
ಮುಂಬೈ(ಮಾ.26): ರವೀಂದ್ರ ಜಡೇಜಾ (Ravindra Jadeja) vs ಶ್ರೇಯಸ್ ಅಯ್ಯರ್(Shreyas Iyer) ಇಬ್ಬರು ನೂತನ ನಾಯಕರು 2022ರ ಐಪಿಎಲ್‌ಗೆ (IPL 2022) ಭರ್ಜರಿ ಆರಂಭ ಒದಗಿಸಲು ಸಜ್ಜಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಗೂ ಕೋಲ್ಕತಾ ನೈಟ್ರೈಡರ್ಸ್ (Kolkata Knight Riders) ನಡುವಿನ ಪಂದ್ಯ ಕಳೆದ ಆವೃತ್ತಿಯ ಫೈನಲ್‌ನ ‘ರೀ ಮ್ಯಾಚ್’ನಂತೆ ಇರಲಿದೆ. ಎಂ.ಎಸ್.ಧೋನಿ (MS Dhoni) ಚೆನ್ನೈ ತಂಡದಲ್ಲಿ ಕೇವಲ ಆಟಗಾರನಾಗಿ ಆಡಿದ್ದು ಕೇವಲ ಒಮ್ಮೆ ಮಾತ್ರ. ಅದು 2012ರ ಚಾಂಪಿಯನ್ಸ್ ಲೀಗ್‌ನ ಯಾರ್ಕ್ಶೈರ್ ವಿರುದ್ಧದ ಪಂದ್ಯದಲ್ಲಿ. ಸುರೇಶ್ ರೈನಾ (Suresh Raina) ಆ ಪಂದ್ಯಕ್ಕೆ ನಾಯಕರಾಗಿದ್ದರು. ದಶಕದ ಬಳಿಕ ಧೋನಿ ತೆರೆ ಮರೆಗೆ ಸರಿದ ಮೇಲಿನ ಜೀವನಕ್ಕೆ ಚೆನ್ನೈ ಸಿದ್ಧತೆ ನಡೆಸಿದೆ.
ಜಡೇಜಾಗೆ ನಾಯಕನಾಗಿ ಮೊದಲ ಪಂದ್ಯದಲ್ಲಿ ಕೆಲ ಗೊಂದಲಗಳು ಎದುರಾಗಲಿದ್ದು, ಮೊದಲ ಆಯ್ಕೆಯ ಆಟಗಾರರ ಅನುಪಸ್ಥಿತಿಯನ್ನು ನಿಭಾಯಿಸುವ ಹೊಣೆ ಹೆಗಲೇರಿದೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ದೀಪಕ್ ಚಹರ್ (Deepak Chahar) ಈ ಆವೃತ್ತಿಯ ಬಹುತೇಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಮೋಯಿನ್ ಅಲಿ (Moeen Ali) ಮುಂಬೈ ತಲುಪಿದ್ದರೂ ಅವರ ಕ್ವಾರಂಟೈನ್ ಅವಧಿ ಇನ್ನೂ ಮುಗಿದಿಲ್ಲ. ಹೀಗಾಗಿ ಮೊದಲ ಪಂದ್ಯಕ್ಕೆ ಅವರು ಅಲಭ್ಯರಾಗಲಿದ್ದಾರೆ. ಶ್ರೇಯಸ್ ಅಯ್ಯರ್‌ಗೂ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಲಿದೆ. ಅಲೆಕ್ಸ್ ಹೇಲ್ಸ್ ಟೂರ್ನಿಯಿಂದ ಹಿಂದೆ ಸರಿದ ಬಳಿಕ ಅವರ ಬದಲು ಆ್ಯರೋನ್ ಫಿಂಚ್‌ರನ್ನು (Aaron Finch) ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಪಾಕಿಸ್ತಾನ ಪ್ರವಾಸದಲ್ಲಿರುವ ಫಿಂಚ್ ಮೊದಲ 5 ಪಂದ್ಯಗಳಿಗೆ ಲಭ್ಯರಿಲ್ಲ. ಇನ್ನು ಕೆಲ ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಿಮ್ ಸೌಥಿ ತಡವಾಗಿ ಬಯೋಬಬಲ್ ಪ್ರವೇಶಿಸಿದ್ದು, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ.
