
ಕೊಲಂಬೊ: ಮಹಿಳೆಯರ ತ್ರಿಕೋನ ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಶ್ರೀಲಂಕಾ ವಿರುದ್ಧ ಫೈನಲ್ ಹಣಾಹಣಿಯಲ್ಲಿ ಟೀಂ ಇಂಡಿಯಾ 97 ರನ್ ಭರ್ಜರಿ ಗೆಲುವು ದಾಖಲಿಸಿತು.
ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಕೂಡಾ ಪಾಲ್ಗೊಂಡಿದ್ದರೂ, ಲೀಗ್ ಹಂತದಲ್ಲೇ ಹೊರಬಿದಿತ್ತು. ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿ ಹರ್ಮನ್‌ಪ್ರೀತ್ ಕೌರ್ ಪಡೆ 7 ವಿಕೆಟ್‌ಗೆ 342 ರನ್ ಕಲೆಹಾಕಿತು. ಸ್ಮೃತಿ ಮಂಧನಾ ಏಕದಿನದಲ್ಲಿ 11ನೇ ಶತಕ ಪೂರ್ಣಗೊಳಿಸಿದರು. ಅವರು 101 ಎಸೆತಕ್ಕೆ 116 ರನ್ ಸಿಡಿಸಿದರು. ಇದರಲ್ಲಿ 15 ಬೌಂಡರಿ ಹಾಗೂ ಎರಡು ಸೊಗಸಾದ ಸಿಕ್ಸರ್‌ಗಳು ಸೇರಿದ್ದವು. ಉಳಿದಂತೆ ಹರ್ಲೀನ್ ಡಿಯೋಲ್ 47, ಜೆಮಿಮಾ ರೋಡ್ರಿಗ್ಸ್ 44, ಹರ್ಮನ್‌ಪ್ರೀತ್ 41 ರನ್ ಕೊಡುಗೆ ನೀಡಿದರು. ಶ್ರೀಲಂಕಾ ಪರ ಮಲ್ಕಿ ಮದಾರ, ದೆವಾಮಿ ವಿಹಾಂಗ, ಸುಗಂದಿಕಾ ಕುಮಾರಿ ತಲಾ ಎರಡು ವಿಕೆಟ್ ಪಡೆದರೆ, ಇನೋಕಾ ರನ್‌ವೀರಾ ಒಂದು ವಿಕೆಟ್ ಕಬಳಿಸಿದರು.
ಬೃಹತ್ ಗುರಿ ಬೆನ್ನತ್ತಿದ ಲಂಕಾ, ಸ್ಪಿನ್ನರ್ ಸ್ನೆಹ್ ರಾಣಾ ಮಾರಕ ದಾಳಿಗೆ ತತ್ತರಿಸಿ 48.2 ಓವರ್‌ಗಳಲ್ಲಿ 245 ರನ್‌ಗೆ ಆಲೌಟಾಯಿತು. ಚಾಮರಿ ಅಟ್ಟಪಟ್ಟು(51), ನೀಲಾಕ್ಷಿ ಡಿ ಸಿಲ್ವ(48) ಹೊರತುಪಡಿಸಿ ಇತರ ಬ್ಯಾಟರ್‌ಗಳು ಮಿಂಚಲಿಲ್ಲ. ಮತ್ತೆ ಮಾರಕ ದಾಳಿ ಸಂಘಟಿಸಿದ ಸ್ನೇಹ ರಾಣಾ 38 ರನ್‌ಗೆ 4 ವಿಕೆಟ್ ಕಬಳಿಸುವ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸ್ಕೋರ್: ಭಾರತ 7 ವಿಕೆಟ್‌ಗೆ 342 (ಸ್ಮೃತಿ 116, ಹರ್ಲೀನ್ 47, ಜೆಮಿಮಾ 44, ಹರ್ಮನ್ 41, ಸುಗಂಧಿಕಾ 2-59), ಶ್ರೀಲಂಕಾ 48.2 ಓವರಲ್ಲಿ 245/10 (ಚಾಮರಿ 51, ಸ್ನೇಹ 4-38, ಅಮನ್‌ಜೋತ್ 3-54)
ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ, ಸರಣಿ ಶ್ರೇಷ್ಠ: ಸ್ನೇಹ ರಾಣಾ
ಟೀಂ ಇಂಡಿಯಾಗೆ ಸ್ನೆಹ್ ರಾಣಾ ಭರ್ಜರಿ ಕಮ್‌ಬ್ಯಾಕ್:
2025ರ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜಿನಲ್ಲಿ ಆಲ್ರೌಂಡರ್ ಸ್ನೆಹ್ ರಾಣಾ ಅನ್‌ಸೋಲ್ಡ್ ಆಗಿದ್ದರು. ಆದರೆ ಟೂರ್ನಿ ಆರಂಭಕ್ಕೂ ಮೊದಲೇ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಶ್ರೇಯಾಂಕಾ ಪಾಟೀಲ್‌ಗೆ ಬದಲಿ ಆಟಗಾರ್ತಿಯಾಗಿ ಸ್ನೆಹ್ ರಾಣಾ ಅವರನ್ನು ಆರ್‌ಸಿಬಿ ಕರೆ ತಂದಿತು. ಆರ್‌ಸಿಬಿ ಪರ ರಾಣಾ ಮಿಂಚಿನ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ 5 ಪಂದ್ಯಗಳನ್ನಾಡಿ 15 ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಜತೆಗೆ ರಾಣಾ ಅವರ ಅದ್ಭುತ ಪ್ರದರ್ಶನಕ್ಕೆ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇದರೊಂದಿಗೆ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ವಿದೇಶದಲ್ಲಿ ಭಾರತ ಗರಿಷ್ಠ ರನ್ ದಾಖಲೆ
ಭಾರತ ಮಹಿಳಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ವಿದೇಶದಲ್ಲಿ ಗರಿಷ್ಠ ರನ್ ದಾಖಲೆ ಬರೆಯಿತು. ತಂಡ 7 ವಿಕೆಟ್‌ಗೆ 342 ರನ್ ಕಲೆಹಾಕಿತು. 2022ರಲ್ಲಿ ಇಂಗ್ಲೆಂಡ್ ವಿರುದ್ಧ ಕ್ಯಾಂಟರ್‌ಬರಿ ಕ್ರೀಡಾಂಗಣದಲ್ಲಿ 333 ರನ್ ದಾಖಲಿಸಿತ್ತು ಈ ವರೆಗಿನ ದಾಖಲೆ. ಒಟ್ಟಾರೆ ಇದು ಭಾರತದ 5ನೇ ಗರಿಷ್ಠ. ವರ್ಷಾರಂಭದಲ್ಲಿ ಐರ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ 5 ವಿಕೆಟ್‌ಗೆ 435 ರನ್ ಗಳಿಸಿದ್ದು ಭಾರತದ ಗರಿಷ್ಠ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.