T20 World Cup: ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸೆಹ್ವಾಗ್

By Suvarna News  |  First Published Oct 28, 2021, 7:07 PM IST

* ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಟೀಂ ಇಂಡಿಯಾ

* ಪಾಕಿಸ್ತಾನದ ಎದುರು ಆಘಾತಕಾರಿ ಸೋಲು ಕಂಡಿರುವ ವಿರಾಟ್ ಕೊಹ್ಲಿ ಪಡೆ

* ಹೀಗಿದ್ದೂ ಟೀಂ ಇಂಡಿಯಾ ಕಪ್ ಗೆಲ್ಲಲಿದೆ ಎಂದ ಸೆಹ್ವಾಗ್


ನವದೆಹಲಿ(ಅ.28): ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೆ ಈಗಾಗಲೇ ಅದ್ಧೂರಿ ಚಾಲನೆ ಸಿಕ್ಕಿದ್ದು, ಈಗಾಗಲೇ ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿವೆ. ಇದೇ ವೇಳೆ ಕೆಲವು ಅಚ್ಚರಿಯ ಫಲಿತಾಂಶಗಳು ಕೂಡಾ ಹೊರಬಿದ್ದಿವೆ. ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ (Team India) ಚಾಂಪಿಯನ್ ಆಗಿ ಹೊರಹೊಮ್ಮಲಿದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ (Virender Sehwag) ಭವಿಷ್ಯ ನುಡಿದಿದ್ದಾರೆ. 

ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಈ ವರ್ಷದ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜಯಿಸಲಿದೆ. ಆದರೆ ಕೊಂಚ ವಿಚಲಿತವಾಗಿರುವ ಭಾರತ ತಂಡಕ್ಕೆ ನಮ್ಮೆಲ್ಲರ ಬೆಂಬಲ ಬೇಕಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

Latest Videos

undefined

ನನ್ನ ಪ್ರಕಾರ ಈ ವರ್ಷ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಜಯಿಸಲಿದೆ. ಇಲ್ಲಿಂದಾಚೆಗೆ ಭಾರತ ಕ್ರಿಕೆಟ್ ತಂಡವು ಇನ್ನಷ್ಟು ಉತ್ತಮ ಕ್ರಿಕೆಟ್ ಆಡಬೇಕಿದೆ. ನಮ್ಮ ತಂಡ ಗೆದ್ದಾಗ ನಾವೆಲ್ಲರೂ ಭಾರತ ತಂಡಕ್ಕೆ ಚಿಯರ್ ಮಾಡುತ್ತೇನೆ. ಅದೇ ರೀತಿ ತಂಡ ಸೋತಾಗ ಇನ್ನೂ ಹೆಚ್ಚಾಗಿ ಚಿಯರ್ ಮಾಡುವ ಮೂಲಕ ತಂಡದ ಬೆಂಬಲಕ್ಕೆ ನಿಲ್ಲಬೇಕು. ಆದ್ದರಿಂದ ಈ ಬಾರಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಜಯಿಸಲಿದೆ ಎನ್ನುವ ವಿಶ್ವಾಸ ತಮಗಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.

T20 World Cup: ತವರಿನತ್ತ ಮುಖ ಮಾಡಿದ ಟೀಂ ಇಂಡಿಯಾ ನೆಟ್ ಬೌಲರ್ ಆವೇಶ್ ಖಾನ್..!

ಯುಎಇನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡುವಲ್ಲಿ ವಿಫಲವಾಗಿದೆ. ಅಕ್ಟೋಬರ್ 24ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ 10 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಂಡಿದೆ. ಈ ಬಾರಿಯ ಟಿ20 ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ದ ಸೋಲಿನ ಕಹಿಯುಂಡಿದೆ. 

ಏಕದಿನ ಹಾಗೂ ಟಿ20 ವಿಶ್ವಕಪ್ ಸೇರಿ 12 ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ದ ಗೆಲುವಿನ ನಗೆ ಬೀರಿತ್ತು. ಆದರೆ ಇದೇ ಮೊದಲ ಬಾರಿಗೆ ದುಬೈನಲ್ಲಿ ಟೀಂ ಇಂಡಿಯಾ ಪಾಕ್ ಎದುರು ಮುಗ್ಗರಿಸಿದೆ. ಪಾಕ್‌ ವೇಗಿ ಶಾಹೀನ್ ಶಾ ಅಫ್ರಿದಿ ಆರಂಭದಲ್ಲೇ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್‌ ಅವರನ್ನು ಒಂದಂಕಿ ಮೊತ್ತಕ್ಕೆ ಬಲಿ ಪಡೆಯುವ ಮೂಲಕ ಪಾಕ್‌ಗೆ ಆರಂಭಿಕ ಯಶಸ್ಸು ದಕ್ಕಿಸಿಕೊಟ್ಟರು. ಇದಾದ ಬಳಿಕ ವಿರಾಟ್ ಕೊಹ್ಲಿ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 151 ರನ್‌ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಒಂದೂ ವಿಕೆಟ್ ಕಳೆದುಕೊಳ್ಳದೇ ಗೆಲುವಿನ ನಗೆ ಬೀರಿತ್ತು.

T20 World Cup: ನ್ಯೂಜಿಲೆಂಡ್ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗುಡ್‌ ನ್ಯೂಸ್‌..!

ಇದೀಗ ಅಕ್ಟೋಬರ್ 31ರಂದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ದುಬೈನಲ್ಲಿ ನ್ಯೂಜಿಲೆಂಡ್ ಸವಾಲನ್ನು ಸ್ವೀಕರಿಸಲಿದೆ. ಉಭಯ ತಂಡಗಳು ತಾವಾಡಿದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಸೋಲು ಕಂಡಿವೆ. ಹೀಗಾಗಿ ಸೆಮಿಫೈನಲ್‌ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಉಭಯ ತಂಡಗಳು ಸಿಲುಕಿವೆ. 

click me!