ಭಾರತ-ವೆಸ್ಟ್ ಇಂಡೀಸ್ ನಡುವಿನ ನಿರ್ಣಾಯಕ ಟಿ20 ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸಿದ್ದು, ಇಂದು[ಡಿ.11] ನಡೆಯುವ ಪಂದ್ಯದಲ್ಲಿ ಪ್ರಶಸ್ತಿ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಜೋರಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ(ಡಿ.11): ಬ್ಯಾಟಿಂಗ್ ದೈತ್ಯರಿಂದ ಕೂಡಿರುವ ವೆಸ್ಟ್‌ಇಂಡೀಸ್ ತಂಡ, 2ನೇ ಪಂದ್ಯದಲ್ಲಿ ತೋರಿದ ಪರಾಕ್ರಮ ಭಾರತೀಯ ಪಾಳೆಯದಲ್ಲಿ ಹಲವು ಸಮಸ್ಯೆಗಳು ಉದ್ಭವಿಸುವಂತೆ ಮಾಡಿದೆ. ಬುಧವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಸರಣಿ ಗೆಲುವಿನ ಮೇಲೂ ಟೀಂ ಇಂಡಿಯಾ ಕಣ್ಣಿಟ್ಟಿದೆ. ತಿರುವನಂತಪುರಂನಲ್ಲಿ ಸಾಧಿಸಿದ ಗೆಲುವು, ಹಾಲಿ ವಿಶ್ವ ಚಾಂಪಿಯನ್ನರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿದ್ದು ಭಾರತೀಯ ಮೇಲೆ ಪ್ರಹಾರ ಮುಂದುವರಿಸಲು ಕಾತರಿಸುತ್ತಿದ್ದಾರೆ.
ನಿರ್ಣಾಯಕ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ..?
undefined
ಯುವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ಭಾರತ ತಂಡದಲ್ಲಿ ಗೊಂದಲವಿದೆ. ವಾಷಿಂಗ್ಟನ್ ಆಲ್ರೌಂಡರ್ ಆಗಿ ತಂಡದಲ್ಲಿದ್ದರೂ ಬ್ಯಾಟ್ಸ್‌ಮನ್ ಆಗಿ ಅವರ ಕೊಡುಗೆ ಶೂನ್ಯ. ಅವರಾಡಿರುವ ಕಳೆದ 5 ಟಿ20 ಪಂದ್ಯಗಳಲ್ಲಿ (ವಿಂಡೀಸ್ ವಿರುದ್ಧ 2, ಬಾಂಗ್ಲಾ ವಿರುದ್ಧ 3) ಕೇವಲ 3 ವಿಕೆಟ್ ಕಬಳಿಸಿದ್ದಾರೆ. 23 ಓವರ್ ಬೌಲ್ ಮಾಡಿರುವ ಅವರು 144 ರನ್ ಬಿಟ್ಟುಕೊಟ್ಟಿದ್ದಾರೆ. ದ.ಆಫ್ರಿಕಾ ವಿರುದ್ಧದ 2 ಪಂದ್ಯಗಳಲ್ಲೂ ಅವರು ವಿಕೆಟ್ ಕಿತ್ತಿರಲಿಲ್ಲ. ಬೌಲಿಂಗ್ ವೈಫಲ್ಯದ ಜತೆ ಫೀಲ್ಡಿಂಗ್‌ನಲ್ಲೂ ವಾಷಿಂಗ್ಟನ್ ಪದೇ ಪದೇ ಎಡವಟ್ಟು ಮಾಡುತ್ತಿದ್ದಾರೆ. ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿದ್ದು, ನಾಯಕ ವಿರಾಟ್ ಕೊಹ್ಲಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ, ಈ ಪಂದ್ಯದಲ್ಲಿ ಚೆನ್ನೈ ಆಟಗಾರನ ಬದಲು ಕುಲ್ದೀಪ್ ಯಾದವ್‌ಗೆ ಸ್ಥಾನ ಸಿಗಬಹುದು.
ರಣಜಿ ಟ್ರೋಫಿ: ಗೌತಮ್ ಆಲ್ರೌಂಡ್ ಶೋ!
ಸಾಲು ಸಾಲು ಅವಕಾಶಗಳನ್ನು ಪಡೆಯುತ್ತಿರುವ ರಿಷಭ್ ಪಂತ್, ಬೇಜವಾಬ್ದಾರಿತನದ ಆಟ ಮುಂದುವರಿಸಿದ್ದಾರೆ. ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುತ್ತಿರುವ ಪಂತ್, ಡಿಆರ್‌ಎಸ್ ನಿರ್ಧಾರಗಳಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಅವರ ಕೊಡುಗೆ ಹೇಳಿಕೊಳ್ಳುವಂತದ್ದಲ್ಲ. ಕಳೆದ 7 ಇನ್ನಿಂಗ್ಸ್‌ಗಳಲ್ಲಿ ಒಂದು ಅರ್ಧಶತಕ ಸಹ ಗಳಿಸಿಲ್ಲ. ಸಂಜು ಸ್ಯಾಮ್ಸನ್ ಅವಕಾಶಕ್ಕಾಗಿ ಕಾದು ಕುಳಿತಿದ್ದು, ಪಂತ್ ಮೇಲೆ ಒತ್ತಡ ಹೆಚ್ಚುತ್ತಿದೆ.