ಕಾನ್‌ವೇ ಕಣಕ್ಕೆ?: ಮೋಯಿನ್ ಅಲಿ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್‌ನ ಡೆವೊನ್ ಕಾನ್‌ವೇಗೆ ಅವಕಾಶ ಸಿಗುವುದು ಬಹುತೇಕ ಖಚಿತ ಎನಿಸಿದೆ. ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್, ಕಾನ್‌ವೇ ಜೊತೆ ಕಳೆದ ವರ್ಷ ಟಿ20 ವಿಶ್ವಕಪ್ ಅಭ್ಯಾಸ ಶಿಬಿರದಲ್ಲಿ ಕೆಲಸ ಮಾಡಿದ್ದಾರೆ. ಕಾನ್‌ವೇ ಸ್ಪಿನ್ನರ್‌ಗಳ ಎದುರು ಉತ್ತಮ ದಾಖಲೆ ಹೊಂದಿದ್ದು, ಚೆನ್ನೈ ತಂಡ ಅವರನ್ನು ಫ್ಲೋಟರ್ ಆಗಿ ಉಪಯೋಗಿಸಿಕೊಳ್ಳಬಹುದು. ಸ್ಪಿನ್ ದಾಳಿ ಎದುರು ಕಾನ್‌ವೇ 61.63ರ ಸರಾಸರಿ ಹೊಂದಿದ್ದು, 134.65ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
IPL 2022: ಸಿಎಸ್‌ಕೆ ಪಾಲಿಗೆ ಗುಡ್ ನ್ಯೂಸ್, ಎರಡನೇ ಪಂದ್ಯಕ್ಕೆ ಸ್ಟಾರ್ ಆಟಗಾರ ಲಭ್ಯ..!
ಇನ್ನು ಕೆಕೆಆರ್ (KKR) ತಂಡವು ಸೌಥಿ ಅನುಪಸ್ಥಿತಿಯಲ್ಲಿ ಶ್ರೀಲಂಕಾದ ಆಲ್ರೌಂಡರ್ ಚಾಮಿಕ ಕರುಣರತ್ನೆ ಅವರನ್ನು ಐಪಿಎಲ್‌ಗೆ ಪರಿಚಯಿಸಬಹುದು. ಎರಡೂ ತಂಡಗಳು ಟೂರ್ನಿಯಲ್ಲಿ ಶುಭಾರಂಭ ಮಾಡಲು ಕಾಯುತ್ತಿದ್ದು, ಭರ್ಜರಿ ಪೈಪೋಟಿ ನಿರೀಕ್ಷೆ ಮಾಡಬಹುದಾಗಿದೆ.
ಒಟ್ಟು ಮುಖಾಮುಖಿ: 25
ಚೆನ್ನೈ: 17
ಕೆಕೆಆರ್: 08
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಋುತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಡೆವೊನ್ ಕಾನ್‌ವೇ, ಅಂಬಟಿ ರಾಯುಡು, ರವೀಂದ್ರ ಜಡೇಜಾ(ನಾಯಕ), ಶಿವಂ ದುಬೆ, ಎಂ.ಎಸ್.ಧೋನಿ, ಡ್ವೇನ್ ಬ್ರಾವೋ, ರಾಜವರ್ಧನ್ ಹಂಗ್ರೇಕರ್, ಜೋರ್ಡನ್/ತೀಕ್ಷಣ, ಆ್ಯಡಂ ಮಿಲ್ನೆ.
ಕೆಕೆಆರ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್(ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಚಾಮಿಕ ಕರುಣರತ್ನೆ, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್/ರಸಿಖ್ ಸಲಾಂ.
ಪಂದ್ಯ ಆರಂಭ: ಸಂಜೆ 7.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಟ್
ವಾಂಖೇಡೆ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿರಲಿದೆ. 2ನೇ ಇನ್ನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇರುವ ಕಾರಣ, ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 180-190 ರನ್ ಗಳಿಸಿದರಷ್ಟೇ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಬಹುದು. ವೇಗಿಗಳಿಗೆ ಪಿಚ್ ನೆರವು ನೀಡುವ ಸಾಧ್ಯತೆ ಹೆಚ್ಚು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.