ಡಾ. ರಾಜ್‌ ಕುಮಾರ್‌ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭಕೋರಿ ಅಭಿಮಾನಿಗಳ ಮನಗೆದ್ದ ಆರ್‌ಸಿಬಿ

By Suvarna NewsFirst Published Apr 24, 2021, 4:40 PM IST
Highlights

ಕನ್ನಡಿಗರ ಆರಾಧ್ಯ ದೈವ ಡಾ. ರಾಜ್‌ ಕುಮಾರ್‌ ಹುಟ್ಟುಹಬ್ಬಕ್ಕೆ ನಮ್ಮ ನೆಲದ ಕ್ರಿಕೆಟ್‌ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕನ್ನಡದಲ್ಲೇ ಅಣ್ಣವ್ರಿಗೆ ಶುಭಕೋರಿ ಅಭಿಮಾನಿಗಳ ಹೃದಯ ಗೆದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಏ.24): ನಟಸಾರ್ವಭೌಮ, ಕನ್ನಡಿಗರ ಹೆಮ್ಮೆಯ ನಟ ಡಾ. ರಾಜ್ ಕುಮಾರ್ ಅವರ 92ನೇ ಜನ್ಮದಿನಾಚರಣೆಯನ್ನು ಕನ್ನಡಿಗರು ಅತ್ಯಂತ ಪ್ರೀತಿಪೂರ್ವಕವಾಗಿ ಸಂಭ್ರಮಿಸುತ್ತಾರೆ. ಏಪ್ರಿಲ್‌ 24 ಬಂತೆಂದರೆ ಅದೊಂಥರ ಅಣ್ಣವ್ರ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ.
  
ಅಭಿಮಾನಿಗಳನ್ನೇ ದೇವರೆಂದು ಕರೆದ ಕನ್ನಡದ ಸಾಕ್ಷಿಪ್ರಜ್ಞೆಯಂತಿದ್ದ ಡಾ. ರಾಜ್‌ ಕುಮಾರ್ ಅವರ 92ನೇ ಹುಟ್ಟುಹಬ್ಬವನ್ನು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಕುರಿತಾದ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇನ್ನು ನಮ್ಮ ಬೆಂಗಳೂರಿನ ಹೆಮ್ಮೆಯ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡಾ ಬಭ್ರುವಾಹನ ಸಿನಿಮಾದ ಖ್ಯಾತ ಡೈಲಾಗ್‌ನ್ನು ಕನ್ನಡದಲ್ಲೇ ಟ್ವೀಟ್‌ ಮಾಡುವ ಮೂಲಕ ವಿನೂತನವಾಗಿ ಡಾ. ರಾಜ್‌ ಕುಮಾರ್‌ ಅವರನ್ನು ಸ್ಮರಿಸಿಕೊಂಡಿದೆ.

"ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ." ನಟಸಾರ್ವಭೌಮ ಡಾ|| ರಾಜ್ ಕುಮಾರ್ ಅವರ 92ನೆ ಜನ್ಮಮಹೋತ್ಸವದ ನೆನಪಿನಲ್ಲಿ. ❤️🙏

— Royal Challengers Bangalore (@RCBTweets)

''ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ.'' ನಟಸಾರ್ವಭೌಮ ಡಾ|| ರಾಜ್‌ ಕುಮಾರ್‌ ಅವರ 92ನೇ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಟ್ವೀಟ್‌ ಮಾಡಿ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದೆ. ಈ ರೀತಿಯ ಕನ್ನಡ ಸ್ನೇಹಿ ಟ್ವೀಟ್‌ಗಳು ಆರ್‌ಸಿಬಿ ಹಾಗೂ ಕನ್ನಡಿಗ ಕ್ರಿಕೆಟ್‌ ಅಭಿಮಾನಿಗಳನ್ನು ಮತ್ತಷ್ಟು ಹತ್ತಿರಕ್ಕೆ ಬರುವಂತೆ ಮಾಡಿದೆ.

ಯಾರೇ ಕೂಗಾಡಲೀ, ಊರೇ ಹೋರಾಡಲು, ಡಾ. ರಾಜ್ ಇರುತ್ತಿದ್ದುದೇ ಹೀಗೆ..!

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ತಾನಾಡಿದ ಮೊದಲ 4 ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇದೀಗ ಆರ್‌ಸಿಬಿ ತನ್ನ ಮುಂದಿನ ಪಂದ್ಯ (ಏಪ್ರಿಲ್‌ 25)ದಲ್ಲಿ ತನ್ನ ಸಾಂಪ್ರಾದಾಯಿಕ ಎದುರಾಳಿ ಎಂ. ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಮಧ್ಯಾಹ್ನ 3.30ಕ್ಕೆ ಆರಂಭವಾಗಲಿರುವ ಈ ಹೈವೋಲ್ಟೇಜ್‌ ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ.
 

click me!