ಇಂದಿನಿಂದ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಮೊದಲ ಏಕದಿನ ಪಂದ್ಯ
ಏಕದಿನ ವಿಶ್ವಕಪ್ ಸಿದ್ದತೆಗೆ ಈ ಸರಣಿ ಬಳಸಿಕೊಳ್ಳಲಿರುವ ಭಾರತ
ಸೂರ್ಯಕುಮಾರ್ ಯಾದವ್ ಆಟದ ಮೇಲೆ ಎಲ್ಲರ ಕಣ್ಣು
ಬ್ರಿಡ್ಜ್‌ಟೌನ್(ಜು.27): ಟೆಸ್ಟ್ ಸರಣಿಯಲ್ಲಿ ಅಧಿಕಾರಯುತ ಪ್ರದರ್ಶನ ನೀಡಿದ ಭಾರತ, ಈಗ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮುಂಬರುವ ವಿಶ್ವಕಪ್‌ಗೆ ಅಗತ್ಯ ತಯಾರಿ ನಡೆಸಲು ಎದುರು ನೋಡುತ್ತಿದೆ. ಗುರುವಾರ ಇಲ್ಲಿನ ಕೆನ್ಸಿಂಗ್‌ಟನ್ ಓವಲ್‌ನಲ್ಲಿ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಡೆಯಲಿದೆ. ವಿಶ್ವಕಪ್‌ಗೆ ಕೇವಲ ಎರಡು ತಿಂಗಳಷ್ಟೇ ಬಾಕಿ ಇದ್ದರೂ ಭಾರತ ಇನ್ನೂ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಪ್ರಮುಖವಾಗಿ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಸಾಧಿಸಿದಷ್ಟು ಯಶಸ್ಸನ್ನು ಏಕದಿನ ಮಾದರಿಯಲ್ಲಿ ಕಾಣುತ್ತಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ಸತತ 3 ಪಂದ್ಯಗಳಲ್ಲಿ ಮೊದಲ ಎಸೆತದಲ್ಲೇ ಔಟ್ ಆಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ, ಈ ಸರಣಿಯಲ್ಲಿ ಅವರು ಸುಧಾರಿತ ಆಟವಾಡಬೇಕಿದೆ.
ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದು, ಋತುರಾಜ್ ಗಾಯಕ್ವಾಡ್ ಇನ್ನಷ್ಟು ಸಮಯ ಬೆಂಚ್ ಕಾಯಬೇಕಾಗಬಹುದು. ವಿರಾಟ್ ಕೊಹ್ಲಿ ವಿಶ್ವಕಪ್‌ಗೂ ಮುನ್ನ ಪ್ರಚಂಡ ಲಯ ಕಂಡುಕೊಂಡರೆ ಭಾರತಕ್ಕೆ ಅದಕ್ಕಿಂತ ದೊಡ್ಡ ಬಲ ಮತ್ತೊಂದಿರುವುದಿಲ್ಲ.
World Cup 2023: ಭಾರತ-ಪಾಕ್ ಪಂದ್ಯ ವೇಳೆ 10 ಸೆಕೆಂಡ್ ಜಾಹೀರಾತಿಗೆ ₹30 ಲಕ್ಷ?
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕೆ.ಎಲ್.ರಾಹುಲ್, ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸ್ಥಾನಕ್ಕೆ ಮೊದಲ ಆಯ್ಕೆ ಎನಿಸಿದ್ದು, ಮೀಸಲು ಕೀಪರ್ ಸ್ಥಾನಕ್ಕಾಗಿ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ನಡುವೆ ತೀವ್ರ ಪೈಪೋಟಿ ಇದೆ. ಇಬ್ಬರಿಗೂ ಸ್ಥಿರತೆಯ ಸಮಸ್ಯೆ ಇದ್ದು, ಯಾರಿಗೆ ತಂಡದ ಆಡಳಿತ ಅವಕಾಶ ನೀಡಲಿದೆ ಎನ್ನುವ ಕುತೂಹಲವಿದೆ.
ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಹಲ್‌ರನ್ನು ಹಿಂದಿಕ್ಕಿ ಕುಲ್ದೀಪ್ ಯಾದವ್ ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ. ಈ ವರ್ಷ ತಂಡ ಆಡಿರುವ 9 ಏಕದಿನಗಳಲ್ಲಿ 8ರಲ್ಲಿ ಕುಲ್ದೀಪ್ ಆಡಿದ್ದು, 15 ವಿಕೆಟ್ ಕಿತ್ತಿದ್ದಾರೆ. ಹೀಗಾಗಿ ಅವಕಾಶಕ್ಕಾಗಿ ಚಹಲ್ ಇನ್ನಷ್ಟು ಸಮಯ ಕಾಯಬೇಕಾಗಬಹುದು.
