
ಅಬು ಧಾಬಿ(ಅ.02): ರುತುರಾಜ್ ಗಾಯಕ್ವಾಡ್(Ruturaj Gaikwad) ಐಪಿಎಲ್ 2021ರ(IPL 2021) ಆವೃತ್ತಿಯಲ್ಲಿ ದಾಖಲೆ ಬರೆದಿದ್ದಾರೆ. ಚೊಚ್ಚಲ ಐಪಿಎಲ್ ಶತಕ ಸಿಡಿಸಿ ಹೊಸ ಇತಿಹಾಸ ರಚಿಸಿದ್ದಾರೆ. ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧ ಅಬ್ಬರಿಸಿದ ರುತುರಾಜ್ ಗಾಯಕ್ವಾಡ್ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಚೆನ್ನೈ ಸೂಪರ್ ಕಿಂಗ್ಸ್(Chennai super kings) 4 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ190 ಟಾರ್ಗೆಟ್ ನೀಡಿದೆ.
IPL 2021 ಡೆಲ್ಲಿಗೆ ಗೆಲುವಿನ ಉಡುಗೊರೆ ನೀಡಿದ ಅಯ್ಯರ್-ಅಶ್ವಿನ್ ಕಿಲಾಡಿ ಜೋಡಿ
ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 47 ರನ್ ಜೊತೆಯಾಟ ನೀಡಿತು. ಇವರಿಬ್ಬರ ಜೊತೆಯಾಟಕ್ಕೆ ರಾಹುಲ್ ಟಿವಾಟಿಯಾ ಬ್ರೇಕ್ ಹಾಕಿದರು. ಫಾಫ್ ಡುಪ್ಲೆಸಿಸ್ 25 ರನ್ ಸಿಡಿಸಿ ಔಟಾದರು.
ಡುಪ್ಲೆಸಿಸ್ ವಿಕೆಟ್ ಪತನದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್(CSK) 2ನೇ ವಿಕೆಟ್ ಕಳೆದುಕೊಂಡಿತು. ಸುರೇಶ್ ರೈನಾ(Suresh Raina) ಕೇವಲ 3 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ರಾಹುಲ್ ಟಿವಾಟಿಯಾ ಬೌಲಿಂಗ್ ಚೆನ್ನೈಗೆ ಕಂಟಕವಾಗಿ ಪರಿಣಮಿಸಿತು. ಇತ್ತ ರುತುರಾಜ್ ಹೋರಾಟ ಮುಂದುವರಿಸಿದರು. ಮೊಯಿನ್ ಆಲಿ ಜೊತೆ ಇನ್ನಿಂಗ್ಸ್ ಮುಂದುವರಿಸಿದ ರುತುರಾಜ್ ಗಾಯಕ್ವಾಡ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು.
IPL ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಎಂ ಎಸ್ ಧೋನಿ..!
ರುತುರಾಜ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಆದರೆ ಮೊಯಿನ್ ಆಲಿ 21 ರನ್ ಸಿಡಿಸಿ ಔಟಾದರು. 114 ರನ್‌ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ 3ನೇ ವಿಕೆಟ್ ಕಳೆದುಕೊಂಡಿತು. ಚೆನ್ನೈ ತಂಡ ಹೆಚ್ಚಿನ ವಿಕೆಟ್ ಕಳೆದುಕೊಳ್ಳಲಿಲ್ಲ. ಆದರೆ ರನ್‌ರೇಟ್ ಟಿ20 ಪಂದ್ಯದಂತೆ ಇರಲಿಲ್ಲ. ಹೀಗಾಗಿ ರುತುರಾಜ್ ಗಾಯಕ್ವಾಡ್ ಸ್ಟ್ರೈಕ್ ರೇಟ್ ಹೆಚ್ಚಿಸಿದರು.
