
ತಿರುವನಂತಪುರಂ: ಇನ್ನೇನಿದ್ದರೂ 2027ರ ಏಕದಿನ ವಿಶ್ವಕಪ್ ಸಿದ್ಧತೆ ಕಡೆಗೇ ಗಮನ. ಇನ್ಮುಂದೆ ಭಾರತ ತಂಡ ಆಡುವ ಪ್ರತಿ ಸರಣಿಯಲ್ಲೂ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡೇ ಆಡಲಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇನ್ನು ಸರಿಯಾಗಿ 1 ವರ್ಷ ಬಾಕಿ ಇದ್ದು, ಭಾರತ ತಂಡಕ್ಕೆ ಸಿದ್ಧತೆ ನಡೆಸಲು 20-22 ಪಂದ್ಯಗಳು ಸಿಗಲಿವೆ. ಆ ಪೈಕಿ 3 ಪಂದ್ಯಗಳನ್ನು ವೆಸ್ಟ್‌ಇಂಡೀಸ್ ವಿರುದ್ಧ ಆಡಲಿದ್ದು, 3 ಪಂದ್ಯಗಳ ಸರಣಿಗೆ ಭಾನುವಾರ ಚಾಲನೆ ದೊರೆಯಲಿದೆ. ಮೊದಲ ಪಂದ್ಯಕ್ಕೆ ತಿರುವನಂತಪುರಂ ವೇದಿಕೆ ಒದಗಿಸಲಿದೆ.
ಬುಮ್ರಾ, ಶ್ರೇಯಸ್, ಅಕ್ಷರ್ ಸೇರಿ ಹಲವು ಪ್ರಮುಖ ಆಟಗಾರರು ಏಷ್ಯನ್ ಗೇಮ್ಸ್‌ಗೆ ತೆರಳಿರುವ ಕಾರಣ, ಭಾರತ ತನ್ನ ತಂಡ ಸಂಯೋಜನೆಯನ್ನು ಬದಲಿಸಬೇಕಿದೆ. ಆದರೂ, ಎಲ್ಲರ ಕಣ್ಣು ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮೇಲಿದ್ದು, ಅವರಿಬ್ಬರ ಪ್ರದರ್ಶನ ವಿಶ್ವಕಪ್ ದೃಷ್ಟಿಯಿಂದ ಭಾರತಕ್ಕೆ ಮಹತ್ವದೆನಿಸಿದೆ.
ಈ ವರ್ಷ ಆಡಿರುವ 3 ಏಕದಿನ ಸರಣಿಗಳಲ್ಲಿ 2ರಲ್ಲಿ ಸೋತಿರುವ ಭಾರತದ ಮೇಲೆ ಒತ್ತಡವಿದೆ. ನಾಯಕ ಶುಭ್‌ಮನ್ ಗಿಲ್ ಕೆಲ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ.
ಇನ್ನು, ವಿಂಡೀಸ್ ಸತತ 3ನೇ ಬಾರಿಗೆ ವಿಶ್ವಕಪ್‌ಗೆ ಪ್ರವೇಶಿಸಲು ಪಡೆಯಲು ಅರ್ಹತಾ ಟೂರ್ನಿಯಲ್ಲಿ ಆಡಬೇಕಾದ ಅನಿವಾರ್ಯತೆ ಸಿಲುಕಿದೆ. ಹೀಗಾಗಿ, ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ತಂಡದ ಆತ್ಮವಿಶ್ವಾಸ ಹೆಚ್ಚಲಿದೆ.
ಭಾರತ: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಋತುರಾಜ್ ಗಾಯಕ್ವಾಡ್, ಕೆ ಎಲ್ ರಾಹುಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಧೀರ್/ಬ್ರಾರ್/ಆಕೀಬ್ ನಬಿ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ವಿಂಡೀಸ್: ಕ್ಯಾಂಬೆಲ್, ಗ್ರೀವ್ಸ್, ಕಾರ್ಟಿ, ಶಾಯ್ ಹೋಪ್(ನಾಯಕ), ಶೆರ್ಫಾನೆ ರುಥರ್‌ಫೋರ್ಡ್, ರೋಸ್ಟನ್ ಚೇಸ್, ಫೋರ್ಡ್, ಮೋಟಿ, ಸೀಲ್ಸ್/ಶಮಾರ್, ಅಲ್ಜಾರಿ ಜೋಸೆಫ್, ವಿಟೆಲ್.
ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್‌ಸ್ಟಾರ್
ತಿರುವನಂತಪುರಂ: ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದಾಗಿ ಖಚಿತಪಡಿಸಿದ್ದಾರೆ. ಅಲ್ಲದೇ, ಅದು ಅವರು ಭಾರತ ಪರ ಆಡಲಿರುವ ಕೊನೆಯ ವಿಶ್ವಕಪ್ ಎಂದೂ ಸ್ಪಷ್ಟಪಡಿಸಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಮಾತನಾಡಿದ ಕೊಹ್ಲಿ, ‘ವಿಶ್ವಕಪ್‌ನಲ್ಲಿ ಆಡಬೇಕು ಎನ್ನುವ ಉತ್ಸಾಹದಿಂದಲೇ ನಾನು ಪ್ರತಿ ಪಂದ್ಯವನ್ನು ಆಡುತ್ತಿದ್ದೇನೆ. ವಿಶ್ವಕಪ್ ಗೆಲ್ಲಬೇಕು ಎನ್ನುವುದೊಂದೇ ಗುರಿ. ಅದಕ್ಕಾಗಿ ಏನೇ ಸವಾಲು ಎದುರಾದರೂ ಎದುರಿಸಲು ಸಿದ್ಧ’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.