IPL 2021 ಬಟ್ಲರ್‌, ಸ್ಟೋಕ್ಸ್‌ ಅನುಮಾನ, ರಾಜಸ್ಥಾನ ರಾಯಲ್ಸ್‌ಗೆ ಸಂಕಷ್ಟ..!

By Suvarna NewsFirst Published Aug 20, 2021, 9:39 AM IST
Highlights

* ಐಪಿಎಲ್ ಭಾಗ 2 ಟೂರ್ನಿಗೆ ದಿನಗಣನೆ ಆರಂಭ

* ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಐಪಿಎಲ್ ಭಾಗ 2 ಆರಂಭ

* ಟೂರ್ನಿ ಆರಂಭಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಶುರುವಾಯ್ತು ತಳಮಳ

ದುಬೈ(ಆ.20): 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಉಳಿದ ಪಂದ್ಯಗಳಿಗೆ ಇಂಗ್ಲೆಂಡ್‌ನ ಪ್ರಮುಖ ಮೂರು ಆಟಗಾರರು ಗೈರಾಗುವ ಸಾಧ್ಯತೆ ಇದ್ದು, ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಸಂಕಷ್ಟ ಎದುರಾಗಿದೆ. ಐಪಿಎಲ್ ಭಾಗ-2 ಟೂರ್ನಿಯು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭವಾಗಲಿದೆ.

ಚೊಚ್ಚಲ ಐಪಿಎಲ್‌ ಆವೃತ್ತಿಯ ರಾಜಸ್ಥಾನ ರಾಯಲ್ಸ್ ತಂಡದ ಪ್ರಮುಖ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಈಗಾಗಲೇ ಕ್ರಿಕೆಟ್‌ನಿಂದ ಅನಿರ್ಧಿಷ್ಟಾವಧಿ ವಿಶ್ರಾಂತಿ ಪಡೆದುಕೊಂಡಿದ್ದು, ಐಪಿಎಲ್‌ಗೆ ಲಭ್ಯವಿರುವ ಸಾಧ್ಯತೆ ಇಲ್ಲ. ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಮೊಣಕೈ ಗಾಯದಿಂದಾಗಿ ಈಗಾಗಲೇ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಕೂಡಾ ಐಪಿಎಲ್‌ನಿಂದ ಹೊರಗುಳಿಯುವ ಸಾಧ್ಯತೆ ಇದೆ. ತನ್ನ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಬಟ್ಲರ್‌ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ ಎನ್ನಲಾಗಿದೆ.

ಆಸ್ಟ್ರೇಲಿಯಾದ ಈ ಇಬ್ಬರು ಆರ್‌ಸಿಬಿ ಕ್ರಿಕೆಟಿಗರು ಐಪಿಎಲ್ ಭಾಗ-2 ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ..!

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಜೋಸ್‌ ಬಟ್ಲರ್ ರಾಜಸ್ಥಾನ ರಾಯಲ್ಸ್‌ ತಂಡದ ಕೀ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಭಾರತದಲ್ಲಿ ನಡೆದ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ 36.28ರ ಸರಾಸರಿಯಲ್ಲಿ 254 ರನ್‌ ಬಾರಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್‌ ಸರದಾರರಾಗಿ ಹೊರಹೊಮ್ಮಿದ್ದರು. ಇದೀಗ ಇಂಗ್ಲೆಂಡ್‌ನ ಮೂವರು ತಾರಾ ಆಟಗಾರರಾದ ಸ್ಟೋಕ್ಸ್‌, ಬಟ್ಲರ್ ಹಾಗೂ ಆರ್ಚರ್‌ ಅನುಪಸ್ಥಿತಿ ರಾಜಸ್ಥಾನ ರಾಯಲ್ಸ್‌ವನ್ನು ಹೆಚ್ಚಾಗಿ ಕಾಡುವ ಸಾಧ್ಯತೆಯಿದೆ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 7 ಪಂದ್ಯಗಳನ್ನಾಡಿ 3 ಗೆಲುವು ಹಾಗೂ 4 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇದೀಗ ತಾರಾ ಆಟಗಾರರ ಅನುಪಸ್ಥಿತಿಯಿಂದಾಗಿ ರಾಯಲ್ಸ್ ತಂಡವು ಟಾಪ್ 4 ಪಟ್ಟಿಯೊಳಗೆ ಸ್ಥಾನ ಪಡೆಯಲು ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
 

click me!