IPL 2021 ಅರ್ಧಶತಕ ಚಚ್ಚಿ ಬ್ಯಾಟ್‌ ಮೇಲೆ ಧೋನಿ ಹಸ್ತಾಕ್ಷರ ಪಡೆದ ಯಶಸ್ವಿ ಜೈಸ್ವಾಲ್‌

By Suvarna NewsFirst Published Oct 4, 2021, 1:12 PM IST
Highlights

* ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ ಆಕರ್ಷಕ ಅರ್ಧಶತಕ ಚಚ್ಚಿದ ಯಶಸ್ವಿ ಜೈಸ್ವಾಲ್

* ಚೆನ್ನೈ ಎದುರಿನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶಸ್ವಿ

* ದಿಗ್ಗಜ ನಾಯಕ ಧೋನಿ ಬಳಿ ತಮ್ಮ ಬ್ಯಾಟ್‌ ಮೇಲೆ ಸಹಿ ಹಾಕಿಸಿಕೊಂಡ ಯಶಸ್ವಿ

ಅಬುಧಾಬಿ(ಅ.04): ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals)ಗೆ ಭರ್ಜರಿ ಗೆಲುವು ತಂದ ಯುವ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ (Yashasvi Jaiswal)ಗೆ ಪಂದ್ಯದ ಬಳಿಕ ವಿಶೇಷ ಉಡುಗೊರೆ ಲಭಿಸಿದೆ. ತಮಗೆ ಸಿಕ್ಕ ಉಡುಗೊರೆಯ ಬಗ್ಗೆ ಯಶಸ್ವಿ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ನೀಡಿದ್ದ 190 ರನ್‌ಗಳ ಬೃಹತ್‌ ಮೊತ್ತ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್‌ಗೆ ಸ್ಫೋಟಕ ಆರಂಭ ಒದಗಿಸಿ ಕೊಟ್ಟ 19 ವರ್ಷದ ಯಶಸ್ವಿ ಜೈಸ್ವಾಲ್‌ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ತನ್ನ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಯಶಸ್ವಿ ಜೈಸ್ವಾಲ್‌ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕವನ್ನು ಸಿಡಿಸಿ ಸ್ಮರಣೀಯವಾಗಿಸಿಕೊಂಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್‌ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಸಿಡಿಸಿದ್ದರು. ಗಾಯಕ್ವಾಡ್ ಆಡಿದ ರೀತಿಯ ಮೂಲಕ ಪಿಚ್‌ ವರ್ತಿಸುತ್ತಿದ್ದ ರೀತಿಯನ್ನು ಅರ್ಥೈಸಿಕೊಂಡ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಅರ್ಧಶತಕ ಚಚ್ಚಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

IPL 2021:ಋತುರಾಜ್ ಸೆಂಚುರಿ, ಚೆನ್ನೈ ಹೋರಾಟ ವ್ಯರ್ಥ; ಧೋನಿ ಸೈನ್ಯ ಮಣಿಸಿದ ರಾಜಸ್ಥಾನ!

ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್‌ ತಮ್ಮ ಬ್ಯಾಟ್‌ ಮೇಲೆ ಚೆನ್ನೈ ತಂಡದ ನಾಯಕ ಧೋನಿ ಅವರ ಹಸ್ತಾಕ್ಷರ ಪಡೆದುಕೊಂಡಿದ್ದಾರೆ. ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಿಎಸ್‌ಕೆ ದಿಗ್ಗಜನ ಹಸ್ತಾಕ್ಷರ ಸಿಕ್ಕಿದ್ದು ಬಹಳ ಖುಷಿಯಾಗಿದೆ ಎಂದು ಯಶಸ್ವಿ ಜೈಸ್ವಾಲ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಯಶಸ್ವಿ ಜೈಸ್ವಾಲ್, ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಸರ್ ಅವರನ್ನು ಭೇಟಿ ಮಾಡಿದ್ದು ಎಂತಹ ಅದ್ಭುತ ಕ್ಷಣ. ನನ್ನ ಬ್ಯಾಟ್‌ ಮೇಲೆ ಅವರ ಸಹಿ ಪಡೆದಿದ್ದು ನನ್ನ ಪಾಲಿಗೆ ಅವಿಸ್ಮರಣೀಯ. ಎಂದೆಂದಿಗೂ ಅವರು ಸ್ಪೂರ್ತಿದಾಯಕ ವ್ಯಕ್ತಿ ಎಂದು ಟ್ವೀಟ್‌ ಮಾಡಿದ್ದಾರೆ. 

What a moment meeting the legendary sir and greatly elated by getting his signature on my bat. Always an inspiration! 🙌🙏 pic.twitter.com/pWsoxsFNzj

— Yashasvi Jaiswal (@yashasvi_j)

ಚೆನ್ನೈ ಸೂಪರ್‌ ಕಿಂಗ್ಸ್ ನೀಡಿದ್ದ 190 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಎವಿನ್ ಲೆವಿಸ್ ಹಾಗೂ ಯಶಸ್ವಿ ಜೈಸ್ವಾಲ್ ವಿಸ್ಪೋಟಕ ಆರಂಭ ಒದಗಿಸಿಕೊಟ್ಟರು. ಪವರ್‌ ಪ್ಲೇನಲ್ಲೇ ಈ ಜೋಡಿ 75 ರನ್ ಚಚ್ಚುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಇದಾದ ಕೆಲಹೊತ್ತಿನಲ್ಲೇ ಈ ಜೋಡಿ ವಿಕೆಟ್ ಒಪ್ಪಿಸಿತಾದರೂ ಕೊನೆಯಲ್ಲಿ ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ನಡೆಸುವ ತಂಡಕ್ಕೆ 7 ವಿಕೆಟ್‌ಗಳ ಗೆಲುವು ತಂದಿತ್ತರು. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್‌ ತಂಡದ ಪ್ಲೇ ಆಫ್‌ ಆಸೆ ಜೀವಂತವಾಗಿದ್ದು, ಮಂಗಳವಾರ ಶಾರ್ಜಾದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. 

click me!