ICC Women's World Cup: ದಕ್ಷಿಣ ಆಫ್ರಿಕಾ ಎದುರು ಗೆದ್ದರಷ್ಟೇ ಭಾರತಕ್ಕೆ ಸೆಮೀಸ್ ಅವಕಾಶ

Published : Mar 25, 2022, 07:49 AM ISTUpdated : Mar 25, 2022, 07:57 AM IST
ICC Women's World Cup: ದಕ್ಷಿಣ ಆಫ್ರಿಕಾ ಎದುರು ಗೆದ್ದರಷ್ಟೇ ಭಾರತಕ್ಕೆ ಸೆಮೀಸ್ ಅವಕಾಶ

ಸಾರಾಂಶ

* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ * ಸೆಮೀಸ್ ಪ್ರವೇಶಿಸಬೇಕಿದ್ದರೆ, ದಕ್ಷಿಣ ಆಫ್ರಿಕಾ ಎದುರು ಗೆಲುವು ಅನಿವಾರ್ಯ * ಈಗಾಗಲೇ ಆಸ್ಪ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಮೀಸ್‌ ಪ್ರವೇಶಿಸಿದೆ

ವೆಲ್ಲಿಂಗ್‌ಟನ್(ಮಾ.25)‌: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ (ICC Women's World Cup) ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್‌ ನಡುವಿನ ಪಂದ್ಯ ಮಳೆಗೆ ಆಹುತಿಯಾಗುವುದರೊಂದಿಗೆ ಕಳೆದ ಬಾರಿ ರನ್ನರ್‌-ಅಪ್‌ ಭಾರತಕ್ಕೆ ಸಂಕಷ್ಟ ಎದುರಾಗಿದೆ. ಟೂರ್ನಿ ಈಗ ಕುತೂಹಲದ ಘಟ್ಟತಲುಪಿದ್ದು, ಭಾರತ ಸೆಮಿಫೈನಲ್‌ಗೇರಲು ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದಲ್ಲಿ ಗೆಲುವು ಅನಿವಾರ್ಯವಾಗಿದೆ. ಸೋತರೆ ನಾಕೌಟ್‌ ರೇಸ್‌ನಿಂದ ಹೊರಬೀಳಲಿದೆ.

ಈಗಾಗಲೇ ಆಸ್ಪ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಮೀಸ್‌ ಪ್ರವೇಶಿಸಿದ್ದು, ಉಳಿದ 2 ಸ್ಥಾನಗಳಿಗಾಗಿ ಭಾರತ, ಇಂಗ್ಲೆಂಡ್‌ ಮತ್ತು ವಿಂಡೀಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಪ್ರಸ್ತುತ ವಿಂಡೀಸ್‌, ಇಂಗ್ಲೆಂಡ್‌ ಮತ್ತು ಭಾರತ ಅಂಕಪಟ್ಟಿಯಲ್ಲಿ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿವೆ. ವಿಂಡೀಸ್‌ 7, ಭಾರತ ಮತ್ತು ಇಂಗ್ಲೆಂಡ್‌ ತಲಾ 6 ಹೊಂದಿವೆ. ವಿಂಡೀಸ್‌ ಲೀಗ್‌ನಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದ್ದು, ಭಾರತ ಮತ್ತು ಇಂಗ್ಲೆಂಡ್‌ಗೆ ತಲಾ ಒಂದೊಂದು ಪಂದ್ಯ ಬಾಕಿಯಿವೆ.

ಒಂದೊಮ್ಮೆ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ, ಇಂಗ್ಲೆಂಡ್‌ ತಂಡ ಬಾಂಗ್ಲಾ ಮೇಲೆ ಗೆದ್ದರೆ ಉಭಯ ತಂಡಗಳು ಸೆಮೀಸ್‌ಗೇರಲಿವೆ. ಅಥವಾ ಇಂಗ್ಲೆಂಡ್‌ ಸೋತರೆ ಭಾರತ ಮತ್ತು ವಿಂಡೀಸ್‌ ಸೆಮೀಸ್‌ಗೇರಲಿವೆ. ಭಾರತ ಸೋತರೆ ಇಂಗ್ಲೆಂಡ್‌ ಮತ್ತು ವಿಂಡೀಸ್‌ ಮುಂದಿನ ಹಂತಕ್ಕೇರಲಿವೆ. ಒಂದೊಮ್ಮೆ ಎರಡೂ ತಂಡಗಳು ಸೋತರೆ ವಿಂಡೀಸ್‌ ಸೆಮೀಸ್‌ ಪ್ರವೇಶಿಸಲಿದೆ. ಬಳಿಕ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಭಾರತ ಅಥವಾ ಇಂಗ್ಲೆಂಡ್‌ ಪೈಕಿ ಒಂದು ತಂಡ ಸೆಮೀಸ್‌ಗೆ ಲಗ್ಗೆ ಇಡಲಿದೆ.

