Gujarat Titans: ಅಹಮದಾಬಾದ್‌ ಐಪಿಎಲ್‌ ತಂಡದ ಅಧಿಕೃತ ಹೆಸರು ಘೋಷಣೆ..!

Suvarna News   | Asianet News
Published : Feb 09, 2022, 05:49 PM IST
Gujarat Titans: ಅಹಮದಾಬಾದ್‌ ಐಪಿಎಲ್‌ ತಂಡದ ಅಧಿಕೃತ ಹೆಸರು ಘೋಷಣೆ..!

ಸಾರಾಂಶ

* ಅಹಮದಾಬಾದ್‌ ತಂಡದ ಅಧಿಕೃತ ಹೆಸರು ಘೋಷಣೆ * ಹೊಸ ತಂಡಕ್ಕೆ ಗುಜರಾತ್ ಟೈಟಾನ್ಸ್ ಎಂದು ನಾಮಕರಣ * ಈ ಮೊದಲು ತಂಡಕ್ಕೆ ಅಹಮದಾಬಾದ್ ಟೈಟಾನ್ಸ್ ಎಂದು ಹೆಸರಿಡಲಾಗಿದೆ ಎಂದು ವರದಿಯಾಗಿತ್ತು. 

ನವದೆಹಲಿ(ಫೆ.09): 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೊಸದಾಗಿ ಪಾಲ್ಗೊಳ್ಳುತ್ತಿರುವ ಅಹಮದಾಬಾದ್ ಮೂಲದ ತಂಡಕ್ಕೆ ಗುಜರಾತ್ ಟೈಟಾನ್ಸ್ ಎಂದು ಹೆಸರಿಟ್ಟಿರುವುದಾಗಿ ಅಹಮದಾಬಾದ್ ಮೂಲದ ಐಪಿಎಲ್ ಫ್ರಾಂಚೈಸಿಯು ಅಧಿಕೃತವಾಗಿ ಘೋಷಿಸಿದೆ. ಈ ಮೊದಲು ತಂಡಕ್ಕೆ ಅಹಮದಾಬಾದ್ ಟೈಟಾನ್ಸ್ ಎಂದು ಹೆಸರಿಡಲಾಗಿದೆ ಎಂದು ವರದಿಯಾಗಿತ್ತು. ಆದರೆ ಇದೀಗ ಅಹಮದಾಬಾದ್ ಫ್ರಾಂಚೈಸಿಯು ಅಧಿಕೃತವಾಗಿ ತಂಡದ ಹೆಸರನ್ನು ಘೋಷಿಸಿದೆ.

ಗುಜರಾತ್ ಕ್ರಿಕೆಟ್‌ನ ಶ್ರೀಮಂತ ಪರಂಪರೆಗೆ ಗೌರವ ಸೂಚಿಸುವ ಸಲುವಾಗಿ ರಾಜ್ಯದ ಹೆಸರನ್ನು ಇಡಲಾಗಿದೆ ಎಂದು ಅಹಮದಾಬಾದ್ ಫ್ರಾಂಚೈಸಿ ಮಾಲೀಕರಾದ ಸಿವಿಸಿ ಕ್ಯಾಪಿಟಲ್ಸ್‌ ಹಾಗೂ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ. ಗುಜರಾತ್ ಟೈಟಾನ್ಸ್‌ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡುತ್ತಿದ್ದು, ರಾಜ್ಯದ ಶ್ರೀಮಂತ ಕ್ರಿಕೆಟ್ ಪರಂಪರೆಗೆ ನಾವು ಗೌರವ ಸೂಚಿಸುತ್ತಿದ್ದೇವೆ. ಕಳೆದ ಹಲವು ವರ್ಷಗಳಿಂದ ಭಾರತ ಕ್ರಿಕೆಟ್ ತಂಡಕ್ಕೆ ಹಲವು ಕ್ರಿಕೆಟ್‌ ದಿಗ್ಗಜರನ್ನು ಗುಜರಾತ್ ನೀಡಿದೆ ಎಂದು ಫ್ರಾಂಚೈಸಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಫ್ರಾಂಚೈಸಿಯು ಕ್ರಿಕೆಟ್‌ ಪರಂಪರೆಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಿ ಮುಂದುವರೆಸಲು ಇದೊಂದು ಅವಕಾಶ ಎಂದು ಭಾವಿಸಿದೆ. ನಾವು ಗುಜರಾತ್ ಅಭಿಮಾನಿಗಳು ಹೆಮ್ಮೆ ಪಡುವಂತಹ ತಂಡವನ್ನು ಕಟ್ಟಲಿದ್ದೇವೆ. ಈ ಕಾರಣಕ್ಕಾಗಿಯೇ ತಂಡಕ್ಕೆ ಗುಜರಾತ್ ಟೈಟಾನ್ಸ್ ಎಂದು ಹೆಸರಿಡಲಾಗಿದೆ ಎಂದು ಫ್ರಾಂಚೈಸಿಯ ಪ್ರತಿನಿಧಿ ಸಿದ್ದಾರ್ಥ್ ಪಟೇಲ್ ತಿಳಿಸಿದ್ದಾರೆ.

