ಬೆಂಗಳೂರು: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಭಾರತದ ಟೆಸ್ಟ್ ನಾಯಕತ್ವದ ಹುದ್ದೆಗೆ ಯಾರನ್ನು ಆಯ್ಕೆ ಮಾಡಬಹುದು ಎನ್ನುವುದರ ಕುರಿತಂತೆ ಟೀಂ ಇಂಡಿಯಾ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸಿಸಿ ವಿಮರ್ಶೆಯ ಇತ್ತೀಚಿನ ಸಂಚಿಕೆಯಲ್ಲಿ ನಿರೂಪಕಿ ಸಂಜನಾ ಗಣೇಶನ್ ಅವರೊಂದಿಗೆ ನಾಯಕತ್ವ ವಹಿಸಿಕೊಳ್ಳುವ ಅಭ್ಯರ್ಥಿಗಳ ಬಗ್ಗೆ ಶಾಸ್ತ್ರಿ ಚರ್ಚಿಸಿದ್ದಾರೆ.
ಟೀಂ ಇಂಡಿಯಾ ನೂತನ ಟೆಸ್ಟ್ ನಾಯಕನನ್ನು ನೇಮಕಮಾಡುವ ಮುನ್ನ ಆಯ್ಕೆ ಸಮಿತಿಯು ಭವಿಷ್ಯತೆಗೆ ಆದ್ಯತೆ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಇದೀಗ ವೇಳೆ ಮಾರಕ ವೇಗಿ ಬುಮ್ರಾ ಅವರಿಗೆ ನಾಯಕತ್ವದ ಹೊರೆ ಹೊರಿಸಬಾರದು ಎನ್ನುವ ಕಿವಿಮಾತು ಹೇಳಿದ್ದಾರೆ.
“ನೋಡಿ, ನನಗೆ, ಆಸ್ಟ್ರೇಲಿಯಾ ಸರಣಿ ನಂತರ ಜಸ್ಪ್ರೀತ್ ಬುಮ್ರಾ ಸ್ಪಷ್ಟ ಆಯ್ಕೆಯಾಗಿದ್ದರು. ಆದರೆ ನಾನು ಜಸ್ಪ್ರೀತ್ ನಾಯಕನಾಗಬೇಕೆಂದು ಬಯಸುವುದಿಲ್ಲ. ಒಂದು ವೇಳೆ ನೀವು ಅವರನ್ನು ನಾಯಕರನ್ನಾಗಿ ಮಾಡಿದರೆ, ನೀವು ಅವರನ್ನು ಬೌಲರ್ ಆಗಿ ಕಳೆದುಕೊಳ್ಳುತ್ತೀರಿ” ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ
ಟೆಸ್ಟ್ ನಾಯಕತ್ವಕ್ಕೆ ಗಿಲ್ ಮತ್ತು ಪಂತ್ ಆಯ್ಕೆ ಬೆಸ್ಟ್ ಎಂದ ಶಾಸ್ತ್ರಿ:
ಭಾರತದ ವೇಗದ ಬೌಲರ್ ಬುಮ್ರಾ ಮೇಲೆ ಒತ್ತಡವನ್ನು ಹೆಚ್ಚಿಸುವ ಬದಲು, ಶುಭ್‌ಮನ್ ಗಿಲ್ ಮತ್ತು ರಿಷಭ್ ಪಂತ್ ಅವರಿಗೆ ನಾಯಕತ್ವ ಪಟ್ಟ ಕಟ್ಟುವುದು ಒಳ್ಳೆಯದ್ದು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಅವರ ವಯಸ್ಸು ಮತ್ತು ದೀರ್ಘಾಯುಷ್ಯವು ಈ ಆಯ್ಕೆಯ ಹಿಂದಿನ ಪ್ರಮುಖ ಅಂಶಗಳಾಗಿವೆ ಎಂದು ಅವರು ಹೇಳಿದ್ದಾರೆ. 'ಭಾರತ ಟೆಸ್ಟ್ ನಾಯಕತ್ವಕ್ಕೆ ನೀವು ಯಾರನ್ನಾದರೂ ತಯಾರು ಮಾಡಿ. ಸದ್ಯ ಶುಭ್‌ಮನ್ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ನಾನು ಹೇಳುತ್ತೇನೆ. ಅವರಿಗೆ ಅವಕಾಶ ನೀಡಿ. ಅವರಿಗೆ 25, 26 ವರ್ಷ, ಅವರಿಗೆ ಸಮಯ ಕೊಡಿ” ಎಂದು ರವಿಶಾಸ್ತ್ರಿ ಹೇಳಿದರು.
