
ಬೆಂಗಳೂರು(ಆ.23): ಶುಭ್‌ಮನ್ ಗಿಲ್ ಬಾರಿಸಿದ ಚೊಚ್ಚಲ ಅಂತಾರಾಷ್ಟ್ರೀಯ ಶತಕದ ನೆರವಿನಿಂದ ಜಿಂಬಾಬ್ವೆ ಎದುರಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 289 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು 276 ರನ್ ಬಾರಿಸಿ ಸರ್ವಪತನ ಕಂಡಿತು.
ಸ್ಪೋಟಕ ಬ್ಯಾಟಿಂಗ್ ನಡೆಸಿದ ಶುಭ್‌ಮನ್ ಗಿಲ್ ಕೇವಲ 97 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 130 ರನ್ ಚಚ್ಚಿದರು. ಇನ್ನು ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು, ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ನಡುಕ ಹುಟ್ಟಿಸಿತು. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟರ್ ಸಿಕಂದರ್ ರಾಜಾ ಚುರುಕಿನ ಶತಕ ಸಿಡಿಸುವ ಮೂಲಕ ಮೂಲಕ ಭಾರತೀಯ ಪಾಳಯದಲ್ಲಿ ಆತಂಕವನ್ನುಂಟು ಮಾಡಿದರು. ಸಿಕಂದರ್ ರಾಜಾ 95 ಎಸೆತಗಳಲ್ಲಿ ಆಕರ್ಷಕ 115 ರನ್ ಚಚ್ಚುವ ಮೂಲಕ ಆಕರ್ಷಕ ಬ್ಯಾಟಿಂಗ್ ನಡೆಸಿದರು.
ಗಾಯದ ಸಮಸ್ಯೆಯಿಂದ ಸಾಕಷ್ಟು ಸಮಯದಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಕೆ ಎಲ್ ರಾಹುಲ್, ನಾಯಕನಾಗಿ ಜಿಂಬಾಬ್ವೆ ಎದುರಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡುವ ಮೂಲಕ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಅವರು, 120ಕ್ಕೂ ಹೆಚ್ಚು ಓವರ್ ಫೀಲ್ಡಿಂಗ್ ಮಾಡಿದ್ದೇನೆ. ಕೆಲ ಕಾಲ ಕ್ರೀಸ್‌ನಲ್ಲಿ ಬ್ಯಾಟಿಂಗ್ ಕೂಡಾ ನಡೆಸಿದ್ದೇನೆ. ಸಾಕಷ್ಟು ಸಮಯದ ಬಳಿಕ ನಾನು ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಪ್ರಯತ್ನಿಸಿದೆ. ಭಾರತ ಪರ ಆಡುವಾಗ ಸಿಗುವ ಅದರ ಖುಷಿಯೇ ಬೇರೇ ಎಂದು ರಾಹುಲ್ ಹೇಳಿದ್ದಾರೆ.
Rahul Dravid :ಟೀಂ ಇಂಡಿಯಾ ಹೆಡ್ ಕೋಚ್ ದ್ರಾವಿಡ್‌ಗೆ ಕೋವಿಡ್ ದೃಢ..! ಏಷ್ಯಾಕಪ್‌ಗೆ ಅನುಮಾನ..!
2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಕೆ ಎಲ್ ರಾಹುಲ್, ಇದಾದ ಬಳಿಕ ಫಿಟ್ನೆಸ್ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಜಿಂಬಾಬ್ವೆ ಎದುರಿನ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಕೆ ಎಲ್ ರಾಹುಲ್‌ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಇನ್ನು ಎರಡನೇ ಪಂದ್ಯದಲ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ರಾಹುಲ್ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.