ಮಹಿಳಾ ಬಿಗ್‌ಬ್ಯಾಶ್‌: ಸಿಡ್ನಿ ಸಿಕ್ಸ​ರ್ಸ್‌ ತಂಡಕ್ಕೆ ಶಫಾಲಿ ಸೇರ್ಪಡೆ

By Suvarna NewsFirst Published May 14, 2021, 1:28 PM IST
Highlights

* ಮೊದಲ ಬಾರಿಗೆ ಮಹಿಳಾ ಬಿಗ್ ಬ್ಯಾಶ್ ಟೂರ್ನಿ ಆಡಲು ಸಜ್ಜಾದ ಶಫಾಲಿ ವರ್ಮಾ

* ಸಿಡ್ನಿ ಸಿಕ್ಸರ್‌ ಫ್ರಾಂಚೈಸಿ ಜತೆ ಒಪ್ಪಂದಕ್ಕೆ ಸಹಿ ಹಾಕಿದ ಶಫಾಲಿ 

* ಕೇವಲ ವರ್ಷದ ಶಫಾಲಿ ವರ್ಮಾ ಮೇಲೆ ಎಲ್ಲರ ಚಿತ್ತ

ನವದೆಹಲಿ(ಮೇ.14): ಭಾರತದ 17 ವರ್ಷದ ಬ್ಯಾಟರ್‌, ಐಸಿಸಿ ವಿಶ್ವ ಟಿ20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಶಫಾಲಿ ವರ್ಮಾ ಈ ವರ್ಷ ಆಸ್ಪ್ರೇಲಿಯಾದ ಮಹಿಳಾ ಬಿಗ್‌ ಬ್ಯಾಶ್‌ ಲೀಗ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಸಿಡ್ನಿ ಸಿಕ್ಸ​ರ್ಸ್‌ ತಂಡದೊಂದಿಗೆ ಶಫಾಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಹೌದು, ಶಫಾಲಿ, ಸಿಡ್ನಿ ಸಿಕ್ಸರ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ. ಆಕೆ ಅಪ್ರಾಪ್ತೆ(ಮೈನರ್)ಯಾಗಿರುವುದರಿಂದ ನನ್ನ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಶಫಾಲಿ ವರ್ಮಾ ತಂದೆ ಸಂಜೀವ್‌ ಇಎಸ್‌ಪಿಎನ್‌ ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ. ನನ್ನ ಮಗಳಿಗೆ ಮಹಿಳಾ ಬಿಗ್‌ ಬ್ಯಾಶ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿ ಸಹಕರಿಸಿದ ಬಿಸಿಸಿಐ ಹಾಗೂ ಹರಿಯಾಣ ಕ್ರಿಕೆಟ್‌ ಸಂಸ್ಥೆಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹರಿಯಾಣ ಕ್ರಿಕೆಟ್ ಸಂಸ್ಥೆಯ ಮಾರ್ಗದರ್ಶನದಿಂದಲೇ ಶಫಾಲಿ ವೃತ್ತಿಜೀವನ ಈ ಮಟ್ಟಕ್ಕೇರಲು ಸಾಧ್ಯವಾಗಿದೆ ಎಂದು ಸಂಜೀವ್ ಹೇಳಿದ್ದಾರೆ.

ವಿದೇಶಿ ಕ್ರಿಕೆಟ್‌ ಲೀಗ್‌ಗಳಲ್ಲಿ ಶಫಾಲಿ ವರ್ಮಾಗೆ ಭಾರೀ ಬೇಡಿಕೆ!

ಇದೇ ವೇಳೆ ಸ್ಪಿನ್ನರ್‌ ರಾಧಾ ಯಾದವ್‌ ಜೊತೆ ಸಹ ಸಿಡ್ನಿ ಸಿಕ್ಸರ್ಸ್ ತಂಡ ಮಾತುಕತೆ ನಡೆಸುತ್ತಿದ್ದು, ಸದ್ಯದಲ್ಲೇ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಹರ್ಮನ್‌ಪ್ರೀತ್‌ ಕೌರ್‌(ಸಿಡ್ನಿ ಸಿಕ್ಸ​ರ್ಸ್‌), ಸ್ಮೃತಿ ಮಂಧನಾ (ಬ್ರಿಸ್ಬೇನ್‌ ಹೀಟ್‌) ಹಾಗೂ ವೇದಾ ಕೃಷ್ಣಮೂರ್ತಿ (ಹೊಬಾರ್ಟ್‌ ಹರಿಕೇನ್ಸ್‌) ಬಿಗ್‌ ಬ್ಯಾಶ್‌ನಲ್ಲಿ ಆಡಿದ್ದಾರೆ.

ಈಗಾಗಲೇ ಶಫಾಲಿ ವರ್ಮಾ ಚೊಚ್ಚಲ ಆವೃತ್ತಿಯ ದಿ ಹಂಡ್ರೆಡ್ ಟೂರ್ನಿಯಲ್ಲಿ ಬರ್ಮಿಂಗ್‌ಹ್ಯಾಮ್‌ ತಂಡದೊಟ್ಟಿಗೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಒಟ್ಟಿನಲ್ಲಿ ಶಫಾಲಿ ವರ್ಮಾ ಪಾಲಿಗೆ ಸದ್ಯಕ್ಕಂತೂ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಶಫಾಲಿ, ಭಾರತ ಪರ ಇದುವರೆಗೂ 22 ಪಂದ್ಯಗಳನ್ನಾಡಿ 148.31ರ ಸ್ಟ್ರೈಕ್‌ರೇಟ್‌ನಲ್ಲಿ 617 ರನ್‌ ಬಾರಿಸಿದ್ದಾರೆ.
 

click me!