IPL 2022 ಖಲೀಲ್ ಅಹ್ಮದ್ ಸೂಪರ್ ದಾಳಿ, 5ನೇ ಗೆಲುವು ಕಂಡ ಡೆಲ್ಲಿ

By Santosh NaikFirst Published May 5, 2022, 11:34 PM IST
Highlights

ಖಲೀಲ್ ಅಹ್ಮದ್ (30ಕ್ಕೆ 3) ಭರ್ಜರಿ ಬೌಲಿಂಗ್ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಹಳಿಗೆ ಬಂದಿದೆ. ಸ್ಥಿರ ನಿರ್ವಹಣೆ ತೋರುವಲ್ಲಿ ಎಡವುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಲೀಗ್ ನಲ್ಲಿ5ನೇ ಗೆಲುವು ಎನಿಸಿದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಮುಂಬೈ (ಮೇ.5): ನಿಕೋಲಸ್ ಪೂರನ್ (Nicholas Pooran) ಹೋರಾಟದ ಇನ್ನಿಂಗ್ಸ್ ನಡುವೆಯೂ ನಿರಂತರವಾಗಿ ಸನ್ ರೈಸರ್ಸ್ ಹೈದರಾಬಾದ್ ( Sunrisers Hyderabad ) ತಂಡದ ವಿಕೆಟ್ ಉರುಳಿಸಲು ಯಶಸ್ವಿಯಾದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ತನ್ನ 5ನೇ ಗೆಲುವು ಕಂಡಿದೆ. 208 ರನ್ ಗಳ ಚೇಸಿಂಗ್ ನಲ್ಲಿ ಹಿನ್ನಡೆ ಕಂಡ ಸನ್ ರೈಸರ್ಸ್ ಹೈದರಾಬಾದ್ (SRH) 21 ರನ್ ಗಳ ಸೋಲು ಕಂಡಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಅಬ್ಬರದ ಆಟವಾಡುವ ಮೂಲಕ ಗಮನಸೆಳೆಯಿತು. ಡೇವಿಡ್ ವಾರ್ನರ್ (92*ರನ್, 58ಎಸೆತ, 12 ಬೌಂಡರಿ, 3 ಸಿಕ್ಸರ್) ಹಾಗೂ ರೋವ್ ಮನ್ ಪಾವೆಲ್ (67*ರನ್, 35 ಎಸೆತ, 3 ಬೌಂಡರಿ, 6 ಸಿಕ್ಸರ್) ಅವರ ಸಿಡಿಲಬ್ಬರದ ಅರ್ಧಶತಕಗಳ ನೆರವಿನಿಂದ 3 ವಿಕೆಟ್ ಗೆ 207 ರನ್ ಬಾರಿಸಿತು. ಪ್ರತಿಯಾಗಿ ಸನ್ ರೈಸರ್ಸ್ ಹೈದರಾಬಾದ್, ನಿಕೋಲಸ್ ಪೂರನ್ (62ರನ್, 34 ಎಸೆತ, 2 ಬೌಂಡರಿ, 6 ಸಿಕ್ಸರ್) ಸ್ಫೋಟಕ ಇನ್ನಿಂಗ್ಸ್ ನ ನಡುವೆಯೂ 8 ವಿಕೆಟ್ ಗೆ 186 ರನ್ ಕಲೆ ಹಾಕಿ ಸೋಲು ಕಂಡಿತು.

ಚೇಸಿಂಗ್ ಮಾಡಲು ಆರಂಭಿಸಿದ ಸನ್ ರೈಸರ್ಸ್ ತಂಡಕ್ಕೆ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬೇಕಾದಂಥ ಆರಂಭ ಸಿಗಲಿಲ್ಲ. ಹಾಲಿ ಆವೃತ್ತಿಯಲ್ಲಿ ಸನ್ ರೈಸರ್ಸ್ ತಂಡದ ಪರವಾಗಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುವ ಅಭಿಷೇಕ್ ವರ್ಮ(7) ಹಾಗೂ ನಾಯಕ ಕೇನ್ ವಿಲಿಯಮ್ಸನ್ (4) ತಂಡದ ಮೊತ್ತ 25 ರನ್ ದಾಟುವ ಮುನ್ನವೇ ಡಗ್ ಔಟ್ ಗೆ ಸೇರಿದ್ದರು. ಖಲೀಲ್ ಅಹ್ಮದ್ ಎಸೆತದಲ್ಲಿ ಅಭಿಷೇಕ್ ಶರ್ಮ ಮೊದಲಿಗರಾಗಿ ವಿಕೆಟ್ ಒಪ್ಪಿಸಿದರೆ, ನಾಯಕ ಕೇನ್ ವಿಲಿಯಮ್ಸನ್, ಆನ್ರಿಚ್ ನೋಕಿಯೆ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ತಂಡ ರಾಹುಲ್ ತ್ರಿಪಾಠಿ ಮೇಲೆ ಹೆಚ್ಚಿನ ಭರವಸೆ ಇಟ್ಟಿತ್ತು. ಅದರಂತೆಯೇ ಬ್ಯಾಟಿಂಗ್ ಆರಂಭಿಸಿದ್ದ ತ್ರಿಪಾಠಿ 18 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಇದ್ದ 22 ರನ್ ಸಿಡಿಸಿದ್ದ ವೇಳೆ ಮಿಚೆಲ್ ಮಾರ್ಷ್ ಗೆ ವಿಕೆಟ್ ನೀಡಿದರು.

