ಐಪಿಎಲ್ 2021: ಮತ್ತೆ ಅಬ್ಬರಿಸುವ ಮುನ್ಸೂಚನೆ ಕೊಟ್ಟ ನಿಕೋಲಸ್ ಪೂರನ್

By Suvarna NewsFirst Published May 8, 2021, 12:21 PM IST
Highlights

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ಪಂಜಾಬ್ ಕಿಂಗ್ಸ್ ತಂಡದ ಸ್ಪೋಟಕ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಮುಂಬರುವ ದಿನಗಳಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.08): ಕೇವಲ 29 ಪಂದ್ಯಗಳ ಬಳಿಕ ಬಯೋ ಬಬಲ್‌ನಲ್ಲಿ ಕೋವಿಡ್‌ 19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಪಂಜಾಬ್‌ ಕಿಂಗ್ಸ್‌ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್‌ ಈ ಬಿಡುವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಯುಎಇನಲ್ಲಿ ನಡೆದಿದ್ದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ನಿಕೋಲಸ್ ಪೂರನ್‌, ಇತ್ತೀಚೆಗೆ ಅರ್ಧದಲ್ಲೇ ಸ್ಥಗಿತಗೊಂಡ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನದ ಮೂಲಕ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆಡಿದ 6 ಇನಿಂಗ್ಸ್‌ಗಳ ಪೈಕಿ ವಿಂಡೀಸ್ ಎಡಗೈ ಬ್ಯಾಟ್ಸ್‌ಮನ್‌ 4 ಬಾರಿ ಶೂನ್ಯ ಸಂಪಾದನೆ ಮಾಡಿದರೆ, ಮತ್ತೆರಡು ಪಂದ್ಯಗಳಲ್ಲಿ ಕ್ರಮವಾಗಿ 9 ಹಾಗೂ 19 ರನ್‌ಗಳನ್ನಷ್ಟೇ ಬಾರಿಸಿದ್ದರು. ಹೀಗಾಗಿ ಪಂಜಾಬ್ ಕಿಂಗ್ಸ್ ಆಡಿದ 7ನೇ ಪಂದ್ಯದಲ್ಲಿ ಪೂರನ್‌ಗೆ ವಿಶ್ರಾಂತಿ ನೀಡಿ ಇಂಗ್ಲೆಂಡ್‌ನ ಡೇವಿಡ್ ಮಲಾನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿತ್ತು.

ಕೋವಿಡ್ ಹೋರಾಟಕ್ಕೆ ಕೈಜೋಡಿಸಿದ ಪೂರನ್‌, ಉನಾದ್ಕತ್, ಧವನ್‌

ಇದೀಗ ಟ್ವೀಟ್ ಮೂಲಕ ಬಲಿಷ್ಠವಾಗಿಯೇ ಕಮ್‌ಬ್ಯಾಕ್‌ ಮಾಡುವ ಮುನ್ಸೂಚನೆಯನ್ನು ನಿಕೋಲಸ್ ಪೂರನ್‌ ನೀಡಿದ್ದಾರೆ. ಟೂರ್ನಿಯನ್ನು ಮುಂದೂಡಿರುವುದು ನಿಜಕ್ಕೂ ಆಘಾತಕಾರಿಯಾದ ವಿಚಾರ. ಆದರೆ ಟೂರ್ನಿ ಮುಂದೂಡುವುದು ಅಗತ್ಯ ಕೂಡಾ ಆಗಿತ್ತು. ಐಪಿಎಲ್‌ನಲ್ಲಿ ಮತ್ತೆ ಸಿಗೋಣ. ನಾನು ಈ ಚಿತ್ರವನ್ನು ಸ್ಪೂರ್ತಿಯಾಗಿ ಇಟ್ಟುಕೊಳ್ಳುತ್ತೇನೆ. ಈ ಮೂಲಕ ಹಿಂದೆಂದಿಗಿಂತಲೂ ಬಲಿಷ್ಠವಾಗಿ ಕಮ್‌ ಬ್ಯಾಕ್ ಮಾಡುತ್ತೇನೆ. ಎಲ್ಲರೂ ಸುರಕ್ಷಿತವಾಗಿರಿ ಎಂದು ತಮ್ಮ ಬ್ಯಾಟಿಂಗ್ ವೈಫಲ್ಯದ ಫೋಟೊವನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

The suspension of the tournament and the reasons behind it are heart breaking, but neccessary. See you soon IPL!

In the meantime I'll be using this picture as my motivation to come back stronger than ever. Keep safe everyone. pic.twitter.com/NS0SyliX5i

— nicholas pooran #29 (@nicholas_47)

ಕೋವಿಡ್‌ ಎರಡನೇ ಅಲೆಗೆ ಭಾರತ ಬೆಚ್ಚಿಬಿದ್ದಿದೆ. ಭಾರತದ ಕೋವಿಡ್ ವಿರುದ್ದದ ಹೋರಾಟಕ್ಕೆ ನಿಕೋಲಸ್ ಪೂರನ್ ತಮ್ಮ ಐಪಿಎಲ್ ಸಂಬಳದ ಒಂದು ಸಂಬಳವನ್ನು ದೇಣಿಗೆಯಾಗಿ ನೀಡುವ ಮೂಲಕ ತಮ್ಮ ಮಾನವೀಯ ಮುಖವನ್ನು ಅನಾವರಣ ಮಾಡಿದ್ದಾರೆ. 


 

click me!