
ಕೊಲಂಬೋ: ಟೆಸ್ಟ್ ಸರಣಿಗೂ ಮುನ್ನ ಶ್ರೀಲಂಕಾ ಇಲೆವೆನ್ ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 363 ರನ್ ಗಳಿಸಿ ಶ್ರೀಲಂಕಾ ಇಲೆವೆನ್ ತಂಡ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಎರಡನೇ ದಿನದ ಆರಂಭದಲ್ಲೇ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು.
ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಭಾರತಕ್ಕೆ ದೊಡ್ಡ ಹೊಡೆತ ಬಿತ್ತು. ವಿಶ್ವ ಫೆರ್ನಾಂಡೋ ಎಸೆತದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ದಿಲುಮ್ ಸುಧೀರಗೆ ಕ್ಯಾಚಿತ್ತು ಶೂನ್ಯಕ್ಕೆ ಔಟಾದರು.
ಭಾರತ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡು ಕಂಗಾಲಾದ ಬೆನ್ನಲ್ಲೇ ಎರಡನೇ ವಿಕೆಟ್‌ಗೆ ಜತೆಯಾದ ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 16 ಓವರ್ ಅಂತ್ಯದ ವೇಳೆಗೆ ಭಾರತ ತಂಡವು ಕೇವಲ ಒಂದು ವಿಕೆಟ್ ಕಳೆದುಕೊಂಡು 62 ರನ್ ಗಳಿಸಿದೆ. ಹಂಗಾಮಿ ನಾಯಕ ಕೆ ಎಲ್ ರಾಹುಲ್ 23 ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕನ್ನಡಿಗ ದೇವದತ್ ಪಡಿಕ್ಕಲ್ 39 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕೈಬೆರಳಿನ ಗಾಯದಿಂದ ಬಳಲುತ್ತಿರುವ ನಾಯಕ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಮೊದಲ ದಿನ ಗಿಲ್ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಅವರ ಬದಲು ಕೆ ಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು.
ನಿನ್ನೆ ಮೊದಲ ದಿನ, ರವೀಂದು ರಸಂತ, ನಿಶಾನ್ ಮಧುಷ್ಕ ಮತ್ತು ನಾಯಕ ಸೋನಾಲ್ ದಿನುಶ ಅವರ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ಇಲೆವೆನ್ ಉತ್ತಮ ಮೊತ್ತ ಪೇರಿಸಿತ್ತು. ರವೀಂದು ರಸಂತ 71 ರನ್ ಗಳಿಸಿ ಶ್ರೀಲಂಕಾ ಇಲೆವೆನ್ ಪರ ಟಾಪ್ ಸ್ಕೋರರ್ ಎನಿಸಿದರು. ನಿಶಾನ್ ಮಧುಷ್ಕ 65 ಎಸೆತಗಳಲ್ಲಿ 66 ರನ್ ಗಳಿಸಿದರೆ, ಸೋನಾಲ್ ದಿನುಶ 71 ಎಸೆತಗಳಲ್ಲಿ 52 ರನ್ ಬಾರಿಸಿದರು.
ಭಾರತದ ಪರ ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಮತ್ತು ಮಾನವ್ ಸುತಾರ್ ತಲಾ ಎರಡು ವಿಕೆಟ್ ಪಡೆದರು. ಗೂರ್ನೂರ್ ಬ್ರಾರ್ ಒಂದು ವಿಕೆಟ್ ಕಿತ್ತರು. ಆದರೆ, 11 ಓವರ್‌ಗಳಲ್ಲಿ 54 ರನ್ ನೀಡಿದ ಸಾರಾಂಶ ಜೈನ್, 13 ಓವರ್‌ಗಳಲ್ಲಿ 44 ರನ್ ಬಿಟ್ಟುಕೊಟ್ಟ ಮೊಹಮ್ಮದ್ ಸಿರಾಜ್ ಮತ್ತು 8 ಓವರ್‌ಗಳಲ್ಲಿ 32 ರನ್ ನೀಡಿದ ಪ್ರಸಿದ್ಧ್ ಕೃಷ್ಣ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ. ಇದು ಭಾರತಕ್ಕೆ ಹಿನ್ನಡೆಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.