರಿಂದ ಅಭಿಮಾನಿಗಳಿಗೆ ಇಂದು ಭರಪೂರ ಮನರಂಜನೆ ದೊರೆಯುವ ಸಾಧ್ಯತೆಯಿದೆ.
ತಂಡದ ತಾರಾ ಆಲ್ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ಹಾಗೂ ಇತರೆ ಮೂವರು ಸಹಾಯಕ ಸಿಬ್ಬಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿನ ಲಕ್ಷಣ ಹೊಂದಿರುವ ಮಾರ್ಷ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರೆ ಉಳಿದೆಲ್ಲಾ ಆಟಗಾರರ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಬಂದಿದ್ದರಿಂದ ಅವರು ಆಡಲು ಸಿದ್ಧವಾಗಿದ್ದಾರೆ. ಮತ್ತೊಂದು ಸುತ್ತಿನ ಪರೀಕ್ಷೆ ಬಳಿಕವೂ ನೆಗೆಟಿವ್ ಬಂದರೆ ಬುಧವಾರ ನಿಗದಿಯಂತೆ ಪಂದ್ಯ ನಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಆರಂಭಿಕ ಬ್ಯಾಟರ್ ಪೃಥ್ವಿ ಶಾ (Prithvi Shaw) ಪವರ್-ಪ್ಲೇನಲ್ಲಿ ಅಬ್ಬರಿಸುತ್ತಿದ್ದು, ಡೇವಿಡ್ ವಾರ್ನರ್ (David Warner) ಬ್ಯಾಟಿಂಗ್ ಲಯ ಕಂಡುಕೊಂಡಿದ್ದಾರೆ. ನಾಯಕ ರಿಷಭ್ ಪಂತ್ ಮತ್ತೊಂದು ಸ್ಫೋಟಕ ಆಟಕ್ಕೆ ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ಮಯಾಂಕ್ ಅಗರ್‌ವಾಗಲ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ತಂಡ ಆಡಿರುವ 6 ಪಂದ್ಯಗಳಲ್ಲಿ ಮೂರರಲ್ಲಿ ಜಯಗಳಿಸಿದೆ. ಮಯಾಂಕ್ ಅಗರ್‌ವಾಲ್ (Mayank Agarwal), ಶಿಖರ್ ಧವನ್ (Shikhar Dhawan) ಬ್ಯಾಟಿಂಗ್ ಲಯ ಕಂಡುಕೊಂಡಿದ್ದು ತಂಡಕ್ಕೆ ಬಲ ಒದಗಿಸಿದೆ. ಸ್ಫೋಟಕ ಆಟಕ್ಕೆ ಹೆಸರುವಾಗಿರುವ ಲಿವಿಂಗ್‌ಸ್ಟೋನ್, ಶಾರುಖ್ ಖಾನ್ ಮತ್ತೊಂದು ಆಕರ್ಷಕ ಆಟದ ನಿರೀಕ್ಷೆಯಲ್ಲಿದ್ದಾರೆ. ಕಗಿಸೊ ರಬಾಡ (Kagiso Rabada) ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದು, ಇತರರಿಂದ ಸೂಕ್ತ ಬೆಂಬಲ ಸಿಕ್ಕರೆ ಮಾತ್ರ ಗೆಲುವು ಸುಲಭವಾಗಲಿದೆ.
IPL 2022 ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಆರ್ ಸಿಬಿ!
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಎರಡು ತಂಡಗಳು ಸಮಾನ ಪೈಪೋಟಿ ನಡೆಸಿವೆ. 28 ಪಂದ್ಯಗಳ ಪೈಕಿ ಪಂಜಾಬ್ ಕಿಂಗ್ಸ್ ತಂಡವು 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 13 ಪಂದ್ಯಗಳಲ್ಲಿ ಗೆಲುವಿನ ಕೇಕೆ ಹಾಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಸರ್ಫರಾಜ್ ಖಾನ್, ರಿಷಭ್ ಪಂತ್(ನಾಯಕ), ಲಲಿತ್ ಯಾದವ್, ರೋಮನ್ ಪೋವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹಮ್ಮದ್, ಮುಸ್ತಾಫಿಜುರ್ ರೆಹಮಾನ್.
ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಮಯಾಂಕ್ ಅಗರ್‌ವಾಲ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾನಿ ಬೇರ್‌ಸ್ಟೋವ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಓಡೆನ್ ಸ್ಮಿತ್, ಕಗಿಸೋ ರಬಾಡ, ವೈಭವ್ ಅರೋರ, ರಾಹುಲ್ ಚಹರ್, ಅಶ್‌ರ್‍ದೀಪ್ ಸಿಂಗ್.
ಸ್ಥಳ: ಮುಂಬೈ, ಬ್ರೆಬೋರ್ನ್ ಕ್ರೀಡಾಂಗಣ,
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪುಣೆ ಬದಲು ಮುಂಬೈನಲ್ಲಿ ಪಂದ್ಯ
ಡೆಲ್ಲಿ ತಂಡದಲ್ಲಿ ಕೋವಿಡ್ ಕಾಣಿಸಿಕೊಂಡ ಕಾರಣ ಪಂದ್ಯವನ್ನು ಪುಣೆ ಬದಲು ಮುಂಬೈಯ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ತಂಡ ಸದ್ಯ ಮುಂಬೈನಲ್ಲೇ ಇದ್ದು, ಪುಣೆಗೆ ಬಸ್ ಪ್ರಯಾಣದ ವೇಳೆ ಕೋವಿಡ್ ಮತ್ತಷ್ಟುಮಂದಿಗೆ ಹರಡುವ ಸಾಧ್ಯತೆ ಇರುವುದರಿಂದ ಮುಂಬೈನಲ್ಲೇ ಪಂದ್ಯ ನಡೆಸಲಾಗುತ್ತಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.