IPL 2022 ವಾರ್ನರ್, ಪಾವೆಲ್ ಮಿಂಚಿನ ಬ್ಯಾಟಿಂಗ್, ಡೆಲ್ಲಿ ಬೃಹತ್ ಮೊತ್ತ

37 ರನ್ ಗ 3 ವಿಕೆಟ್ ಕಳೆದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಆಗಲೇ ಸೋಲಿನ ನಿರೀಕ್ಷೆ ಆರಂಭ ಮಾಡಿತ್ತು. ಈ ಹಂತದಲ್ಲಿ ಜೊತೆಯಾದ ಏಡೆನ್ ಮಾರ್ಕ್ರಮ್ (42ರನ್, 25 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ನಿಕೋಲಸ್ ಪೂರನ್ 4ನೇ ವಿಕೆಟ್ ಗೆ ಅಮೂಲ್ಯ 60 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದ್ದಲ್ಲದೆ ಗೆಲುವಿನ ಹೋರಾಟದಲ್ಲಿ ಉಳಿಯವಂತೆ ಮಾಡಿದ್ದರು. ಅದ್ಭುತ ಆಟವಾಡಿದ ಮಾರ್ಕ್ರಮ್, ಡೆಲ್ಲಿ ಕ್ಯಾಪಿಟಲ್ಸ್ ನ ಪ್ರಮುಖ ಬೌಲರ್ ಗಳನ್ನು ದಂಡಿಸಿ ಮೂರು ಆಕರ್ಷಕ ಸಿಕ್ಸರ್ಸ್ ಚಚ್ಚಿದ್ದರು. ಕೇವಲ 35 ಎಸೆತಗಳಲ್ಲಿ 60 ರನ್ ಗಳ ಅಬ್ಬರದ ಜೊತೆಯಾಟ ಡೆಲ್ಲಿ ತಂಡಕ್ಕೆ ಸೋಲಿನ ಭೀತಿ ನೀಡಿತ್ತು.

IPL 2022: ನಾಯಕತ್ವದಿಂದ ಕೆಳಗಿಳಿದಿದ್ದು ಧೋನಿಯ ತಪ್ಪು ನಿರ್ಧಾರವೆಂದ ಸೆಹ್ವಾಗ್..!

13ನೇ ಓವರ್ ನ ಕೊನೆಯ ಎಸೆತದಲ್ಲಿ ಮಾರ್ಕ್ರಮ್, ಖಲೀಲ್ ಅಹ್ಮದ್ ಗೆ ವಿಕೆಟ್ ನೀಡಿದ ಬಳಿಕ ನಿಕೋಲಸ್ ಪೂರನ್ ಬ್ಯಾಟಿಂಗ್ ಚಾರ್ಜ್ ತೆಗೆದುಕೊಂಡರು. 5ನೇ ವಿಕೆಟ್ ಗೆ ಶಶಾಂಕ್ ಸಿಂಗ್ (10) ಜೊತೆ 27 ರನ್ ಗಳ ಜೊತೆಯಾಟವಾಡಿದರು. ಇದರಲ್ಲಿ ಪೂರನ್ ಅವರೇ ಗರಿಷ್ಠ ರನ್ ಬಾರಿಸಿದ್ದರು. ಶಾರ್ದೂಲ್ ಠಾಕೂರ್ ಶಶಾಂಕ್ ಸಿಂಗ್ ಅವರನ್ನು ಡಗ್ ಔಟ್ ಗೆ ಅಟ್ಟಿದ್ದರೆ, ಸೀನ್ ಅಬ್ಬೋಟ್, ಪೂರನ್ ಅವರೊಂದಿಗೆ ತಂಡ ಮೊತ್ತ 150ರ ಗಡಿ ದಾಟುವವರೆಗೂ ಮೈದಾನದಲ್ಲಿದ್ದರು. ಈ ಅವಧಿಯಲ್ಲಿ ಪೂರನ್ 29 ಎಸೆತಗಳ ತಮ್ಮ ಅರ್ಧಶತಕವನ್ನೂ ಪೂರ್ತಿ ಮಾಡಿದ್ದರು. 18ನೇ ಓವರ್ ನ 5ನೇ ಎಸೆತದಲ್ಲಿ ಪೂರನ್ ಔಟಾಗುವವರೆಗೂ ಸನ್ ರೈಸರ್ಸ್ ಹೈದರಾಬಾದ್ ಅಚ್ಚರಿಯ ಗೆಲುವು ಸಾಧಿಸಬಹುದೆಂಬ ಆಕಾಂಕ್ಷೆಯಲ್ಲಿತ್ತು. ಆದರೆ, ಪೂರನ್ ನಿರ್ಗಮನದೊಂದಿಗೆ ತಂಡದ ಸೋಲು ಖಚಿತವಾಯಿತು.

click me!