IPL ಟಿ20 ಜಾತ್ರೆಗೆ ಕ್ಷಣಗಣನೆ, ಕ್ರಿಕೆಟ್ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ..!

By Naveen Kodase  |  First Published Mar 25, 2022, 8:34 AM IST

* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭ

* ಉದ್ಘಾಟನಾ ಪಂದ್ಯದಲ್ಲಿ ಕೆಕೆಅರ್ ಹಾಗೂ ಸಿಎಸ್‌ಕೆ ತಂಡಗಳು ಮುಖಾಮುಖಿ

* ವಾಂಖೆಡೆ ಮೈದಾನದಲ್ಲಿ ನಡೆಯಲಿದೆ ಹೈವೋಲ್ಟೇಜ್ ಪಂದ್ಯ


ಮುಂಬೈ(ಮಾ.25): ಹಣದ ಹೊಳೆಯೇ ಹರಿಸುವ, ಬಹುನಿರೀಕ್ಷಿತ 15ನೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) (Indian Premier League) ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ದೇಸಿ ಕ್ರಿಕೆಟ್‌ ಸಂಭ್ರಮಕ್ಕೆ ಶನಿವಾರ(ಮಾ.26) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಹಾಗೂ ಕಳೆದ ಬಾರಿ ರನ್ನರ್‌-ಅಪ್‌ ಕೋಲ್ಕತಾ ನೈಟ್‌ ರೈಡರ್ಸ್ಸ್‌ (Kolkata Knight Riders) ತಂಡಗಳ ಹಣಾಹಣಿ ಮೂಲಕ ಟಿ20 ಕ್ರಿಕೆಟ್‌ ಜಾತ್ರೆ ಶುರುವಾಗಲಿದೆ. ಮೇ 29ಕ್ಕೆ ಟೂರ್ನಿ ಮುಕ್ತಾಯಗೊಳ್ಳಲಿದೆ.

65 ದಿನ, 74 ಪಂದ್ಯಗಳು!

Tap to resize

Latest Videos

ಈ ಆವೃತ್ತಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಸ್ಪರ್ಧಿಸಲಿರುವುದರಿಂದ ತಂಡಗಳ ಒಟ್ಟು ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹೀಗಾಗಿ ಪಂದ್ಯ ಹಾಗೂ ಪಂದ್ಯ ನಡೆಯುವ ದಿನಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ವರ್ಷ ಒಟ್ಟು 65 ದಿನಗಳಲ್ಲಿ ಟೂರ್ನಿ ನಡೆಯಲಿದ್ದು, ಲೀಗ್‌ ಹಂತದಲ್ಲಿ ಒಟ್ಟು 70 ಪಂದ್ಯಗಳು ಹಾಗೂ ಪ್ಲೇ-ಆಫ್‌ ಹಂತದಲ್ಲಿ 4 ಪಂದ್ಯಗಳು ಇರಲಿವೆ. ಪ್ರತೀ ತಂಡಗಳು ಕಳೆದ ಬಾರಿಯಂತೆ ಲೀಗ್‌ ಹಂತದಲ್ಲಿ ತಲಾ 14 ಪಂದ್ಯಗಳನ್ನು ಆಡಲಿವೆ.

ಭಾರತಕ್ಕೆ ಮರಳಿದ ಐಪಿಎಲ್‌ !

2020ರಲ್ಲಿ ಭಾರತದಲ್ಲಿ ಕೋವಿಡ್‌ ಹೆಚ್ಚಿದ್ದರಿಂದ ಟೂರ್ನಿಯಲ್ಲಿ ಯುಎಇಗೆ ಸ್ಥಳಾಂತರಿಸಲಾಗಿತ್ತು. ಬಳಿಕ 2021ರ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲಾಗಿದ್ದರೂ, ಬಯೋಬಬಲ್‌ ಭೇದಿಸಿ ಆಟಗಾರರಲ್ಲಿ ಸೋಂಕು ಪತ್ತೆಯಾಗಿದ್ದರಿಂದ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ನಂತರ ಟೂರ್ನಿಯ ಅರ್ಧ ಭಾಗ ಯುಎಇಯಲ್ಲಿ ಅಯೋಜಿಸಲಾಗಿತ್ತು. ಈ ಬಾರಿ ಸೋಂಕಿನ ಪ್ರಮಾಣ ಕಡಿಮೆಯಾಗಿರುವ ಕಾರಣ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

IPL 2022 ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಿದ ಎಂಎಸ್ ಧೋನಿ!

