ಭಾರತೀಯ ಫ್ಯಾನ್ಸ್‌ ಹಾಗೂ ಮಾಧ್ಯಮಗಳು ಕೊಹ್ಲಿ ಮೇಲೆ ಅನಗತ್ಯ ಒತ್ತಡ ಹೇರುತ್ತಿವೆ: ವಾಸೀಂ ಅಕ್ರಂ

By Naveen Kodase  |  First Published Aug 23, 2022, 4:43 PM IST

* ಸತತವಾಗಿ ರನ್‌ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ
* ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ ಪಾಕ್ ಮಾಜಿ ನಾಯಕ ವಾಸೀಂ ಅಕ್ರಂ
* ಏಷ್ಯಾಕಪ್‌ ವೇಳೆ ಕೊಹ್ಲಿ ಫಾರ್ಮ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ ಪಾಕ್ ಮಾಜಿ ವೇಗಿ


ಇಸ್ಲಾಮಾಬಾದ್‌(ಆ.23): ಟೀಂ ಇಂಡಿಯಾದ ಒಂದು ವರ್ಗದ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಧ್ಯಮಗಳು ಅನಗತ್ಯವಾಗಿ ವಿರಾಟ್ ಕೊಹ್ಲಿಯನ್ನು ಟೀಕಿಸುವ ಮೂಲಕ ಅವರ ಮೇಲೆ ಒತ್ತಡ ಹೇರುತ್ತಿವೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಓರ್ವ ಕ್ಲಾಸ್ ಆಟಗಾರನಾಗಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಕಳಪೆ ರನ್ ಬಾರಿಸಿದ್ದಕ್ಕೆ ಈ ರೀತಿ ಒತ್ತಡ ಹೇರಬಾರದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸೀಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ

ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಗೂ ನಡೆದ ಪ್ರೆಸ್ ಕಾನ್ಫರೆನ್ಸ್‌ ವೇಳೆ ಮಾತನಾಡಿದ ವಾಸೀಂ ಅಕ್ರಂ, ಈ ಕಳಪೆ ಫಾರ್ಮ್‌ನಿಂದ ವಿರಾಟ್ ಕೊಹ್ಲಿ ಆದಷ್ಟು ಬೇಗ ಭರ್ಜರಿಯಾಗಿಯೇ ಹೊರಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ರನ್ ಬರ ಅನುಭವಿಸುತ್ತಲೇ ಬಂದಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಮುಕ್ತಾಯವಾದ ಇಂಡಿಯನ್‌ ಪ್ರೀಮಯರ್ ಲೀಗ್ ಟೂರ್ನಿಯಲ್ಲೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 16 ಪಂದ್ಯಗಳನ್ನಾಡಿ ಕೇವಲ 22.73ರ ಬ್ಯಾಟಿಂಗ್ ಸರಾಸರಿಯಲ್ಲಿ 341 ರನ್‌ಗಳನ್ನಷ್ಟೇ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಿಂದಲೂ ಹೊರಗುಳಿದಿದ್ದರು. ಇದಾದ ಬಳಿಕವೂ ವಿರಾಟ್ ಕೊಹ್ಲಿ ಬ್ಯಾಟಿಂದ ದೊಡ್ಡ ಮೊತ್ತ ಮೂಡಿ ಬಂದಿಲ್ಲ.

Tap to resize

Latest Videos

ಕಳಪೆ ಫಾರ್ಮ್ ಹೊರತಾಗಿಯೂ ವಿರಾಟ್ ಕೊಹ್ಲಿಯನ್ನು, ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಅಥವಾ ಅದಕ್ಕೂ ಹಿಂದಿನ ವರ್ಷದಿಂದ ಸೋಷಿಯಲ್ ಮೀಡಿಯಾವನ್ನು ಗಮನಿಸಿದರೇ, ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಮಾಧ್ಯಮದವರು ವಿರಾಟ್ ಕೊಹ್ಲಿ ವಿರುದ್ದ ಕಿಡಿಕಾರಿದ್ದಾರೆ. ಅವರು ಯಾರೇ ಆಗಿರಲಿ, ಸುಖಾಸುಮ್ಮನೆ ವಿರಾಟ್ ಕೊಹ್ಲಿ ಮೇಲೆ ಅನಗತ್ಯ ಒತ್ತಡ ಹೇರುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರಿಗಿನ್ನೂ ಕೇವಲ 33 ವರ್ಷವಷ್ಟೇ, ಈಗಾಗಲೇ ಅವರೊಬ್ಬ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದಾರೆ ಎಂದು ವಾಸೀಂ ಅಕ್ರಂ ಹೇಳಿದ್ದಾರೆ.

Asia Cup 2022 ಟೂರ್ನಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಗುರವಾಗಿ ಪರಿಗಣಿಸಬೇಡಿ: ಪಾಕ್ ಸ್ಪಿನ್ನರ್ ಎಚ್ಚರಿಕೆ..!

ವಿರಾಟ್ ಕೊಹ್ಲಿಯೊಬ್ಬ ಅತ್ಯದ್ಭುತ ಕ್ರಿಕೆಟಿಗ. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಅವರು 50+ ಬ್ಯಾಟಿಂಗ್ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಅವರು ಈಗಲೂ ಫಿಟ್ ಆಗಿದ್ದಾರೆ. ಅವರು ಭಾರತ ಕ್ರಿಕೆಟ್‌ ತಂಡದ ಅತ್ಯುತ್ತಮ ಫೀಲ್ಡರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಫಾರ್ಮ್‌ ಎನ್ನುವುದು ತಾತ್ಕಾಲಿಕ, ಆದರೆ ಕ್ಲಾಸ್ ಎನ್ನುವುದು ಶಾಶ್ವತ. ಅದು ವಿರಾಟ್ ಕೊಹ್ಲಿ. ಅವರು ಮುಂಬರುವ ದಿನಗಳಲ್ಲಿ ಉತ್ತಮ ರನ್ ಗಳಿಸುವ ಮೂಲಕ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ವಿಶ್ವಾಸವಿದೆ. ಆದರೆ ಅವರು ಪಾಕಿಸ್ತಾನ ವಿರುದ್ದ ರನ್‌ ಗಳಿಸದೇ ಇರಲಿ, ಆದರೆ ಅವರು ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ವಾಸೀಂ ಅಕ್ರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭವಾಗಲಿದೆ. ಇನ್ನು ಭಾರತ ಕ್ರಿಕೆಟ್ ತಂಡವು ಆಗಸ್ಟ್‌ 28ರಂದು ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಲಿದೆ.

click me!