ಮಾಡು ಇಲ್ಲವೇ ಮಡಿ ಪಂದ್ಯವನ್ನು ಜಯಿಸುತ್ತಾ ಮಿಥಾಲಿ ರಾಜ್ ಪಡೆ..?

ಮಿಥಾಲಿ ರಾಜ್ (Mithali Raj) ನೇತೃತ್ವದ ಭಾರತ ಮಹಿಳಾ ತಂಡವು (Indian Women's Cricket Team) ಇದೀಗ ಒಂದು ರೀತಿಯ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದ್ದು, ನಾಕೌಟ್ ಕನಸನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ, ದಕ್ಷಿಣ ಆಫ್ರಿಕಾ ಎದುರು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಸದ್ಯ ದಕ್ಷಿಣ ಆಫ್ರಿಕಾ ತಂಡವು 6 ಪಂದ್ಯಗಳಲ್ಲಿ 4 ಗೆಲುವು, ಒಂದು ಸೋಲು ಹಾಗೂ ಒಂದು ಪಂದ್ಯ ರದ್ದಾಗಿದ್ದರಿಂದ ಒಟ್ಟು 9 ಅಂಕಗಳೊಂದಿಗೆ ಸೆಮೀಸ್ ಹಾದಿಯನ್ನು ಖಚಿತ ಪಡಿಸಿಕೊಂಡಿದೆ. ಇನ್ನೊಂದೆಡೆ ಮಿಥಾಲಿ ರಾಜ್ ಪಡೆಯು 6 ಪಂದ್ಯಗಳಲ್ಲಿ 3 ಗೆಲುವು ಹಾಗೂ 3 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ICC Women's World Cup: ಭಾರತದ ಸೆಮೀಸ್‌ ಲೆಕ್ಕಾಚಾರ ಹೇಗೆ?

ಭಾರತ ತಂಡವು ಸೆಮೀಸ್‌ಗೇರಬೇಕಿದ್ದರೆ, ಅಗ್ರಕ್ರಮಾಂಕದ ಬ್ಯಾಟರ್‌ಗಳು ಮತ್ತೊಮ್ಮೆ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಸ್ಮೃತಿ ಮಂಧನಾ ಅವರಿಂದ ತಂಡ ದೊಡ್ಡ ಇನಿಂಗ್ಸ್ ನಿರೀಕ್ಷಿಸುತ್ತಿದೆ. ಮಿಥಾಲಿ ರಾಜ್ ಮಹತ್ವದ ಪಂದ್ಯದಲ್ಲಿ ಮಿಂಚುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್, ಪೂಜಾ ವಸ್ತ್ರಾಕರ್, ಸ್ನೆಹ್ ರಾಣಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತ ಪ್ರದರ್ಶನ ನೀಡಿದರೆ, ದೊಡ್ಡ ಮೊತ್ತ ಕಲೆಹಾಕುವುದು ಕಷ್ಟಸಾಧ್ಯವೇನಲ್ಲ. ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲಿ ಜೂಲನ್ ಗೋಸ್ವಾಮಿ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್, ಮೆಘನಾ ಸಿಂಗ್ ಅವರ ಮೇಲೂ ದೊಡ್ಡ ಜವಾಬ್ದಾರಿಯಿದೆ.

ಇಂಗ್ಲೆಂಡ್‌ಗೆ ಗೆಲುವು

ಗುರುವಾರ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ವಿಂಡೀಸ್‌ ಪಂದ್ಯ ಮಳೆಯಿಂದ ರದ್ದಾಯಿತು. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 10.5 ಓವರ್‌ಗಳಲ್ಲಿ 4 ವಿಕೆಟ್‌ಗೆ 65 ರನ್‌ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು. ಬಳಿಕ ಪಂದ್ಯ ನಡೆಯದಿದ್ದರಿಂದ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಲಾಯಿತು. ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನವನ್ನು ಇಂಗ್ಲೆಂಡ್‌ ಸುಲಭವಾಗಿ ಮಣಿಸಿತು. ಪಾಕ್‌ ಕೇವಲ 105 ರನ್‌ಗಳಿಗೆ ಸರ್ವಪತನಗೊಂಡರೆ, ಇಂಗ್ಲೆಂಡ್‌ 19.2 ಓವರ್‌ನಲ್ಲೇ 1 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!