
ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಬಹುನಿರೀಕ್ಷಿತ ಪಂದ್ಯವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಟೂರ್ನಿಯ ಆತಿಥ್ಯದ ಹಕ್ಕು ಹೊಂದಿರುವ ಪಾಕಿಸ್ತಾನ ಕೂಡಾ ಭಾರತದ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಹೀಗಿರುವಾಗಲೇ ಇಂದು ಪಾಕಿಸ್ತಾನದಲ್ಲೇ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಪಂದ್ಯದ ವೇಳೆಯಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿದೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದ್ದರೂ ಭದ್ರತೆ ಹಾಗೂ ರಾಜತಾಂತ್ರಿಕ ಕಾರಣ ನೀಡಿ ಟೀಂ ಇಂಡಿಯಾ, ಪಾಕ್ ಪ್ರವಾಸದಿಂದ ಹಿಂದೇಟು ಹಾಕಿತ್ತು. ಹೀಗಾಗಿ ಈ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ ತೀರ್ಮಾನಿಸಿತು. ಹೀಗಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವು ತನ್ನ ಪಾಲಿನ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ.
'ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಎದುರು ಪಾಕ್ ಗೆಲ್ಲಲಿ': ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಅಚ್ಚರಿ ಮಾತು!
ಹೀಗಿರುವಾಗಲೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಆರಂಭಕ್ಕೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಪಾಕಿಸ್ತಾನದ ಲಾಹೋರ್‌ನಲ್ಲಿ ಭಾರತದ 'ಜನ ಗಣ ಮನ' ರಾಷ್ಟ್ರಗೀತೆ ಮೊಳಗಿದೆ. ಹೌದು, ಇಲ್ಲಿನ ಗಡಾಫಿ ಮೈದಾನದಲ್ಲಿ ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಬಳಿಕ ಉಭಯ ರಾಷ್ಟ್ರಗಳ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಇಂಗ್ಲೆಂಡ್ ರಾಷ್ಟ್ರಗೀತೆ ಮುಗಿದ ಬಳಿಕ ಆಸ್ಟ್ರೇಲಿಯಾದ ರಾಷ್ಟ್ರಗೀತೆ ಮೊಳಗಬೇಕಿತ್ತು. ಆದರೆ ಆಯೋಜಕರು 'ಭಾರತ ಭಾಗ್ಯ ವಿದಾತ' ಎಂದು ಭಾರತದ ರಾಷ್ಟ್ರಗೀತೆ ಮ್ಯೂಸಿಕ್ ಹಾಕಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಇನ್ನು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಕೇವಲ 43 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ಹಾಗೂ ಜೋ ರೂಟ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 23 ಓವರ್ ಅಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿದೆ. ಬೆನ್ ಡಕೆಟ್ 65 ಹಾಗೂ ಜೋ ರೂಟ್ 50 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.