ರುತುರಾಜ್ ಗಾಯಕ್ವಾಡ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಅಂಬಾಟಿ ರಾಯುಡು ಕೇವಲ 2 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ ಜೊತೆ ಸೇರಿದ ರುತುರಾಜ್ ಚೆನ್ನೈ ತಂಡದ ಆತಂಕ ದೂರ ಮಾಡಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ IPL 2021 ಆವೃತ್ತಿಯಲ್ಲಿ 500 ರನ್ ಗಡಿ ದಾಟಿದರು.
IPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್ ಗೇಲ್..!
ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 500ಕ್ಕಿಂತ ಹೆಚ್ಚಿನ ರನ್ ಸಿಡಿಸಿದ ಚೆನ್ನೈ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ರುತುರಾಜ್ ಗಾಯಕ್ವಾಡ್ ಸೇರಿಕೊಂಡಿದ್ದಾರೆ. ಚೆನ್ನೈ ಪರ ಒಂದು ಆವೃತ್ತಿಯಲ್ಲಿ 500ಕ್ಕಿಂತ ಹೆಚ್ಚಿನ ರನ್ ಸಿಡಿಸಿದ 7ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
IPL ಆವೃತ್ತಿಯಲ್ಲಿ CSKಪರ 500 ಪ್ಲಸ್ ರನ್ ಸಿಡಿಸಿದ ಕ್ರಿಕೆಟರ್ಸ್:
ಸುರೇಶ್ ರೈನಾ (3) ಬಾರಿ
ಮ್ಯಾಥ್ಯೂ ಹೇಡನ್
ಮೈಕಲ್ ಹಸ್ಸಿ
ಡ್ವೇನ್ ಸ್ಮಿತ್
ಅಂಬಾಟಿ ರಾಯುಡು
ಶೇನ್ ವ್ಯಾಟ್ಸನ್
ರುತುರಾಜ್ ಗಾಯಕ್ವಾಡ್
ರುತುರಾಜ್ ಗಾಯಕ್ವಾಡ್ ಜೊತೆ ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಂಡರಿ ಸಿಕ್ಸರ್ ಮೂಲಕ ಜಡೇಜಾ ಅಬ್ಬರ ಆರಂಭಗೊಂಡಿತು. ಇವರಿಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಇನ್ನಿಂಗ್ಸ್ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿದ ರುತುರಾಜ್ ಸೆಂಚುರಿ ಪೂರೈಸಿದರು. ಈ ಮೂಲಕ ಚೊಚ್ಚಲ ಐಪಿಎಲ್ ಶತಕ ಸಿಡಿಸಿದರು.
ರುತುರಾಜ್ ಹಾಗೂ ಜಡೇಜಾ ಅಬ್ಬರದಿಂದ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿತು. ರುಜುರಾಜ್ ಅಜೇಯ 101 ರನ್ ಸಿಡಿಸಿದರೆ, ಜಡೇಜಾ ಅಜೇಯ 32 ರನ್ ಸಿಡಿಸಿದರು.
ಪಂದ್ಯ ಉಭಯ ತಂಡಗಳಿಗೂ ಮುಖ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ಮೊದಲ ಸ್ಥಾನ ಭದ್ರಪಡಿಸಲು ಚೆನ್ನೈಗೆ ಈ ಗೆಲುವು ಮುಖ್ಯವಾಗಿದೆ. ಮೊದಲೆರೆಡು ಸ್ಥಾನದಲ್ಲಿದ್ದರೆ ಮಾತ್ರ ಪ್ಲೇ ಆಫ್ ಸುತ್ತಿನಲ್ಲಿ ಫೈನಲ್ ಪ್ರವೇಶಕ್ಕೆ ಎರಡು ಅವಕಾಶ ಸಿಗಲಿದೆ. ಇದು ಚೆನ್ನೈ ಲೆಕ್ಕಾಚಾರ. ಆಧರೆ ಇತ್ತ ರಾಜಸ್ಥಾನ ರಾಯಲ್ಸ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದೆ. ಆದರೆ ಕೊನೆಯ ಅವಕಾಶಕ್ಕಾಗಿ ಹೋರಾಟ ಮಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.