
ಮುಂಬೈ(ಡಿ.16): ದೀಪ್ತಿ ಶರ್ಮಾ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 347 ರನ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಹಿಳಾ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಅಂತರದ ಗೆಲುವು ದಾಖಲಿಸಿದ ತಂಡ ಎನ್ನುವ ಹಿರಿಮಗೆ ಭಾರತ ಮಹಿಳಾ ಕ್ರಿಕೆಟ್ ತಂಡವು ಪಾತ್ರವಾಗಿದೆ. ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನಾಡಿದ ಭಾರತ ತಂಡವು ತವರಿನಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮಹಿಳಾ ತಂಡವನ್ನು ಹೀನಾಯವಾಗಿ ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ.
ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಗೆಲ್ಲಲು ಇಂಗ್ಲೆಂಡ್‌ಗೆ 479 ರನ್‌ಗಳ ಬೃಹತ್ ಗುರಿ ನೀಡಿತು. ಇನ್ನು ದೊಡ್ಡ ಗುರಿ ನೋಡಿ ಅಳುಕುತ್ತಲೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಮತ್ತೊಮ್ಮೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ದಾಳಿಗೆ ತತ್ತರಿಸಿ ಹೋಯಿತು. ಮೊದಲ ಇನಿಂಗ್ಸ್‌ನಲ್ಲಿ ಕೇವಲ 7 ರನ್‌ಗೆ 5 ವಿಕೆಟ್ ಕಬಳಿಸಿದ್ದ ದೀಪ್ತಿ ಶರ್ಮಾ, ಇದೀಗ ಎರಡನೇ ಇನಿಂಗ್ಸ್‌ನಲ್ಲಿ 32 ರನ್ ನೀಡಿ 4 ಬಲಿ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಬಲವಾದ ಪೆಟ್ಟು ನೀಡಿದರು. ಇನ್ನು ಪೂಜಾ ವಸ್ತ್ರಾಕರ್ 23 ರನ್‌ಗೆ 3 ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು. ಪರಿಣಾಮ ಇಂಗ್ಲೆಂಡ್ ತಂಡವು 131 ರನ್‌ಗಳಿಗೆ ಸರ್ವಪತನ ಕಂಡಿತು.
ಈ ಮೊದಲು ಶ್ರೀಲಂಕಾ ತಂಡವು 1998ರ ಏಪ್ರಿಲ್‌ನಲ್ಲಿ ನಡೆದ ಮಹಿಳಾ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಎದುರು 309 ರನ್ ಅಂತರದ ಗೆಲುವು ದಾಖಲಿಸಿದ್ದು, ಇಲ್ಲಿಯವರೆಗೆ ಟೆಸ್ಟ್‌ನಲ್ಲಿ ದಾಖಲಾಗಿದ್ದ ಅತಿದೊಡ್ಡ ಅಂತರದ ಗೆಲುವು ಎನಿಸಿಕೊಂಡಿತ್ತು. ಇದೀಗ ಆ ದಾಖಲೆ ಟೀಂ ಇಂಡಿಯಾ ಪಾಲಾಗಿದೆ.
ರೋಹಿತ್ ಶರ್ಮಾ ಕೈಬಿಟ್ಟು ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವ ನೀಡಿದ್ದೇಕೆ?
ಇಂಗ್ಲೆಂಡ್ ಎದುರು ತವರಿನಲ್ಲಿ ಮೊದಲ ಜಯ: ಭಾರತ ಮಹಿಳಾ ಕ್ರಿಕೆಟ್ ತಂಡವು ತವರಿನಲ್ಲಿ ಇಂಗ್ಲೆಂಡ್ ಎದುರು 15 ಟೆಸ್ಟ್ ಪಂದ್ಯವನ್ನಾಡಿದ್ದು, ಇದೇ ಮೊದಲ ಬಾರಿಗೆ ತವರಿನಲ್ಲಿ ಆಂಗ್ಲರ ಎದುರು ಭಾರತ ವನಿತೆಯರ ತಂಡ ಟೆಸ್ಟ್ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಟೆಸ್ಟ್ ಗೆಲುವು ಮುಂದಿನ ವಾರ ಆಸ್ಟ್ರೇಲಿಯಾ ವಿರುದ್ದ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಮತ್ತಷ್ಟು ಆತ್ಮವಿಶ್ವಾಸ ತುಂಬುವುದರಲ್ಲಿ ಅಚ್ಚರಿಯಿಲ್ಲ.
ಏಕೈಕ ಟೆಸ್ಟ್: ದೀಪ್ತಿ ಶರ್ಮಾ ಆಲ್ರೌಂಡ್ ಆಟ, ಬೃಹತ್ ಜಯದತ್ತ ಭಾರತ ದಾಪುಗಾಲು!
ಭಾರತ-ಇಂಗ್ಲೆಂಡ್ ಟೆಸ್ಟ್ ಹೇಗಿತ್ತು?:
ಮೊದಲು ಬ್ಯಾಟ್ ಮಾಡಿದ ಭಾರತ ಸಂಘಟಿತ ಪ್ರದರ್ಶನದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 428 ರನ್ ಬಾರಿಸಿ ಸರ್ವಪತನ ಕಂಡಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ದೀಪ್ತಿ ಶರ್ಮಾ ಮಾರಕ ದಾಳಿಗೆ ತತ್ತರಿಸಿ ಕೇವಲ 136 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು 292 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ 6 ವಿಕೆಟ್ ಕಳೆದುಕೊಂಡು 186 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.