ಒಂದೇ ರಾಜ್ಯದ 4 ಕ್ರೀಡಾಂಗಣಗಳ ಆತಿಥ್ಯ

ಪ್ರತೀ ಬಾರಿ ಭಾರತದಲ್ಲಿ ಐಪಿಎಲ್‌ ನಡೆದಾಗ ಟೂರ್ನಿಗೆ ವಿವಿಧ ನಗರಗಳು ಅತಿಥ್ಯ ವಹಿಸುತ್ತವೆ. ಆದರೆ ಈ ಬಾರಿ ಕೋವಿಡ್‌ನಿಂದಾಗಿ ಬಿಸಿಸಿಐ (BCCI) ಕೇವಲ ಮುಂಬೈ ಹಾಗೂ ಪುಣೆಯಲ್ಲಿ ಲೀಗ್‌ ಹಂತವನ್ನು ಆಯೋಜಿಸುತ್ತಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣ, ಬ್ರಬೋರ್ನ್‌ ಕ್ರೀಡಾಂಗಣ, ನವ ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣ ಹಾಗೂ ಪುಣೆಯ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿವೆ.

ಬಯೋಬಬಲ್‌ನೊಳಗೇ ಈ ವರ್ಷವೂ ಟಿ20 ಹಬ್ಬ

2019ರ ಕೊನೆಯಲ್ಲಿ ಜಗತ್ತಿಗೆ ವಕ್ಕರಿಸಿದ ಕೋವಿಡ್‌ ಮಹಾಮಾರಿ ಇನ್ನೂ ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಸೋಂಕಿನಿಂದಾಗಿ ಕಳೆದೆರಡು ಆವೃತ್ತಿಗಳ ಐಪಿಎಲ್‌ ಬಯೋಬಬಲ್‌ನೊಳಗೇ ನಡೆದಿತ್ತು. ಕ್ವಾರಂಟೈನ್‌, ಐಸೋಲೇಸನ್‌, ಸೋಂಕು ಪರೀಕ್ಷೆಯ ಕಾಟದ ನಡುವೆ ಈ ಬಾರಿಯೂ ಟೂರ್ನಿ ಬಯೋಬಬಲ್‌ನಲ್ಲೇ ನಡೆಯಲಿದೆ. ಆಟಗಾರರು, ಕೋಚ್‌ಗಳು, ಸಹಾಯಕ ಸಿಬ್ಬಂದಿ ನಿರಂತರ ಪರೀಕ್ಷೆಗೆ ಒಳಗಾಗಲಿದ್ದು, ಸೋಂಕು ಪತ್ತೆಯಾದರೆ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.

ಪ್ರೇಕ್ಷಕರಿಗೆ ಅವಕಾಶ; ಹೆಚ್ಚಿದ ಟೂರ್ನಿಯ ಕಳೆ

ಕೋವಿಡ್‌ನಿಂದಾಗಿ ಕಳೆದೆರಡು ಆವೃತ್ತಿಗಳಲ್ಲಿ ಪಂದ್ಯಗಳನ್ನು ಟಿವಿಯಲ್ಲಿ ನೋಡುತ್ತಿದ್ದ ಕ್ರೀಡಾಭಿಮಾನಿಗಳಿಗೆ ಈ ಬಾರಿ ನೇರವಾಗಿ ಪಂದ್ಯ ವೀಕ್ಷಿಸುವ ಸೌಭಾಗ್ಯ ಒದಗಿಬಂದಿದೆ. ಖಾಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಟೂರ್ನಿಯಲ್ಲಿ ಈ ಬಾರಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದ್ದು, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಕೇಕೆ, ಜೈಕಾರದಿಂದಾಗಿ ಟೂರ್ನಿಯ ಕಳೆ ಹೆಚ್ಚಲಿದೆ. ಮಹಾರಾಷ್ಟ್ರ ಸರ್ಕಾರ ಪಂದ್ಯಗಳಿಗೆ ಈಗಾಗಲೇ ಕ್ರೀಡಾಂಗಣದ ಸಾಮರ್ಥ್ಯದ ಶೇ.25 ಪ್ರೇಕ್ಷಕರಿಗೆ ಅವಕಾಶ ನೀಡಿದ್ದು, ಮುಂದೆ ಹೆಚ್ಚಿನ ಪ್ರೇಕ್ಷಕರಿಗೆ ಕ್ರೀಡಾಂಗಣಗಳಿಗೆ ಅನುಮತಿ ಸಿಗುವ ಸಾಧ್ಯತೆ ಇದೆ.

ಬಹುಮಾನದ ಮೊತ್ತ

20 ಕೋಟಿ ರುಪಾಯಿ: ಚಾಂಪಿಯನ್‌ ಆಗುವ ತಂಡಕ್ಕೆ ಲಭಿಸುವ ಮೊತ್ತ

13 ಕೋಟಿ ರುಪಾಯಿ: ರನ್ನರ್‌-ಅಪ್‌ ತಂಡಕ್ಕೆ ಸಿಗುವ ಮೊತ್ತ

click me!