ದುಬೈ(ಅ.15): IPL 2021ರ ಚಾಂಪಿಯನ್(Champion) ಪಟ್ಟವನ್ನು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಮುಡಿಗೇರಿಸಿಕೊಂಡಿದೆ. ಕೋಲ್ಕತಾ ನೈಟ್ ರೈಡರ್ಸ್(KKR) ವಿರುದ್ಧದ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಚೆನ್ನೈ 27 ರನ್ ಗೆಲುವು ದಾಖಲಿಸಿದೆ. ಈ ಮೂಲಕ ಸಿಎಸ್‌ಕೆ 4ನೇ ಬಾರಿಗೆ ಐಪಿಎಲ್ ಟ್ರೋಫಿ(IPL Trophy) ಗೆದ್ದ ಸಾಧನೆ ಮಾಡಿತು. 7 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆಲ್ಲುವ ಕೆಕೆಆರ್ ಕನಸು ಕೈಗೂಡಲಿಲ್ಲ. ರನ್ನರ್ ಅಪ್(Runner Up) ಪ್ರಸಶ್ತಿಗೆ ಮಾರ್ಗನ್ ಸೈನ್ಯ ತಪ್ತಿಪಟ್ಟುಕೊಂಡಿತು.
IPL 2021 Final:ಕೆಎಲ್ ರಾಹುಲ್ ದಾಖಲೆ ಮುರಿದು ಇತಿಹಾಸ ರಚಿಸಿದ ರುತುರಾಜ್!
ವಯಸ್ಸು 40, ಆದರೆ ಸಾಮರ್ಥ್ಯ, ನಾಯಕತ್ವ, ಚಾಣಾಕ್ಷತನ, ಅದೆಂಥಾ ಪರಿಸ್ಥಿತಿಯಲ್ಲೂ ತಂಡವನ್ನು ಮುನ್ನಡೆಸುವ ಛಾತಿ ಎಂ.ಎಸ್.ಧೋನಿಗೆ ಬಿಟ್ಟರೆ ಇನ್ಯಾರಿಗೂ ತಿಳಿದಿಲ್ಲ. ಹೀಗಾಗಿ ಕೂಲ್ ಕ್ಯಾಪ್ಟನ್ ಧೋನಿ(MS DHoni) 4ನೇ ಬಾರಿಗೆ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಕೊರೋನಾ(Coronaviurs) ಸಂಕಷ್ಟ, ಭಾರತದಿಂದ ದುಬೈಗೆ(Dubai) ಸ್ಥಳಾಂತರ ಸೇರಿದಂತೆ ಹಲವು ಅಡೆತಡೆಗಳನ್ನು ಎದುರಿಸಿದ ಐಪಿಎಲ್ 2021 ಟೂರ್ನಿ ಯಶಸ್ವಿಯಾಗಿ ಅಂತ್ಯಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.
ಫೈನಲ್ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಸಿಡಿಸಿದ 86 ರನ್, ಮೊಯಿನ್ ಆಲಿ 37 ರನ್, ರುತುರಾಜ್ ಗಾಯಕ್ವಾಡ್ 32 ರನ್ ಹಾಗೂ ರಾಬಿನ್ ಉತ್ತಪ್ಪ ಸಿಡಿಸಿದ 31 ರನ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 3 ವಿಕೆಟ್ ನಷ್ಟಕ್ಕೆ 192 ರನ್ ಸಿಡಿಸಿತು. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 193 ರನ್ ಟಾರ್ಗೆಟ್ ನೀಡಿತು.
193 ರನ್ ಟಾರ್ಗೆಟ್ ಬೃಹತ್ ಆಗಿದ್ದರೂ ಕೋಲ್ಕತಾ ನೈಟ್ ರೈಡರ್ಸ್ ಆತಂಕಕ್ಕೆ ಒಳಗಾಗಲಿಲ್ಲ. ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್ ಆರಂಭ ಕೆಕೆಆರ್ ತಂಡ ಫೈನಲ್ ಪಂದ್ಯದಲ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಈ ಜೋಡಿ ಅರ್ಧಶತಕ ಜೊತೆಯಾಟ ನೀಡಿತು.
