IPL 2022: ಪೃಥ್ವಿ ಶಾಗೆ ಜ್ವರ, ಖಾಸಗಿ ಆಸ್ಪತ್ರೆಗೆ ದಾಖಲು

By Kannadaprabha NewsFirst Published May 9, 2022, 12:03 PM IST
Highlights

* ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬಿಗ್ ಶಾಕ್‌

* ಪ್ಲೇ ಆಫ್‌ ಸ್ಥಾನ ಖಚಿತಪಡಿಸಿಕೊಳ್ಳಲು ಪರದಾಡುತ್ತಿದೆ ಡೆಲ್ಲಿ ಕ್ಯಾಪಿಟಲ್ಸ್‌

* ಇದೆಲ್ಲದರ ನಡುವೆ ಜ್ವರದಿಂದ ಬಳಲುತ್ತಿರುವ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ಆರಂಭಿಕ ಪೃಥ್ವಿ ಶಾ (Prithvi Shah) ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕೋವಿಡ್‌ ಪರೀಕ್ಷಾ ವರದಿಗಳು ನೆಗೆಟಿವ್‌ ಎಂದು ಬಂದಿದ್ದು, ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಾವು ಆಸ್ಪತ್ರೆಗೆ ದಾಖಲಾದ ವಿಷಯವನ್ನು ಸ್ವತಃ ಪೃಥ್ವಿ, ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ. ಅವರು ಮುಂದಿನ ಪಂದ್ಯಕ್ಕೂ ಲಭ್ಯರಾಗುವ ಸಾಧ್ಯತೆ ಕಡಿಮೆ.

ಭಾನುವಾರದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು 91 ರನ್‌ಗಳ ಅಂತರದ ಹೀನಾಯ ಸೋಲು ಕಾಣುವ ಮೂಲಕ ಪ್ಲೇ ಆಫ್‌ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ. ಬೌಲಿಂಗ್‌ನಲ್ಲಿ ಸಾಕಷ್ಟು ದುಬಾರಿಯಾಗಿದ್ದ ಡೆಲ್ಲಿ ತಂಡವು ಆ ಬಳಿಕ ಬ್ಯಾಟಿಂಗ್‌ನಲ್ಲೂ ವೈಫಲ್ಯ ಅನುಭವಿಸಿತು. 

ಡೆಲ್ಲಿ ತಂಡಕ್ಕೆ ಮತ್ತೆ ಕೋವಿಡ್‌ ಕಾಟ

ಭಾನುವಾರ ಬೆಳಗ್ಗೆ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಡೆಲ್ಲಿ ತಂಡದ ನೆಟ್‌ ಬೌಲರ್‌ಗೆ ಸೋಂಕು ತಗುಲಿರುವುದು ದೃಢಪಟ್ಟ ಕಾರಣ, ಇಡೀ ತಂಡವನ್ನು ಕೆಲ ಗಂಟೆಗಳ ಕಾಲ ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಚೆನ್ನೈ ವಿರುದ್ಧದ ಪಂದ್ಯ ನಡೆಯುವುದು ಅನುಮಾನವೆನಿಸಿತ್ತು. ಆದರೆ ಮತ್ತೊಮ್ಮೆ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಯಿತು. ಎಲ್ಲರ ವರದಿ ನೆಗೆಟಿವ್‌ ಬಂದ ಬಳಿಕ ಪಂದ್ಯಕ್ಕೆ ಹಸಿರು ನಿಶಾನೆ ದೊರೆಯಿತು.