'ರಿಷಭ್ ಕೂಡ ಇದ್ದಾರೆ. ನಾನು ಈ ಇಬ್ಬರನ್ನು ಭಾರತ್ ಟೆಸ್ಟ್ ತಂಡದ ಭವಿಷ್ಯದ ಕ್ಯಾಪ್ಟನ್ ಆಗಿ ನೋಡುತ್ತಿದ್ದೇನೆ ಏಕೆಂದರೆ ಅವರ ವಯಸ್ಸು, ಮತ್ತು ಅವರ ಮುಂದೆ ಒಂದು ದಶಕವಿದೆ. ಆದ್ದರಿಂದ ಈ ಇಬ್ಬರ ಪೈಕಿ ಒಬ್ಬರಿಗೆ ಭಾರತ ಟೆಸ್ಟ್ ತಂಡದ ನಾಯಕರನ್ನಾಗಿ ಮಾಡುವುದು ಬೆಸ್ಟ್' ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಿಲ್ ಅವರ ವಿದೇಶಿ ಪ್ರದರ್ಶನದ ಬಗ್ಗೆ ಕಳವಳಗಳನ್ನು ತಳ್ಳಿಹಾಕಿದ ಶಾಸ್ತ್ರಿ
ಶುಭ್‌ಮನ್ ಗಿಲ್ ವಿದೇಶಿ ಪಿಚ್‌ನಲ್ಲಿ ನೀಡುತ್ತಿರುವ ಪ್ರದರ್ಶನದ ಬಗ್ಗೆ ಕಳವಳಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಅವರು ವಿದೇಶಿ ಪ್ರವಾಸದಲ್ಲಿ ಯಶಸ್ಸು ಗಳಿಸಲಿದ್ದಾರೆ ಎಂದು ರವಿಶಾಸ್ತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಭ್‌ಮನ್ ಗಿಲ್, ಈ ಬಾರಿಯ ಇಂಗ್ಲೆಂಡ್ ಸರಣಿಯಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ವಿಶ್ವಾಸವಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿಯವರೆಗೆ 15 ವಿದೇಶಿ ಪಂದ್ಯಗಳಲ್ಲಿ, ಗಿಲ್ 27.53 ಸರಾಸರಿಯಲ್ಲಿ 716 ರನ್ ಗಳಿಸಿದ್ದಾರೆ, 28 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ. ಗಾಬಾದಲ್ಲಿ 91 ರನ್ ಗಳಿಸಿದ ನಂತರ, ಭಾರತ ಸರಣಿಯನ್ನು ಗೆಲ್ಲಲು ಸಹಾಯ ಮಾಡಿದ ಅವರು, ಆ ಬಳಿಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಅಥವಾ ಆಸ್ಟ್ರೇಲಿಯಾ (SENA) ಪರಿಸ್ಥಿತಿಗಳಲ್ಲಿ ಅವರು ಅರ್ಧಶತಕ ಗಳಿಸಿಲ್ಲ, ಅವರ ಫಾರ್ಮ್ ಟೀಂ ಇಂಡಿಯಾಗೆ ಇಂಗ್ಲೆಂಡ್ ಪ್ರವಾಸದಲ್ಲಿ ಸಾಕಷ್ಟು ಮಹತ್ವದ್ದೆನಿಸಿದೆ.
ಬಾರ್ಡರ್-ಗವಾಸ್ಕರ್ ಸರಣಿಯ ಬಳಿಕ ಟೀಂ ಇಂಡಿಯಾದ ಮೂವರು ಹಿರಿಯರು ಇದೀಗ ಟೆಸ್ಟ್ ಕ್ರಿಕೆಟ್‌ನಿಂದ ವಿದಾಯ ಪಡೆದುಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತಕ್ಕೆ ಅಗ್ನಿ ಪರೀಕ್ಷೆ ಎದುರಾಗುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.