IPL 2021: KKR ತಂಡದ ಆಟಗಾರರ ಗ್ಲಾಮರ್ಸ್ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್!
ಕೆಕೆಆರ್ ಆರಂಭಿಕರ ಜೊತೆಯಾಟ ಚೆನ್ನೈ ತಂಡದ ಆತಂಕಕ್ಕೆ ಕಾರಣವಾಯಿತು. ಬೃಹತ್ ಮೊತ್ತ ನಿಧನಾವಾಗಿ ಮುಂಜುಗಡ್ಡೆಯಂತೆ ಕರಗತೊಡಗಿತು. 10 ಓವರ್‌ಗಳಲ್ಲಿ ಗಿಲ್ ಹಾಗೂ ಅಯ್ಯರ್ 88 ರನ್ ಸಿಡಿಸಿದರು. ಅಯ್ಯರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.
ಇದರ ನಡುವೆ ಹೈಡ್ರಾಮ ಒಂದು ನಡೆದು ಹೋಯಿತು.ಗಿಲ್ ಸಿಡಿಸಿದ ಚೆಂಡು ಸ್ಲೈಡರ್ ಕ್ಯಾಮರ ಕೇಬಲ್ ಬಡಿದು ಬಂದ ಕ್ಯಾಚನ್ನು ಅಂಬಾಟಿ ರಾಯುಡು ಹರಸಾಹಸ ಪಟ್ಟು ಹಿಡಿದು ಸಂಭ್ರಮಿಸಿದರು. ಆದರೆ ಕೇಬಲ್‌ಗೆ ಬಡಿದ ಕಾರಣ ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಿದರು. ಇದರಿಂದ ಶುಭಮನ್ ಗಿಲ್ ಅಜೇಯರಾಗಿ ಉಳಿದರು.
ಗಿಲ್ ಅಬ್ಬರ ಮುಂದುವರಿಸಿದರೆ, ವೆಂಕಟೇಶ್ ಅಯ್ಯರ್ 50 ರನ್ ಸಿಡಿಸಿ ಔಟಾದರು. ಈ ಮೂಲಕ ಚೆನ್ನೇ ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ಹಾಕಿತು. ಮೊದಲ ವಿಕೆಟ್‌ಗೆ ಅಯ್ಯರ್ ಹಾಗೂ ಗಿಲ್ 91 ರನ್ ಜೊತೆಯಾಟ ನೀಡಿದರು. ಇದರೊಂದಿಗೆ ಈ ಆವೃತ್ತಿಯಲ್ಲಿ ಕೆಕೆಆರ್ ಪರ ಅತ್ಯುತ್ತಮ ಜೊತೆಯಾಟ ನೀಡಿದ 3ನೇ ಜೋಡಿ ಅನ್ನೋ ಹೆಗ್ಗಳಿಗೆ ಪಾತ್ರರಾದರು.
ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ಪರ ಅತ್ಯುತ್ತಮ ಜೊತೆಯಾಟ ನೀಡಿದ ಜೋಡಿ:
566 ರನ್, ಗೌತಮ್ ಗಂಭೀರ್ - ರಾಬಿನ್ ಉತ್ತಪ್ಪ (2016)
533 ರನ್, ಗೌತಮ್ ಗಂಭೀರ್ - ಬ್ರೆಂಡನ್ ಮೆಕಲಂ (2012)
508 ರನ್, ಶುಭಮನ್ ಗಿಲ್ -ವೆಂಕಟೇಶ್ ಅಯ್ಯರ್ (2021)
490 ರನ್, ಗೌತಮ್ ಗಂಭೀರ್ -ರಾಬಿನ್ ಉತ್ತಪ್ಪ (2014)
ಅಯ್ಯರ್ ವಿಕೆಟ್ ಪತನದ ಬೆನ್ನಲ್ಲೇ ಕೆಕೆಆರ್ ಮತ್ತೊಂದು ಆಘಾತ ಅನುಭವಿಸಿದೆ. ನಿತೀಶ್ ರಾಣಾ ಡಕೌಟ್ ಆದರು. ಇನ್ನು ಪ್ಲೇ ಆಫ್ ಸುತ್ತಿನಲ್ಲಿ ಕೆಕೆಆರ್ ತಂಡದ ಕೈಹಿಡಿದ್ದ ಸುನಿಲ್ ನರೈನ್ ಮಹತ್ವದ ಪಂದ್ಯದಲ್ಲಿ ಅಬ್ಬರಿಸಲಿಲ್ಲ. ನರೈನ್ ಕೇವಲ 2 ರನ್ ಸಿಡಿಸಿ ಔಟಾದರು.
3 ವಿಕೆಟ್ ಕಬಳಿಸಿದ ಚೆನ್ನೈ ತಂಡದ ಮೇಲೆ ಮತ್ತೆ ಹಿಡಿತ ಸಾಧಿಸಲು ಆರಂಭಿಸಿತು. ಅಬ್ಬರಿಸಿದ ಗಿಲ್ ಅರ್ಧಶತಕ ಸಿಡಿಸಿದರು. ಆದರೆ 51 ರನ್ ಸಿಡಿಸಿ ಗಿಲ್ ವಿಕೆಟ್ ಕೈಚೆಲ್ಲಿದರು. ದಿನೇಶ್ ಕಾರ್ತಿಕ್ 9 ರನ್ ಸಿಡಿಸಿ ಔಟಾದರು. ಶಕೀಬ್ ಅಲ್ ಹಸನ್ ಕೂಡ ನೆರವಾಗಲಿಲ್ಲ.
ರಾಹುಲ್ ತ್ರಿಪಾಠಿ 2 ರನ್ ಸಿಡಿಸಿ ಔಟಾದರೆ, ನಾಯಕ ಇಯಾನ್ ಮಾರ್ಗನ್ ಕೇವಲ 4 ರನ್ ಸಿಡಿಸಿ ನಿರ್ಗಮಿಸಿದರು. ಕೆಕೆಆರ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 48 ರನ್ ಅವಶ್ಯಕತೆ ಇತ್ತು. ಒಂದು ಹಂತದಲ್ಲಿ ಕೆಕೆಆರ್ ತಂಡ ನಿರಾಯಾಸವಾಗಿ ಪಂದ್ಯ ಗೆಲ್ಲಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಕೈತಪ್ಪಿ ಹೋಗಿದ್ದ ಪಂದ್ಯವನ್ನು ಧೋನಿ ತನ್ನ ಚಾಣಾಕ್ಷ ನಾಯಕತ್ವದ ಮೂಲಕ ಮತ್ತೆ ದಕ್ಕಿಸಿಕೊಂಡರು.
ಅಂತಿಮ ಹಂತದಲ್ಲಿ ಶಿವಂ ಮಾವಿ ಸಿಕ್ಸರ್ ಮೂಲಕ ಅಬ್ಬರಿಸಿದರು. ಮಾವಿ 20 ರನ್ ಸಿಡಿಸಿದರು. ಲ್ಯೂಕಿ ಫರ್ಗ್ಯೂಸನ್ ಅಜೇಯ 18 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 9 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 27 ರನ್ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮೈದಾನದಲ್ಲಿ ಕುಣಿದು ಕುಪ್ಪಳಿಸಿತು. 4ನೇ ಐಪಿಎಲ್ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಐಪಿಎಲ್ ಸಮರದಲ್ಲಿ ಬಲಿಷ್ಠ ತಂಡ ಅನ್ನೋದನ್ನು ಮತ್ತೊಮ್ಮೆ ಸಾಬೀತುಪಡಿಸಿತು.