ಐಪಿಎಲ್ 2021: ಮುಂಬೈ- ಚೆನ್ನೈ ಬದ್ಧವೈರಿಗಳ ಕಾದಾಟಕ್ಕೆ ಕ್ಷಣಗಣನೆ ಆರಂಭ

By Kannadaprabha NewsFirst Published May 1, 2021, 10:57 AM IST
Highlights

14ನೇ ಆವೃತ್ತಿಯ ಟೂರ್ನಿಯ ಎರಡು ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ(ಮೇ.01): ಐಪಿಎಲ್‌ 14ನೇ ಆವೃತ್ತಿಯ ಬಹುನಿರೀಕ್ಷಿತ ಪಂದ್ಯದಲ್ಲಿ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳು ಮುಖಾಮುಖಿಯಾಗಲಿವೆ. 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ 3 ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ಕಿಂಗ್ಸ್‌ ನಡುವಿನ ಸಮರಕ್ಕೆ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣ ಶನಿವಾರ ಸಾಕ್ಷಿಯಾಗಲಿದೆ.

ಎರಡೂ ತಂಡಗಳು ಪ್ರಾಬಲ್ಯ ಮೆರೆಯಲು ಕಾತರಿಸುತ್ತಿವೆ. ಚೆನ್ನೈ ಈಗಾಗಲೇ ಸತತ 5 ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದರೆ, ಮಿಶ್ರ ಫಲ ಅನುಭವಿಸುತ್ತಿರುವ ಮುಂಬೈ ಸ್ಥಿರತೆ ಕಾಯ್ದುಕೊಳ್ಳಲು ಎದುರು ನೋಡುತ್ತಿದೆ.

ಚೆನ್ನೈನ ಆರಂಭಿಕರಾದ ಋುತುರಾಜ್‌ ಹಾಗೂ ಫಾಫ್‌ ಡು ಪ್ಲೆಸಿ ಭರ್ಜರಿ ಲಯದಲ್ಲಿದ್ದಾರೆ. ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಈ ಇಬ್ಬರು ಯಶಸ್ವಿಯಾಗುತ್ತಿದ್ದಾರೆ. ಮೋಯಿನ್‌ ಅಲಿ, ಸುರೇಶ್‌ ರೈನಾ, ಅಂಬಟಿ ರಾಯುಡು, ಎಂ.ಎಸ್‌.ಧೋನಿ, ಸ್ಯಾಮ್‌ ಕರ್ರನ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಪಡೆ ಯಾವುದೇ ಎದುರಾಳಿಯ ಮೇಲೆ ಸವಾರಿ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.

ಚೆನ್ನೈನ ಬೌಲರ್‌ಗಳ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದೀಪಕ್‌ ಚಹರ್‌ ಪವರ್‌-ಪ್ಲೇನಲ್ಲಿ ಆರ್ಭಟಿಸುತ್ತಿದ್ದು, ರವೀಂದ್ರ ಜಡೇಜಾ, ಕರ್ರನ್‌, ಲುಂಗಿ ಎನ್‌ಗಿಡಿ, ಶಾರ್ದೂಲ್‌ ಠಾಕೂರ್‌, ಅಲಿ ಹೀಗೆ ಹಲವು ಬೌಲಿಂಗ್‌ ಆಯ್ಕೆಗಳು ನಾಯಕ ಧೋನಿ ಮುಂದಿದೆ.

ರಾಹುಲ್ ಬ್ಯಾಟಿಂಗ್, ಹರ್ಪ್ರೀತ್ ಬೌಲಿಂಗ್; RCBಗೆ ಶಾಕಿಂಗ್ ಸೋಲು!

ಮತ್ತೊಂದೆಡೆ ಕ್ವಿಂಟನ್‌ ಡಿ ಕಾಕ್‌ ಲಯ ಕಂಡುಕೊಂಡಿರುವುದು ಮುಂಬೈ ಆತ್ಮವಿಶ್ವಾಸ ಹೆಚ್ಚಿಸಿದೆ. ರೋಹಿತ್‌, ಸೂರ್ಯಕುಮಾರ್‌, ಕೃನಾಲ್‌, ಹಾರ್ದಿಕ್‌, ಪೊಲ್ಲಾರ್ಡ್‌ ಹೀಗೆ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ದಂಡೇ ಇದೆ. ಕಳೆದ ಪಂದ್ಯದಲ್ಲಿ ಆಡದ ಇಶಾನ್‌ ಕಿಶನ್‌ಗೆ ಈ ಪಂದ್ಯದಲ್ಲಿ ಅವಕಾಶ ಸಿಗುತ್ತದೆಯೇ ಎನ್ನುವ ಕುತೂಹಲವಿದೆ. ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌ ತಂಡದ ಬೌಲಿಂಗ್‌ ಟ್ರಂಪ್‌ಕಾರ್ಡ್‌ಗಳಾಗಿದ್ದು, ರಾಹುಲ್‌ ಚಹರ್‌ ತಮ್ಮ ಸ್ಪಿನ್‌ ದಾಳಿಯಿಂದ ತಂಡಕ್ಕೆ ಭರ್ಜರಿ ಕೊಡುಗೆ ನೀಡುತ್ತಿದ್ದಾರೆ. ಬದ್ಧವೈರಿಗಳ ನಡುವಿನ ಕಾದಾಟ ಭಾರೀ ಕುತೂಹಲ ಮೂಡಿಸಿದ್ದು, ಎರಡೂ ತಂಡಗಳಿಗೆ ಇದು ಪ್ರತಿಷ್ಠಿತ ಪಂದ್ಯವೆನಿಸಿದೆ.

ಪಿಚ್‌ ರಿಪೋರ್ಟ್‌: ಜೇಟ್ಲಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 170ರಿಂದ 180 ರನ್‌ ಆಗಿದೆ. 2ನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯ ಸಮಸ್ಯೆ ಇರಲಿದ್ದು, ಬೌಲ್‌ ಮಾಡುವ ತಂಡಕ್ಕೆ ಕಷ್ಟವಾಗಲಿದೆ. ಹೀಗಾಗಿ ಟಾಸ್‌ ಗೆಲ್ಲುವುದು ಮುಖ್ಯವೆನಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ಡಿ ಕಾಕ್‌, ರೋಹಿತ್‌(ನಾಯಕ), ಸೂರ್ಯ, ಕೃನಾಲ್‌, ಹಾರ್ದಿಕ್‌, ಪೊಲ್ಲಾರ್ಡ್‌, ಜಯಂತ್‌, ಕೌಲ್ಟರ್‌-ನೈಲ್‌, ಚಹರ್‌, ಬುಮ್ರಾ, ಬೌಲ್ಟ್‌.

ಚೆನ್ನೈ: ಡು ಪ್ಲೆಸಿ, ಋುತುರಾಜ್‌, ಅಲಿ, ರೈನಾ, ರಾಯುಡು, ಧೋನಿ(ನಾಯಕ), ಜಡೇಜಾ, ಸ್ಯಾಮ್‌ ಕರ್ರನ್‌, ಶಾರ್ದೂಲ್‌, ದೀಪಕ್‌, ಲುಂಗಿ ಎನ್‌ಗಿಡಿ.

ಸ್ಥಳ: ನವದೆಹಲಿ
ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

click me!