IPL 2021: ಕೆಕೆಆರ್‌ ಎದುರು ಚಾಂಪಿಯನ್‌ ಮುಂಬೈಗೆ ಪುಟಿದೇಳುವ ಗುರಿ

By Kannadaprabha NewsFirst Published Apr 13, 2021, 9:57 AM IST
Highlights

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಆಘಾತಕಾರಿ ಸೋಲು ಕಂಡಿದ್ದು ಇದೀಗ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದ ಗೆಲುವಿನ ಹಳಿಗೆ ಮರಳಲು ರೋಹಿತ್ ಶರ್ಮಾ ಪಡೆ ಎದುರು ನೋಡುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ. 

ಚೆನ್ನೈ(ಏ.13): ಸನ್‌ರೈಸ​ರ್ಸ್‌ ಹೈದರಾಬಾದ್‌ ವಿರುದ್ಧ ಮೊದಲ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿದ 2 ಬಾರಿ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡ​ರ್ಸ್‌, ಮಂಗಳವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಕೊನೆ ಎಸೆತದಲ್ಲಿ ಸೋಲು ಕಂಡಿದ್ದ ಮುಂಬೈ ಪುಟಿದೇಳುವ ಗುರಿ ಹೊಂದಿದೆ.

ಕಳೆದ 2 ಆವೃತ್ತಿಗಳಲ್ಲಿ ಪ್ಲೇ-ಆಫ್‌ ಸ್ಥಾನದಿಂದ ವಂಚಿತಗೊಂಡಿದ್ದ ಕೆಕೆಆರ್‌, ಈ ವರ್ಷ ಅತ್ಯಂತ ಬಲಿಷ್ಠವಾಗಿ ತೋರುತ್ತಿದೆ. ಆರಂಭಿಕರ ಭರ್ಜರಿ ಆಟ, ಫಿನಿಶರ್‌ ಪಾತ್ರದಲ್ಲಿ ದಿನೇಶ್‌ ಕಾರ್ತಿಕ್‌, ಭಾರತೀಯ ಹಾಗೂ ವಿದೇಶಿ ಬೌಲರ್‌ಗಳ ಸಂಯೋಜನೆ ಉತ್ತಮ ಫಲಿತಾಂಶ ನೀಡಿತ್ತು. ಇದೇ ಪ್ರದರ್ಶನವನ್ನು ಮುಂದುವರಿಸುವ ಗುರಿಯನ್ನು ಇಯಾನ್‌ ಮೊರ್ಗನ್‌ ಪಡೆ ಹೊಂದಿದೆ.

IPL 2021: ಪಂಜಾಬ್ ಕಿಂಗ್ಸ್ ಪಂದ್ಯ ಗೆದ್ದರೆ, ಹೃದಯ ಗೆದ್ದ ಸಂಜು ಸ್ಯಾಮ್ಸನ್!

ಮತ್ತೊಂದೆಡೆ ಮುಂಬೈ ಇಂಡಿಯನ್ಸ್‌ ಸಹ ಬಲಿಷ್ಠ ತಂಡವನ್ನು ಹೊಂದಿದೆ. ಕ್ವಿಂಟನ್‌ ಡಿ ಕಾಕ್‌ ಕ್ವಾರಂಟೈನ್‌ ಮುಕ್ತಾಯಗೊಳಿಸಿದ್ದು, ಈ ಪಂದ್ಯಕ್ಕೆ ಲಭ್ಯರಿದ್ದಾರೆ ಎಂದು ತಂಡದ ಕ್ರಿಕೆಟ್‌ ಕಾರ್ಯಾಚರಣೆಗಳ ನಿರ್ದೇಶಕ ಜಹೀರ್‌ ಖಾನ್‌ ಖಚಿತಪಡಿಸಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿದ ಹೊರತಾಗಿಯೂ ಕ್ರಿಸ್‌ ಲಿನ್‌ ಹೊರ ಕೂರಬೇಕಾಗುತ್ತದೆ. ಕೀರನ್‌ ಪೊಲ್ಲಾರ್ಡ್‌, ಟ್ರೆಂಟ್‌ ಬೌಲ್ಟ್‌ ಕಾಯಂ ಸದಸ್ಯರಾಗಿದ್ದು, ದ.ಆಫ್ರಿಕಾದ 20 ವರ್ಷದ ವೇಗಿ ಮಾರ್ಕೊ ಜಾನ್ಸೆನ್‌ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿದ್ದರು.

ರೋಹಿತ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌, ಹಾರ್ದಿಕ್‌, ಕೃನಾಲ್‌ ಪಾಂಡ್ಯ ಹೀಗೆ ಅತ್ಯಂತ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಮುಂಬೈ ಹೊಂದಿದೆ. ವೇಗಿ ಜಸ್‌ಪ್ರೀತ್‌ ಬೂಮ್ರಾ ಮೇಲೆ ತಂಡ ಹೆಚ್ಚಿನ ವಿಶ್ವಾಸವಿರಿಸಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ರೋಹಿತ್‌ ಶರ್ಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಕೀರನ್‌ ಪೊಲ್ಲಾರ್ಡ್‌, ಕೃನಾಲ್‌ ಪಾಂಡ್ಯ, ಮಾರ್ಕೊ ಜಾನ್ಸೆನ್‌, ರಾಹುಲ್‌ ಚಹರ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬೂಮ್ರ.

ಕೆಕೆಆರ್‌: ನಿತೀಶ್‌ ರಾಣಾ, ಶುಭ್‌ಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ಆ್ಯಂಡ್ರೆ ರಸೆಲ್‌, ಇಯಾನ್‌ ಮೊರ್ಗನ್‌(ನಾಯಕ), ದಿನೇಶ್‌ ಕಾರ್ತಿಕ್‌, ಶಕೀಬ್‌ ಅಲ್‌-ಹಸನ್‌, ಪ್ಯಾಟ್‌ ಕಮಿನ್ಸ್‌, ಹರ್ಭಜನ್‌ ಸಿಂಗ್‌, ವರುಣ್‌ ಚಕ್ರವರ್ತಿ, ಪ್ರಸಿದ್‌್ಧ ಕೃಷ್ಣ.

ಸ್ಥಳ: ಚೆನ್ನೈ

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

click me!