
ಸಿಡ್ನಿ(ಡಿ.06): ಏಕದಿನ ಸರಣಿ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ. ಸಿಡ್ನಿಯಲ್ಲಿ ನಡೆದ 2ನೇ ಟಿ20 ಪಂದ್ಯ ಗೆಲ್ಲೋ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಟೀಂ ಇಂಡಯಾ ಟಿ20 ಸರಣಿ ಗೆದ್ದುಕೊಂಡಿದೆ.
ಸಿಡ್ನಿ ಮೈದಾನದ ಅಂಕಿ ಅಂಶ ಭಾರತದ ಪರವಾಗಿತ್ತು ಅನ್ನೋದು ನಿಜ. ಆದರೆ 195 ರನ್ ಟಾರ್ಗೆಟ್ ಚೇಸ್ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡೋ ಮೂಲಕ ಆಸೀಸ್ ತಂಡಕ್ಕೆ ಸ್ಪಷ್ಟ ಸೂಚನೆ ನೀಡಿದರು.
ಕೆಎಲ್ ರಾಹುಲ್ 22 ಎಸತದಲ್ಲಿ 30 ರನ್ ಸಿಡಿಸಿ ಔಟಾದರು. ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ಹೋರಾಟ ಮುಂದುರಿಸಿತು. ದಿಟ್ಟ ಹೋರಾಟ ನೀಡಿದ ಶಿಖರ್ ಧವನ್ ಅರ್ಧಶತಕ ಸಿಡಿಸಿದರು.
ಧವನ್ 36 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಬಂದ ಸಂಜು ಸಾಮ್ಸನ್ ಅಬ್ಬರಿಸುವ ಸೂಚನೆ ನೀಡಿದರು. ಆದರೆ 15 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.
ಜವಾಬ್ದಾರಿ ಹೆಗಲಮೇಲೆ ಹೊತ್ತ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಕೊಹ್ಲಿ 24 ಎಸೆದಲ್ಲಿ 40 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಯಿತು.
ಇತ್ತ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಆಸರೆಯಾದರು. ಅಂತಿಮ 12 ಎಸೆತದಲ್ಲಿ ಟೀಂ ಇಂಡಿಯಾ ಗೆಲುವಿಗೆ 25 ರನ್ ಅವಶ್ಯಕತೆ ಇತ್ತು. ಪಾಂಡ್ಯ ಹಾಗೂ ಅಯ್ಯರ್ ಹೋರಾಟ ಆಸೀಸ್ ತಂಡಕ್ಕೆ ತಲೆನೋವಾಯಿತು. ಸತತ 2 ಭರ್ಜರಿ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಇನ್ನು 2 ಎಸೆತ ಬಾಕಿ ಇರುವಂತೆ ಟೀ ಇಂಡಿಯಾಗೆ 6 ವಿಕೆಟ್ ಗೆಲುವು ತಂದುಕೊಟ್ಟರು. ಪಾಂಡ್ಯ 22 ಎಸೆತದಲ್ಲಿ ಅಜೇಯ 42 ರನ್ ಸಿಡಡಿಸಿದರೆ, ಅಯ್ಯರ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಭಾರತ 2-0 ಅಂತರದಲ್ಲಿ ಸರಣಿಗೆದ್ದುಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.