* ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿದೆ ಇನ್ನೂ ಪ್ಲೇ ಆಫ್‌ಗೇರುವ ಅವಕಾಶ
* ಆಡಿದ 9 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಿಎಸ್‌ಕೆ
* ಇನ್ನುಳಿದ 5 ಪಂದ್ಯ ಗೆದ್ದರೆ ಸಿಎಸ್‌ಕೆಗೂ ಇದೆ ಪ್ಲೇ ಆಫ್‌ಗೇರುವ ಚಾನ್ಸ್
ಬೆಂಗಳೂರು(ಮೇ.02): 15ನೇ ಆವೃತ್ತಿಯ ಐಪಿಎಲ್ (Indian Premier League) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಸತತ ಸೋಲುಗಳ ಬಳಿಕ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯು ರೋಚಕ ಘಟ್ಟ ತಲುಪಿದ್ದು, ಈಗಾಗಲೇ ಕೆಲವು ತಂಡಗಳು ಪ್ಲೇ ಆಫ್‌ನೊಳಗೆ ಒಂದು ಹೆಜ್ಜೆಯಿಟ್ಟಿದ್ದರೆ, ಮತ್ತೆ ಕೆಲವು ತಂಡಗಳು ಇನ್ನುಳಿದ ಪಂದ್ಯಗಳನ್ನು ಜಯಿಸಿ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿವೆ.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸದ್ಯ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದ್ದು, ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದೆ. ಇದುವರೆಗೂ 9 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೇವಲ 3 ಪಂದ್ಯಗಳಲ್ಲಿ ಗೆಲುವು ಹಾಗೂ 6 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಕೇವಲ 6 ಅಂಕಗಳನ್ನು ಕಲೆಹಾಕಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲೀಗ್ ಹಂತದಲ್ಲಿ ಇನ್ನೂ 5 ಪಂದ್ಯಗಳನ್ನು ಆಡಬೇಕಿದ್ದು, ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಎದುರು ಗೆಲುವು ಸಾಧಿಸುತ್ತಿದ್ದಂತೆಯೇ, ಸಿಎಸ್‌ಕೆ ತಂಡದ ಪ್ಲೇ ಆಫ್ ಕನಸು ಜೀವಂತವಾಗಿದೆ.
ರವೀಂದ್ರ ಜಡೇಜಾ (Ravindra Jadeja) ನಾಯಕತ್ವದಡಿ 8 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿತ್ತು. ಇದೀಗ ಧೋನಿ (MS Dhoni) ನಾಯಕತ್ವದಡಿ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿರುವ ಸಿಎಸ್‌ಕೆ, ಪ್ಲೇ ಆಫ್‌ಗೇರುವ ಕನಸು ಕಾಣುತ್ತಿದೆ. ಹಾಗಾದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್‌ಗೇರಲು ಏನು ಮಾಡಬೇಕು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
RCB playoffs scenarios: 5 ಪಂದ್ಯ ಸೋತರೇನಂತೆ ಈಗಲೂ ಇದೆ RCBಗೆ ಪ್ಲೇ ಆಫ್‌ಗೇರಲು ಅವಕಾಶ..!
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ 9 ಪಂದ್ಯಗಳನ್ನಾಡಿದ್ದು, ಲೀಗ್ ಹಂತದಲ್ಲಿ ಇನ್ನೂ 5 ಪಂದ್ಯಗಳನ್ನು ಆಡಬೇಕಿದೆ. ಧೋನಿ ಪಡೆ ಇನ್ನುಳಿದ ಎಲ್ಲಾ 5 ಪಂದ್ಯಗಳನ್ನು ಜಯಿಸಿದರೆ, ಗರಿಷ್ಠವೆಂದರೆ 16 ಅಂಕಗಳನ್ನು ಕಲೆಹಾಕಬಹುದಾಗಿದೆ. ಸಾಮಾನ್ಯವಾಗಿ 8 ತಂಡಗಳಿದ್ದಾಗ 16 ಅಂಕ ಪ್ಲೇ ಆಫ್‌ಗೇರಲು ಸಾಕಾಗುತ್ತಿತ್ತು. ಆದರೆ ಇದೀಗ 10 ತಂಡಗಳು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವುದರಿಂದ ಲೆಕ್ಕಾಚಾರ ಕೊಂಚ ಬದಲಾಗಿದೆ. ಸದ್ಯ ಗುಜರಾತ್ ಟೈಟಾನ್ಸ್ ತಂಡವು ಕೇವಲ 9 ಪಂದ್ಯಗಳನ್ನಾಡಿ 16 ಅಂಕಗಳನ್ನು ಗಳಿಸಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ 14 ಅಂಕ ಕಲೆಹಾಕಿದೆ. ಲಖನೌ ಕೂಡಾ ಇನ್ನೂ 4 ಪಂದ್ಯಗಳನ್ನು ಆಡಲಿದೆ. ಅದೇ ರೀತಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕ್ರಮವಾಗಿ 6 ಹಾಗೂ 5 ಗೆಲುವುಗಳನ್ನು ದಾಖಲಿಸಿದ್ದು, ಸದ್ಯ ಅಂಕಪಟ್ಟಿಯಲ್ಲಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿವೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್‌ಗೇರಬೇಕಿದ್ದರೆ ಇನ್ನುಳಿದ ಐದು ಪಂದ್ಯಗಳಲ್ಲಿ ಎದುರಾಳಿ ತಂಡಗಳ ಎದುರು ಭಾರೀ ಅಂತರದ ಗೆಲುವು ಸಾಧಿಸಬೇಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇನ್ನುಳಿದ ಐದು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ (Mumbai Indians), ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು ಕಣಕ್ಕಿಳಿಯಲಿದೆ. ಕೇವಲ 16 ಅಂಕಗಳಿಸುವುದರಿಂದಷ್ಟೇ ತಂಡವು ಪ್ಲೇ ಆಫ್‌ಗೆ ಅರ್ಹತೆ ಪಡೆಯುವುದಿಲ್ಲ. ಒಳ್ಳೆಯ ಅಂತರದ ನೆಟ್ ರನ್‌ರೇಟ್ ಕಾಪಾಡಿಕೊಂಡರಷ್ಟೇ ಚೆನ್ನೈ ತಂಡವು ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದಾಗಿದೆ.