IPL 2021: ಪಂಜಾಬ್ ಕಿಂಗ್ಸ್ ಪಂದ್ಯ ಗೆದ್ದರೆ, ಹೃದಯ ಗೆದ್ದ ಸಂಜು ಸ್ಯಾಮ್ಸನ್!

By Suvarna NewsFirst Published Apr 12, 2021, 11:51 PM IST
Highlights

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅದ್ಭುತ ಪ್ರದರ್ಶನ ನೀಡಿ 4 ರನ್ ರೋಚಕ ಗೆಲುವು ಕಂಡಿದೆ. ಆದರೆ ಈ ಪಂದ್ಯದಲ್ಲಿ ಅಭಿಮಾನಿಗಳ ಹೃದಯ ಗೆದ್ದ ಕೀರ್ತಿ ಸಂಜು ಸ್ಯಾಮ್ಸನ್‌ಗೆ ಸಲ್ಲಲಿದೆ. ಭರ್ಜರಿ ಶತಕ ಸಿಡಿಸಿ, ಏಕಾಂಗಿಯಾಗಿ ಹೋರಾಡಿ ಹೊಸ ದಾಖಲೆ ಬರೆದಿದ್ದಾರೆ.

ಮುಂಬೈ(ಏ.12):  ಟಾರ್ಗೆಟ್ 222 ರನ್. ತಂಡದ ಸಹ ಆಟಗಾರರು 25ರ ಗಡಿ ದಾಟಿಲ್ಲ. ಆದರೂ ಚಿಂತೆ ಇಲ್ಲ, ಎಲ್ಲಾ ಜವಾಬ್ದಾರಿಗಳನ್ನು ಹೆಗಲಮೇಲೆ ಹೊತ್ತು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 63 ಎಸೆತದಲ್ಲಿ 119 ರನ್ ಸಿಡಿಸಿ ಅಂತಿಮ ಎಸೆದಲ್ಲಿ ಔಟಾದರು. ಹೀಗಾಗಿ ಪಂಜಾಬ್ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಪಂಜಾಬ್ ಕೇವಲ ಪಂದ್ಯವನ್ನು ಮಾತ್ರ ಗೆದ್ದುಕೊಂಡಿತು. ಅಭಿಮಾನಿಗಳ ಹೃದಯ ಗೆದ್ದಿದ್ದು ಸಂಜು ಸ್ಯಾಮ್ಸನ್.

222 ರನ್ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಬೆನ್ ಸ್ಟೋಕ್ಸ್ ವಿಕೆಟ್ ಕಳದುಕೊಂಡಿತು. ಸ್ಟೋಕ್ಸ್ ಶೂನ್ಯ ಸುತ್ತಿದ್ದರು. ಇನ್ನು ಮನನ್ ವೊಹ್ರಾ 12 ರನ್ ಸಿಡಿಸಿ ಔಟಾದರು. 25 ರನ್‌ಗೆ 2 ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ಸಂಜು ಸ್ಯಾಮ್ಸನ್ ಪ್ರದರ್ಶನ ಚೇತರಿಕೆ ನೀಡಿತು. ಇದರ ನಡುವೆ ಜೋಸ್ ಬಟ್ಲರ್ 15 ರನ್ ಸಿಡಿಸಿ ಔಟಾದರು.

ಶಿವಂ ದುಬೆ ಕೇವಲ 23 ರನ್‌ಗೆ ಸುಸ್ತಾದರು. ಆದರೆ ಅಬ್ಬರಿಸಿದ ಸಂಜು ಸ್ಯಾಮ್ಸನ್ ಹಾಫ್ ಸೆಂಚುರಿ ಸಿಡಿಸಿದರು. ಸ್ಯಾಮ್ಸನ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ಆದರೆ ಅದೆಷ್ಟೇ ಬೃಹತ್ ಮೊತ್ತವನ್ನು ಚೇಸ್ ಮಾಡಲು ಸ್ಯಾಮ್ಸನ್ ಸಜ್ಜಾಗಿದ್ದರು. ಸಂಜು ಅಬ್ಬರಕ್ಕೆ ಪಂಜಾಬ್ ಕಿಂಗ್ಸ್ ಒಂದು ಕ್ಷಣ ದಂಗಾಗಿ ಹೋಯಿತು.

ರಿಯಾನ್ ಪರಾಗ್ ಜೊತೆ ಸೇರಿಕೊಂಡ ಸ್ಯಾಮ್ಸನ್ ರನ್ ವೇಗ ಹೆಚ್ಚಿಸಿದರು. ಆದರೆ ರಿಯಾನ್ 25 ರನ್ ಸಿಡಿಸಿ ಔಟಾದರು. ಆದರೆ ಸಂಜು ಅಬ್ಬರ ಮುಂದುವರಿಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು 53 ಎಸೆತದಲ್ಲಿ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 3ನೇ ಶತಕ ಸಿಡಿಸಿ ಹೆಗ್ಗಳಿಕೆಗೆ ಪಾತ್ರರಾದರು.

ರಾಹುಲ್ ಟಿವಾಟಿಯಾ ಕೆವಲ 2 ರನ್ ಸಿಡಿಸಿ ಔಟಾದರು. ಸಂಜು ಹೋರಾಟದಿಂದ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 13 ರನ್ ಅವಶ್ಯಕತೆ ಇತ್ತು. ಸಿಕ್ಸರ್ ಸಿಡಿಸಿದ ಸ್ಯಾಮ್ಸನ್ ಅಂತಿಮ 2 ಎಸೆತದಲ್ಲಿ 5 ರನ್‌ಗಳ ಬೇಕಿತ್ತು. ಆದರೆ ಅಂತಿಮ ಎಸೆತದಲ್ಲಿ ಸಂಜು ಸಾಮ್ಸನ್ ಔಟಾಗೋ ಮೂಲಕ ಪಂಜಾಬ್ 4 ರನ್ ರೋಚಕ ಗೆಲುವು ಸಾಧಿಸಿತು. 

click me!