4ನೇ ಬಾರಿ ಚೆನ್ನೈ 200+ ಮೊತ್ತ: ಮೊದಲ ತಂಡ

ನವಿ ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ನಾಲ್ಕು ಬಾರಿ ಇನ್ನಿಂಗ್‌್ಸನಲ್ಲಿ 200ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ತಂಡ ಎನ್ನುವ ಹಿರಿಮೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪಾತ್ರವಾಗಿದೆ. ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದರೂ, ಚೆನ್ನೈ ಈ ಮೈಲಿಗಲ್ಲು ತಲುಪಿರುವುದು ವಿಶೇಷ. ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ 20 ಓವರಲ್ಲಿ 6 ವಿಕೆಟ್‌ಗೆ 208 ರನ್‌ ಗಳಿಸಿತು. ಡೆವೊನ್‌ ಕಾನ್‌ವೇ 87, ಋುತುರಾಜ್‌ ಗಾಯಕ್ವಾಡ್‌ 41, ಶಿವಂ ದುಬೆ 32 ಹಾಗೂ ಎಂ.ಎಸ್‌.ಧೋನಿ ಔಟಾಗದೆ 21 ರನ್‌ ಗಳಿಸಿದರು.

IPL 2022: ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೀನಾಯ ಸೋಲು

ಆರ್‌ಸಿಬಿ ವಿರುದ್ಧ 216, ಲಖನೌ ಸೂಪರ್‌ಜೈಂಟ್‌ ವಿರುದ್ಧ 211, ಸನ್‌ರೈಸ​ರ್‍ಸ್ ವಿರುದ್ಧ 202 ರನ್‌ ಕಲೆಹಾಕಿತ್ತು. ಈ ಆವೃತ್ತಿಯಲ್ಲಿ ಒಟ್ಟು 14 ಬಾರಿ 200ಕ್ಕಿಂತಲೂ ಹೆಚ್ಚು ಮೊತ್ತ ದಾಖಲಾಗಿದ್ದು, ರಾಜಸ್ಥಾನ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ತಲಾ 3 ಬಾರಿ ಈ ಮೈಲಿಗಲ್ಲು ತಲುಪಿವೆ. ಆರ್‌ಸಿಬಿ, ಕೆಕೆಆರ್‌, ಲಖನೌ ಹಾಗೂ ಪಂಜಾಬ್‌ ಕಿಂಗ್‌್ಸ ತಲಾ ಒಮ್ಮೆ ಇನ್ನಿಂಗ್‌್ಸನಲ್ಲಿ 200ಕ್ಕಿಂತಲೂ ಹೆಚ್ಚು ರನ್‌ ಗಳಿಸಿವೆ.

ಕೌಂಟಿ: ಸತತ 4ನೇ ಶತಕ ಗಳಿಸಿದ ಪೂಜಾರ!

ಹೋವ್‌: ಭಾರತ ಟೆಸ್ಟ್‌ ತಂಡದಿಂದ ಹೊರಬಿದ್ದು, ಐಪಿಎಲ್‌ನಲ್ಲೂ ಆಡುವ ಅವಕಾಶ ಪಡೆಯದ ಚೇತೇಶ್ವರ್‌ ಪೂಜಾರ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಉತ್ಕೃಷ್ಟಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದ್ದಾರೆ. ಸತತ 4ನೇ ಪಂದ್ಯದಲ್ಲಿ ಅವರು ಶತಕ ಬಾರಿಸಿದ್ದು, ಮತ್ತೆ ಭಾರತ ತಂಡದ ಕದ ತಟ್ಟುತ್ತಿದ್ದಾರೆ. ಸಸೆಕ್ಸ್‌ ಪರ ಆಡುತ್ತಿರುವ ಅವರು, ಮಿಡ್ಲ್‌ಸೆಕ್ಸ್‌ ವಿರುದ್ಧ ಭಾನುವಾರ ಮುಕ್ತಾಯಗೊಂಡ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 170 ರನ್‌ ಗಳಿಸಿ ಔಟಾಗದೆ ಉಳಿದರು. ಹಿಂದಿನ 3 ಪಂದ್ಯಗಳಲ್ಲಿ 2 ಬಾರಿ ದ್ವಿಶತಕ ಸಹ ಬಾರಿಸಿದ್ದರು. 4 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಅವರು ಒಟ್ಟು 717 ರನ್‌ ಕಲೆಹಾಕಿದ್ದಾರೆ.

click me!