ಉಳಿದಂತೆ ಬ್ಯಾಟ್ಸ್‌ಮನ್‌ಗಳೇ ತಂಡದ ಬೆನ್ನೆಲುಬು. ರೋಹಿತ್ ಶರ್ಮಾ ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದು, ತವರಿನ ಅಭಿಮಾನಿಗಳ ಮುಂದೆ ಅಬ್ಬರಿಸಲು ಉತ್ಸುಕರಾಗಿದ್ದಾರೆ. ಶಿಖರ್ ಧವನ್ ಗೈರು ಹಾಜರಿಯಲ್ಲಿ ಆರಂಭಿಕನ ಸ್ಥಾನ ಪಡೆದಿರುವ ಕೆ.ಎಲ್.ರಾಹುಲ್, ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಹೋರಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದ ಶಿವಂ ದುಬೆ ಸ್ಫೋಟಕ ಅರ್ಧಶತಕ ಸಿಡಿಸಿ ಸಾಮರ್ಥ್ಯ ಸಾಬೀತು ಪಡಿಸಿದ್ದು, ಅವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಶ್ರೇಯಸ್ ಅಯ್ಯರ್ ಸಹ ತವರು ಪ್ರೇಕ್ಷಕರನ್ನು ರಂಜಿಸಲು ಕಾತರಿಸುತ್ತಿದ್ದಾರೆ. ಕೊಹ್ಲಿಯ ಬ್ಯಾಟಿಂಗ್ ಸೊಬಗನ್ನು ಕಣ್ತುಂಬಿಕೊಳ್ಳಲು ಮುಂಬೈನ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಧವನ್ ಬದಲು ಏಕದಿನ ತಂಡಕ್ಕೆ ಮಯಾಂಕ್?
ಮೊದಲೆರಡು ಪಂದ್ಯಗಳಲ್ಲಿ ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಹರ್ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಈ ಪಂದ್ಯಕ್ಕೆ ಚಹರ್ ಬದಲಿಗೆ ಮೊಹಮದ್ ಶಮಿಯನ್ನು ಆಯ್ಕೆ ಮಾಡಿದರೆ ಅಚ್ಚರಿಯಿಲ್ಲ.
ಕೆರಿಬಿಯನ್ನರಲ್ಲಿ ಹೆಚ್ಚಿದ ಉತ್ಸಾಹ: 2ನೇ ಟಿ20ಯಲ್ಲಿ ತೋರಿದ ಸಾಂಘಿಕ ಪ್ರದರ್ಶನ, ವಿಂಡೀಸ್ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ. ತಂಡ ಸರಣಿ ಗೆದ್ದು ಅಚ್ಚರಿ ಮೂಡಿಸಲು ಎದುರು ನೋಡುತ್ತಿದ್ದು, ಬ್ಯಾಟ್ಸ್‌ಮನ್‌ಗಳ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ಎವಿನ್ ಲೆವಿಸ್, ನಿಕೋಲಸ್ ಪೂರನ್, ಶಿಮ್ರನ್ ಹೆಟ್ಮೇಯರ್, ಲೆಂಡ್ಲ್ ಸಿಮನ್ಸ್‌ರಂತಹ ಪ್ರತಿಭಾನ್ವಿತ ಆಟಗಾರರು ಭಾರತೀಯ ಬೌಲರ್‌ಗಳನ್ನು ಚೆಂಡಾಡುವ ಸಾಮರ್ಥ್ಯ ಹೊಂದಿದ್ದಾರೆ. ವಿಂಡೀಸ್ ಬೌಲರ್‌ಗಳು ಸಹ ಉತ್ತಮ ಲಯದಲ್ಲಿದ್ದಾರೆ. 2016ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಫೈನಲ್‌ಗೇರಿದ ಸಿಹಿ ನೆನಪಿನೊಂದಿಗೆ ವಿಂಡೀಸ್ ಈ ಪಂದ್ಯಕ್ಕಿಳಿಯಲಿದೆ.
ಪಿಚ್ ರಿಪೋರ್ಟ್
ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುವ ವಾಂಖೇಡೆ ಕ್ರೀಡಾಂಗಣದ ಪಿಚ್‌ನಲ್ಲಿ ರನ್ ಹೊಳೆ ಹರಿಯಲಿದೆ. ಮೊದಲು ಬ್ಯಾಟ್ ಮಾಡುವ ತಂಡ ಕನಿಷ್ಠ 200 ರನ್ ಗಳಿಸಬೇಕಾದ ಅನಿವಾರ್ಯತೆ ಎದುರಿಸಲಿದೆ. ಟಾಸ್ ಪ್ರಮುಖ ಪಾತ್ರ ವಹಿಸಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ(ನಾಯಕ), ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್.
ವಿಂಡೀಸ್: ಲೆಂಡ್ಲ್ ಸಿಮನ್ಸ್, ಎವಿನ್ ಲೆವಿಸ್, ಬ್ರಾಂಡನ್ ಕಿಂಗ್, ಶಿಮ್ರನ್ ಹೆಟ್ಮೇಯರ್, ನಿಕೋಲಸ್ ಪೂರನ್, ಕೀರನ್ ಪೊಲ್ಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಖಾರಿ ಪಿಯೆರ್, ಕೆಸ್ರಿಕ್ ವಿಲಿಯಮ್ಸ್, ಶೆಲ್ಡನ್ ಕಾಟ್ರೆಲ್, ಹೇಡನ್ ವಾಲ್ಶ್.
ಪಂದ್ಯ ಆರಂಭ: ಸಂಜೆ 7ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1