T20 World Cup ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಕಾಡಲಿದೆ: ರಾಹುಲ್ ದ್ರಾವಿಡ್

By Naveen KodaseFirst Published Oct 5, 2022, 10:18 AM IST
Highlights

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಜಸ್ಪ್ರೀತ್ ಬುಮ್ರಾ ಔಟ್
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ತಂಡವನ್ನು ಕಾಡಲಿದೆ ಎಂದ ರಾಹುಲ್ ದ್ರಾವಿಡ್
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭ

ಇಂದೋರ್(ಅ.05): ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಭಾರತ ಕ್ರಿಕೆಟ್ ತಂಡವನ್ನು ಕಾಡಲಿದೆ ಎನ್ನುವುದನ್ನು ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್‌ ಒಪ್ಪಿಕೊಂಡಿದ್ದಾರೆ. ಆದರೆ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಯಾವ ಆಟಗಾರ ಟೀಂ ಇಂಡಿಯಾ ಕೂಡಿಕೊಳ್ಳಲಿದ್ದಾರೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಬೆನ್ನು ನೋವಿನ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಹೊರಬಿದ್ದಿದ್ದ ಜಸ್ಪ್ರೀತ್ ಬುಮ್ರಾ, ಇದೀಗ ಅಧಿಕೃತವಾಗಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿರುವುದನ್ನು ಬಿಸಿಸಿಐ ಖಚಿತಪಡಿಸಿದೆ. ಆಸ್ಟ್ರೇಲಿಯಾದ ವೇಗದ ಪಿಚ್‌ನಲ್ಲಿ ಬುಮ್ರಾ ಅವರು ಮಾರಕ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದರು. ದೀರ್ಘ ವಿಶ್ರಾಂತಿಯ ಬಳಿಕ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ತಂಡ ಕೂಡಿಕೊಂಡಿದ್ದ ಬುಮ್ರಾಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಇದೀಗ ಮತ್ತೆ ತಂಡದಿಂದ ಹೊರಬಿದ್ದಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಒದಗಿಸಲು ಬಿಸಿಸಿಐ ಸಕಲ ಪ್ರಯತ್ನವನ್ನು ನಡೆಸಿತು. ದಕ್ಷಿಣ ಆಫ್ರಿಕಾ ಎದುರಿನ ಸರಣಿಗೂ ಮುನ್ನ ಫಿಟ್ನೆಸ್ ಗಳಿಸಿಕೊಳ್ಳಲು ಬುಮ್ರಾ ಅವರನ್ನು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಕಳಿಸಿಕೊಟ್ಟಿತ್ತು. ಆದರೆ ವೇಗಿದ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಆಯ್ಕೆ ಸಮಿತಿಯು ಇದೀಗ ಕಠಿಣ ನಿಲುವನ್ನು ಪ್ರಕಟಿಸಿದೆ.

T20 World cup 2022 ಟೂರ್ನಿಯಿಂದ ಬುಮ್ರಾ ಅಧಿಕೃತವಾಗಿ ಔಟ್, ಖಚಿತಪಡಿಸಿದ ಬಿಸಿಸಿಐ!

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾವು ಅಕ್ಟೋಬರ್ 06ರಂದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದೆ. ಆದರೆ ಇದುವರೆಗೂ ಟಿ20 ವಿಶ್ವಕಪ್ ಟೂರ್ನಿಗೆ ಬುಮ್ರಾ ಬದಲಿ ಆಟಗಾರರನ್ನು ಬಿಸಿಸಿಐ ಹೆಸರಿಸಿಲ್ಲ. ಇದೀಗ ಟಿ20 ಸರಣಿ ಮುಕ್ತಾಯವಾಗಿದ್ದು, ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 06ರಿಂದ ದಕ್ಷಿಣ ಆಫ್ರಿಕಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಿದರೆ, ಇನ್ನೊಂದೆಡೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪರ್ಥ್‌ನತ್ತ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಅಭ್ಯಾಸ ನಡೆಸಲಿದೆ.

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ನಮಗೆ ದೊಡ್ಡ ನಷ್ಟ. ಅವರೊಬ್ಬ ಅತ್ತುತ್ತಮ ಆಟಗಾರ ಆದರೆ ಈ ರೀತಿಯಾಗಿದೆ. ಇದು ಮತ್ತೊಬ್ಬ ಆಟಗಾರರಿಗೆ ಒಂದೊಳ್ಳೆಯ ಅವಕಾಶ ಸಿಕ್ಕಂತೆ ಆಗಿದೆ. ತಂಡದೊಳಗಿನ ವಾತಾವರಣದಲ್ಲಿ ನಾವು ಅವರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದು ರಾಹುಲ್ ದ್ರಾವಿಡ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇದೇ ವಿಚಾರದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾರತ ತಂಡವು ಆಸ್ಟ್ರೇಲಿಯಾಗೆ ತೆರಳಿದ ಬಳಿಕ ಬುಮ್ರಾ ಅವರ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆರಂಭವಾದರೂ ಸಹಾ, ಟೀಂ ಇಂಡಿಯಾ ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.

click me!