ಎಕ್ಸ್‌ಪ್ರೆಸ್ ವೇಗಿ ಉಮ್ರಾನ್ ಮಲಿಕ್‌ಗೂ ಇದು ಮಹತ್ವದ ಸರಣಿ ಎನಿಸಿದ್ದು, ವಿಶ್ವಕಪ್‌ಗೆ ಆಯ್ಕೆಯಾಗಬೇಕಿದ್ದರೆ ಅಸಾಧಾರಣ ಪ್ರದರ್ಶನ ನೀಡಬೇಕಿದೆ. ಅವರಿಗೆ ಮುಕೇಶ್ ಹಾಗೂ ಉನಾದ್ಕತ್‌ರಿಂದ ಪೈಪೋಟಿ ಎದುರಾಗಬಹುದು.
World Cup 2023: ಇಂಡೋ-ಪಾಕ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಹೊಸ ದಿನಾಂಕ ನಿಗದಿ?
ಮತ್ತೊಂದಡೆ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಹೊರಬಿದ್ದ ವಿಂಡೀಸ್, ಈ ಸರಣಿಯಿಂದ ಹೊಸ ಆರಂಭ ಪಡೆಯಲು ಎದುರು ನೋಡುತ್ತಿದೆ. ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿರುವ ಭಾರತವನ್ನು ಸೋಲಿಸಿದರೆ, ವಿಂಡೀಸ್‌ನ ಆತ್ಮವಿಶ್ವಾಸ ಸಹಜವಾಗಿಯೇ ವೃದ್ಧಿಸಲಿದೆ.
ಒಟ್ಟು ಮುಖಾಮುಖಿ: 139
ಭಾರತ: 70
ವಿಂಡೀಸ್: 63
ಟೈ: 02
ಫಲಿತಾಂಶವಿಲ್ಲ: 04
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್/ಇಶಾನ್ ಕಿಶನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್/ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಜಯದೇವ್ ಉನಾದ್ಕತ್/ಮುಕೇಶ್ ಕುಮಾರ್.
ವಿಂಡೀಸ್: ಬ್ರಾಂಡನ್ ಕಿಂಗ್, ಮೇಯಲ್ಸ್, ಕೇಸಿ ಕಾರ್ಟಿ, ಶಾಯ್ ಹೋಪ್(ನಾಯಕ), ಹೆಟ್ಮೇಯರ್, ಪೋವೆಲ್, ಶೆಫರ್ಡ್, ಸಿಂಕ್ಲೇರ್, ಜೋಸೆಫ್, ಗುಡಾಕೇಶ್/ಕರಿಹಾ/ಥಾಮಸ್, ಜೇಡನ್ ಸೀಲ್ಸ್.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಜಿಯೋ ಸಿನಿಯಾ, ಡಿಡಿ ಚಂದನ, ಡಿಡಿ ಸ್ಪೋರ್ಟ್ಸ್.
ಪಿಚ್ ರಿಪೋರ್ಟ್
ಕೆನ್ಸಿಂಗ್ಟನ್ ಓವಲ್‌ನ ಪಿಚ್ ಸ್ಪರ್ಧಾತ್ಮಕ ಪಿಚ್ ಆಗಿದ್ದು, ಇಲ್ಲಿ ವೇಗಿಗಳು ಹಾಗೂ ಸ್ಪಿನ್ನರ್‌ಗಳು ಇಬ್ಬರಿಗೂ ನೆರವು ದೊರೆಯಲಿದೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 250+ ಆಗಿದೆ. ಗುರುವಾರ 20% ಮಳೆ ಸಾಧ್ಯತೆ ಇದೆ.
ಚಂದನ ವಾಹಿನಿಯಲ್ಲೂ ಪಂದ್ಯ ನೇರಪ್ರಸಾರ!
ಇದೇ ಮೊದಲ ಬಾರಿಗೆ ದೂರದರ್ಶನ ಚಂದನ ವಾಹಿನಿಯಲ್ಲೂ ಕ್ರಿಕೆಟ್ ನೇರ ಪ್ರಸಾರವಾಗಲಿದ್ದು, ಕನ್ನಡದಲ್ಲೇ ವೀಕ್ಷಕ ವಿವರಣೆ ಇರಲಿದೆ. ಕನ್ನಡ ಮಾತ್ರವಲ್ಲದೇ ಡಿಡಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಬಂಗಾಳಿ ವಾಹಿನಿಗಳಲ್ಲೂ ಆಯಾ ಭಾಷೆಗಳಲ್ಲೇ ವೀಕ್ಷಕ ವಿವರಣೆ ನೀಡುವುದಾಗಿ ದೂರದರ್ಶನ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿಂಡೀಸ್ ವಿರುದ್ಧ ಸತತ 13ನೇ ಸರಣಿ ಗೆಲ್ಲುವ ಗುರಿ!
ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ. ವಿಂಡೀಸ್ ವಿರುದ್ಧ ಭಾರತ ಕೊನೆಯ ಬಾರಿಗೆ ಏಕದಿನ ಸರಣಿ ಸೋತಿದ್ದು 2006ರಲ್ಲಿ. ಇನ್ನು ವಿಂಡೀಸ್ ವಿರುದ್ಧ ಭಾರತ ಸತತ 8 ಏಕದಿನ ಪಂದ್ಯಗಳನ್ನು ಗೆದ್ದಿದೆ. 2019ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಕೊನೆಯ ಬಾರಿಗೆ ಸೋತಿತ್ತು.