IPL 2021 ಆರ್‌ಸಿಬಿ-ಮುಂಬೈ ಇಂಡಿಯನ್ಸ್‌ ಬ್ಲಾಕ್‌ಬಸ್ಟರ್‌ ಪಂದ್ಯಕ್ಕೆ ಕ್ಷಣಗಣನೆ

By Kannadaprabha News  |  First Published Apr 9, 2021, 9:33 AM IST

ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚೆನ್ನೈನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಚೆನ್ನೈ(ಏ.09): ಐಪಿಎಲ್‌ 14ನೇ ಆವೃತ್ತಿಯ ಮೊದಲ ಪಂದ್ಯವೇ ಭರ್ಜರಿ ಮನರಂಜನೆ ನೀಡಲಿದೆ. ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಸೆಣಸಲಿವೆ. ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕ ರೋಹಿತ್‌ ಶರ್ಮಾ ಹಾಗೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮುಖಾಮುಖಿಯಾಗಲಿದ್ದಾರೆ.

‘ಸ್ಪಿನ್‌ ಸ್ವರ್ಗ’ ಚೆಪಾಕ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಹೇಗೆ ಹೊಂದಿಕೊಳ್ಳಲಿವೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಮುಂಬೈ 5 ಬಾರಿ ಚಾಂಪಿಯನ್‌ ಆಗಿದ್ದರೂ, ಕಳೆದ 8 ಆವೃತ್ತಿಗಳಲ್ಲಿ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆರ್‌ಸಿಬಿ ಇದರ ಲಾಭ ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಬೇಕಿದೆ.

Latest Videos

ಪಡಿಕ್ಕಲ್‌ ಕಣಕ್ಕೆ?: ಕೋವಿಡ್‌ನಿಂದ ಗುಣಮುಖರಾಗಿ ತಂಡ ಕೂಡಿಕೊಂಡಿರುವ ದೇವದತ್‌ ಪಡಿಕ್ಕಲ್‌, ಬುಧವಾರ ತಂಡದೊಂದಿಗೆ ಅಭ್ಯಾಸ ನಡೆಸಿದರು. ಅವರ ಆಗಮನ ಆರ್‌ಸಿಬಿ ಆತ್ಮವಿಶ್ವಾಸ ಹೆಚ್ಚಿಸಿದೆ. ವಿರಾಟ್‌ ಕೊಹ್ಲಿ ಜೊತೆ ಪಡಿಕ್ಕಲ್‌ ಇನ್ನಿಂಗ್ಸ್‌ ಆರಂಭಿಸುವ ನಿರೀಕ್ಷೆ ಇದೆ. ಗ್ಲೆನ್‌ ಮ್ಯಾಕ್ಸ್‌ವೆಲ್‌ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎನ್ನುವ ಬಗ್ಗೆ ಕುತೂಹಲವಿದೆ. ಇತ್ತೀಚೆಗೆ ಮ್ಯಾಕ್ಸ್‌ವೆಲ್‌ 4ನೇ ಕ್ರಮಾಂಕದಲ್ಲಿ ಉತ್ತಮ ಆಟವಾಡಿದ್ದರು. ಆರ್‌ಸಿಬಿ ಪರವೂ ಅವರು 4ನೇ ಕ್ರಮಾಂಕದಲ್ಲೇ ಆಡಬಹುದು. ಎಬಿ ಡಿ ವಿಲಿಯ​ರ್ಸ್‌ 5ನೇ ಕ್ರಮಾಂಕದಲ್ಲಿ ಆಡಿ, ಫಿನಿಶರ್‌ ಪಾತ್ರ ನಿರ್ವಹಿಸಬಹುದು. ಮೊಹಮದ್‌ ಅಜರುದ್ದೀನ್‌, ಡೇನಿಯಲ್‌ ಕ್ರಿಶ್ಚಿಯನ್‌ ಮೇಲೂ ನಿರೀಕ್ಷೆ ಇರಿಸಲಾಗಿದೆ.

ಇಂದಿನಿಂದ ಐಪಿಎಲ್‌ ಟಿ20 ಕದನ ಶುರು; ಹ್ಯಾಟ್ರಿಕ್‌ ಟ್ರೋಫಿ ಮೇಲೆ ಮುಂಬೈ ಕಣ್ಣು..!