ಐಪಿಎಲ್ ಆಟಗಾರರ ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ತಂಡದ ಅಧಿಕೃತ ಹೆಸರನ್ನು ಘೋಷಿಸಲಾಗಿದೆ. ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಗುಜರಾತ್ ಟೈಟಾನ್ಸ್ ತಂಡವು ಮೂರು ಆಟಗಾರರನ್ನು ಆಯ್ದುಕೊಂಡಿದೆ. ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ ಹಾಗೂ ರಶೀದ್ ಖಾನ್‌ ಅವರಿಗೆ ತಲಾ 15 ಕೋಟಿ ರುಪಾಯಿ ಹಾಗೂ ಶುಭ್‌ಮನ್ ಗಿಲ್ ಅವರಿಗೆ 8 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಹಾರ್ದಿಕ್ ಪಾಂಡ್ಯ ಅವರಿಗೆ ಫ್ರಾಂಚೈಸಿಯು ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಇದೀಗ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಬಳಿ 52 ಕೋಟಿ ರುಪಾಯಿ ಉಳಿದುಕೊಂಡಿದ್ದು, ಈ ಹಣದಲ್ಲೇ ಉಳಿದ ಆಟಗಾರರನ್ನು ಖರೀದಿಸಬೇಕಿದೆ.

IPL Auction 2022: ಮೆಗಾ ಹರಾಜು ಆರಂಭ ಎಷ್ಟು ಗಂಟೆಯಿಂದ..? ಇಲ್ಲಿದೆ ಉತ್ತರ

ಅಹಮದಾಬಾದ್ ಟೈಟಾನ್ಸ್ ತಂಡದ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ನೇಮಕವಾಗಿದ್ದಾರೆ. ಇನ್ನು ಗ್ಯಾರಿ ಕರ್ಸ್ಟ್ರನ್‌ ಬ್ಯಾಟಿಂಗ್ ಕೋಚ್ ಹಾಗೂ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವಿಕ್ರಂ ಸೋಲಂಕಿ ಫ್ರಾಂಚೈಸಿಯ ಕ್ರಿಕೆಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. 

ಇನ್ನೊಂದೆಡೆ ಆರ್‌.ಪಿ. ಸಂಜೀವ್ ಗೋಯೆಂಕಾ ಒಡೆತದ ಲಖನೌ ಫ್ರಾಂಚೈಸಿಯು ಬರೋಬ್ಬರಿ 7,090 ಕೋಟಿ ರುಪಾಯಿ ಹಣವನ್ನು ನೀಡಿ ಲಖನೌ ಸೂಪರ್‌ ಜೈಂಟ್ಸ್ ತಂಡವನ್ನು ಖರೀದಿಸಿದೆ. ಲಖನೌ ಫ್ರಾಂಚೈಸಿಯು ಹರಾಜಿಗೂ ಮುನ್ನ ಕೆ.ಎಲ್. ರಾಹುಲ್(17 ಕೋಟಿ ರುಪಾಯಿ), ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್(9.2 ಕೋಟಿ ರುಪಾಯಿ) ಹಾಗೂ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ ಅವರಿಗೆ 4 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಕೆ.ಎಲ್‌ ರಾಹುಲ್ ಅವರಿಗೆ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಹರಾಜಿನಲ್ಲಿ ಆಟಗಾರರನ್ನು ಖರೀದಿಸಲು ಲಖನೌ ಸೂಪರ್‌ ಜೈಂಟ್ಸ್ ಫ್ರಾಂಚೈಸಿಯ ಬಳಿ ಇನ್ನೂ 59 ಕೋಟಿ ರುಪಾಯಿ ಉಳಿದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