ಚೆನ್ನೈ ಬೌಲಿಂಗ್ ಚಿತ್ರಾನ್ನ, ಐಪಿಎಲ್ ಇತಿಹಾಸದ 4ನೇ ಯಶಸ್ವಿ ಚೇಸಿಂಗ್ ನಡೆಸಿದ ಕೆಎಲ್ ರಾಹುಲ್ ಟೀಮ್!

By Santosh Naik  |  First Published Apr 1, 2022, 12:24 AM IST

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎಲ್ ಎಸ್ ಜಿ ಬ್ಯಾಟಿಂಗ್ ಪಾರಮ್ಯ

2022ರ ಐಪಿಎಲ್ ನ ಅತಿವೇಗದ ಅರ್ಧಶತಕ ಬಾರಿಸಿದ ಎವಿನ್ ಲೆವಿಸ್

ಆಯುಶ್ ಬದೋನಿ ಆಟಕ್ಕೆ ಬೆರಗಾದ ಕ್ರಿಕೆಟ್ ಫ್ಯಾನ್ಸ್


ಮುಂಬೈ (ಮಾ. 31): ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ( Chennai Super Kings) ತಂಡದ ಮಹಾಬಲಿಷ್ಠ ಬೌಲಿಂಗ್ ವಿಭಾಗವನ್ನು ಲೆಕ್ಕಕ್ಕಿಲ್ಲದಂತೆ ಎದುರಿಸಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants ) ತಂಡ ಐಪಿಎಲ್ (IPL) ಇತಿಹಾಸದ ನಾಲ್ಕನೇ ಯಶಸ್ವಿ ಚೇಸಿಂಗ್ ಮಾಡಿದ ದಾಖಲೆ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ನೀಡಿದ 211 ರನ್ ಗಳ ಮಹಾ ಸವಾಲನ್ನು ಇನ್ನೂ ಮೂರು ಎಸೆತಗಳಿರುವಂತೆ ಬೆನ್ನಟ್ಟಿದ ಎಲ್ ಎಸ್ ಜಿ (LSG) 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ತನ್ನ ಮೊದಲ ಗೆಲುವು ದಾಖಲಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸತತ 2ನೇ ಸೋಲು ಕಂಡಿತು.

ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಬಿನ್ ಉತ್ತಪ್ಪ (50ರನ್, 27 ಎಸೆತ, 8 ಬೌಂಡರಿ, 1 ಸಿಕ್ಸರ್) ಆಕರ್ಷಕ ಅರ್ಧಶತಕ ಹಾಗೂ ಶಿವಂ ದುಬೆ (49), ಅಂಬಟಿ ರಾಯುಡು (27), ನಾಯಕ ರವೀಂದ್ರ ಜಡೇಜಾ (17) ಹಾಗೂ ಎಂಎಸ್ ಧೋನಿ (16) ಸಾಹಸದಿಂದಾಗಿ 7 ವಿಕೆಟ್ ಗೆ 210 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.

ಆದರೆ, ಈ ಅಸಾಧ್ಯ ಸವಾಲನ್ನು ಅಷ್ಟೇ ಸುಲಭವಾಗಿ ಬೆನ್ನಟ್ಟಿದ್ದ ಎಲ್ ಎಸ್ ಜಿ ತಂಡ 6 ವಿಕೆಟ್ ಗಳ ಭರ್ಜರಿ ವಿಜಯೊಂದಿಗೆ ಐಪಿಎಲ್ ನಲ್ಲಿ ತನ್ನ ಜಯದ ಖಾತೆ ತೆರೆಯಿತು. ಲಕ್ನೋ ಗೆಲುವಿಗೆ ಕೊನೆಯ 12 ಎಸೆತಗಳಲ್ಲಿ 34 ರನ್ ಬೇಕಿತ್ತು. ಆದರೆ, 19ನೇ ಓವರ್‌ನಲ್ಲಿ 25 ರನ್ ಹರಿದುಬಂತು. 20ನೇ ಓವರ್ ಮೊದಲ ಎಸೆತವನ್ನೆ ಸಿಕ್ಸರ್‌ಗಟ್ಟಿ ಆಯುಷ್ ಬದೋನಿ ಗೆಲುವಿನ ಗಡಿ ಮುಟ್ಟಿಸಿದರು.

ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‍ಗೆ 62 ಎಸೆತದಲ್ಲಿ  99 ರನ್ ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟಿತು. ರಾಹುಲ್ 40 ರನ್ (26 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟ್ ಆದರು. ಕ್ವಿಂಟನ್ ಡಿ ಕಾಕ್ ಮಾತ್ರ ಚೆನ್ನೈ ಬೌಲರ್ ಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾ ಅರ್ಧಶತಕ ಸಿಡಿಸಿದರು. ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಬ್ಯಾಟ್ಸ್ ಮನ್ ಕ್ವಿಂಟನ್ ಡಿ ಕಾಕ್ 61 ರನ್ (45 ಎಸೆತ, 9 ಬೌಂಡರಿ) ಬಾರಿಸಿ ಔಟ್ ಆದರು. ಕೊನೆಗೆ ಎವಿನ್ ಲೆವಿಸ್ ಅಜೇಯ 55 ರನ್ (23 ಎಸೆತ, 6 ಬೌಂಡರಿ, 3 ಸಿಕ್ಸರ್) ಮತ್ತು ಆಯುಷ್ ಬದೋನಿ 19 ರನ್ (9 ಎಸೆತ, 2 ಸಿಕ್ಸರ್) ಸಿಡಿಸಿ 19.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 211 ರನ್ ಸಿಡಿಸಿ ಗೆಲುವಿನ ದಡ ಸೇರಿತು. ಎವಿನ್ ಲೆವಿಸ್ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಹಾಲಿ ಐಪಿಎಲ್ ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

IPL 2022 ಮಿಸ್ಟರ್​ 360 ಎಬಿಡಿ ನೆನಪಿಸಿದ 22ರ ಹುಡುಗ ಆಯುಷ್ ಬದೋನಿ..!

Tap to resize

Latest Videos

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲಿ ರುತುರಾಜ್  ಗಾಯಕ್ವಾಡ್ ವಿಕೆಟ್ ಬೇಗನೆ ಕಳೆದುಕೊಂಡಿತು. ಬಳಿಕ ರಾಬಿನ್ ಉತ್ತಪ್ಪಗೆ ಜೊತೆಯಾದ ಆಲ್ರೌಂಡರ್ ಮೊಯಿನ್ ಅಲಿ, ಲಕ್ನೋ ಬೌಲರ್ ಗಳ ಬೆವರಿಳಿಸಿದರು. ಈ ಜೋಡಿ 2ನೇ ವಿಕೆಡಟ್ ಗೆ ಕೇವಲ 30 ಎಸೆತಗಳಲ್ಲಿ 56 ರನ್ ಜೊತೆಯಾಟವಾಡಿ ಮಿಂಚಿತು. 27 ಎಸೆತ ಎದುರಿಸಿದ ರಾಬಿನ್ ಉತ್ತಪ್ಪ 8 ಬೌಂಡರಿ, 1 ಸಿಕ್ಸರ್ ನೊಂದಿಗೆ ಅರ್ಧಶತಕ ಬಾರಿಸಿ ಔಟಾದರೆ, ಮೊಯಿನ್ ಅಲಿ ತಾವು ಎದುರಿಸಿದ 22 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಗಳಿಂದ 35 ರನ್ ಬಾರಿಸಿ ಔಟಾದರು.

IPL 10 ಕೋಟಿ ಒಡೆಯ ಪೂರನ್‌ ಸೊನ್ನೆ ಶೂರ, ಜೆರ್ಸಿ ಬದಲಾದ್ರೂ ಆಟ ಮಾತ್ರ ಬದಲಾಗ್ಲಿಲ್ಲ..!

ಆ ಬಳಿಕ ಶಿವಂ ದುಬೆ ಮತ್ತು ಅಂಬಾಟಿ ರಾಯುಡು ಚೆನ್ನೈ ತಂಡದ ರನ್ ವೇಗವನ್ನು ಹೆಚ್ಚಿಸಿದರು. ಈ ಜೋಡಿ 4ನೇ ವಿಕೆಟ್ ಗೆ 37 ಎಸೆತಗಳಲ್ಲಿ 60 ರನ್ ಕೂಡಿಸಿತು. ಅಬ್ಬರದ ಆಟವಾಡಿದ ಶಿವಂ ದುಬೆ ಕೇವಲ 1 ರನ್ ನಿಂದ ಅರ್ಧಶತಕ ವಂಚಿತರಾದರು. 30 ಎಸೆತ ಎದುರಿಸಿದ ದುಬೆ, 5 ಬೌಂಡರಿ, 2 ಸಿಕ್ಸರ್ ಇದ್ದ 49 ರನ್ ಸಿಡಿಸಿದರೆ, ಕೊನೆಯಲ್ಲಿ ರವೀಂದ್ರ ಜಡೇಜಾ ಹಾಗೂ ಎಂಎಸ್ ಧೋನಿ ಅಬ್ಬರದ ಆಟವಾಡಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಯಶಸ್ವಿಯಾಗಿದ್ದರು. 16 ರನ್ ಬಾರಿಸಿದ ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಸಿದ ದಾಖಲೆ ಬರೆದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ 7 ಸಾವಿರ ರನ್ ಪೂರೈಸಿದ 5ನೇ ಭಾರತೀಯ ಆಟಗಾರ ಎನಿಸಿಕೊಂಡರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ಈ ಸಾಧನೆ ಮಾಡಿದ ಆಟಗಾರ ಎನ್ನುವ ದಾಖಲೆ ಇವರದಾಗಿದೆ.  ಲಕ್ನೋ ಪರ ಬೌಲಿಂಗ್‍ನಲ್ಲಿ ಅವೇಶ್ ಖಾನ್, ಆಂಡ್ರ್ಯೂ ಟೈ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದರು.

click me!