ಕೈಲ್‌ ಜೇಮಿಸನ್‌, ನವ್‌ದೀಪ್‌ ಸೈನಿ, ಮೊಹಮದ್‌ ಸಿರಾಜ್‌ ಹಾಗೂ ಕ್ರಿಶ್ಚಿಯನ್‌ ವೇಗದ ಬೌಲಿಂಗ್‌ ನಿರ್ವಹಿಸಿದರೆ, ಯಜುವೇಂದ್ರ ಚಹಲ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಮ್ಯಾಕ್ಸ್‌ವೆಲ್‌ ಸ್ಪಿನ್‌ ದಾಳಿ ನಡೆಸಲಿದ್ದಾರೆ. 7 ಬ್ಯಾಟಿಂಗ್‌, 7 ಬೌಲಿಂಗ್‌ ಆಯ್ಕೆಗಳೊಂದಿಗೆ ಆರ್‌ಸಿಬಿ ಆಡುವ ನಿರೀಕ್ಷೆ ಇದೆ. ನ್ಯೂಜಿಲೆಂಡ್‌ನ ಫಿನ್‌ ಆ್ಯಲೆನ್‌ ಹಾಗೂ ಆಸ್ಪ್ರೇಲಿಯಾದ ಆ್ಯಡಂ ಜಂಪಾ ಇನ್ನೂ ಕ್ವಾರಂಟೈನ್‌ ಮುಗಿಸಿಲ್ಲ. ಹೀಗಾಗಿ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಮುಂಬೈಗೆ ಕ್ವಿಂಟನ್‌ ಡಿ ಕಾಕ್‌ ಲಭ್ಯವಿರುವುದಿಲ್ಲ. ಆದರೂ ತಂಡಕ್ಕೆ ಸಂಪನ್ಮೂಲದ ಕೊರತೆ ಇಲ್ಲ. ಆಲ್ರೌಂಡರ್‌ ಜೇಮ್ಸ್‌ ನೀಶಮ್‌ ಸೇರ್ಪಡೆ ಮುಂಬೈ ಬಲ ಹೆಚ್ಚಿಸಲಿದೆ. ರೋಹಿತ್‌ ಸಹ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿದರೆ ಅಚ್ಚರಿಯಿಲ್ಲ.

ಪಿಚ್‌ ರಿಪೋರ್ಟ್‌

ಚೆನ್ನೈನ ಚೆಪಾಕ್‌ ಕ್ರೀಡಾಂಗಣದ ಪಿಚ್‌ ಸ್ಪಿನ್‌ ಸ್ನೇಹಿ ಪಿಚ್‌ ಆಗಿದೆ. 2018ರಿಂದ ಐಪಿಎಲ್‌ಗೆ ಆತಿಥ್ಯ ವಹಿಸಿರುವ ಭಾರತದ 11 ಮೈದಾನಗಳ ಪೈಕಿ ಚೆನ್ನೈ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಉತ್ತಮ ಸರಾಸರಿ (19.52) ಹಾಗೂ ಎಕಾನಮಿ ರೇಟ್‌ (6.16) ಹೊಂದಿದ್ದಾರೆ. 150ಕ್ಕಿಂತ ಹೆಚ್ಚಿನ ಮೊತ್ತ ಇಲ್ಲಿ ಸ್ಪರ್ಧಾತ್ಮಕ ಎನಿಸಿಕೊಳ್ಳಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ವಿರಾಟ್‌ ಕೊಹ್ಲಿ(ನಾಯಕ), ದೇವದತ್‌ ಪಡಿಕ್ಕಲ್‌, ಎಬಿ ಡಿ ವಿಲಿಯ​ರ್‍ಸ್, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಹಮದ್‌ ಅಜರುದ್ದೀನ್‌, ಡೇನಿಯಲ್‌ ಕ್ರಿಶ್ಚಿಯನ್‌, ವಾಷಿಂಗ್ಟನ್‌ ಸುಂದರ್‌, ಕೈಲ್‌ ಜೇಮಿಸನ್‌, ನವ್‌ದೀಪ್‌ ಸೈನಿ, ಮೊಹಮದ್‌ ಸಿರಾಜ್‌, ಯಜುವೇಂದ್ರ ಚಹಲ್‌.

ಮುಂಬೈ: ರೋಹಿತ್‌ ಶರ್ಮಾ(ನಾಯಕ), ಇಶಾನ್‌ ಕಿಶನ್‌, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ಕೀರನ್‌ ಪೊಲ್ಲಾರ್ಡ್‌, ಜೇಮ್ಸ್‌ ನೀಶಮ್‌, ಕೃನಾಲ್‌ ಪಾಂಡ್ಯ, ಕೌಲ್ಟರ್‌-ನೈಲ್‌/ಜಯಂತ್‌, ರಾಹುಲ್‌ ಚಹರ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬುಮ್ರಾ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌
 

click me!