
ಮುಂಬೈ: ಶ್ರೀಲಂಕಾ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಿಸಿಸಿಐ (BCCI) ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಅನುಭವಿ ಆಲ್-ರೌಂಡರ್ ರವೀಂದ್ರ ಜಡೇಜಾ ಅವರ ಪುನರಾಗಮನ ಪ್ರಮುಖ ಆಕರ್ಷಣೆಯಾಗಿದ್ದರೆ, ಮಧ್ಯಪ್ರದೇಶದ ಪ್ರತಿಭಾನ್ವಿತ ಆಟಗಾರ ಸಾರಂಶ್ ಜೈನ್ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ.
2026ರ ಐಪಿಎಲ್ ವೇಳೆ ಗಾಯಕ್ಕೆ ತುತ್ತಾಗಿದ್ದ ರವೀಂದ್ರ ಜಡೇಜಾ, ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ. ಉಪಖಂಡದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಜಡೇಜಾ ಅವರ ಉಪಸ್ಥಿತಿ ಭಾರತಕ್ಕೆ ಹೆಚ್ಚಿನ ಬಲ ನೀಡಲಿದೆ. ಗಾಯದ ಕಾರಣದಿಂದ ಕಳೆದ ಕೆಲವು ಸರಣಿಗಳನ್ನು ಮಿಸ್ ಮಾಡಿಕೊಂಡಿದ್ದ ಜಡ್ಡು, ಈಗ ಶ್ರೀಲಂಕಾ ನೆಲದಲ್ಲಿ ಸ್ಪಿನ್ ಮೋಡಿ ಮಾಡಲು ಸಜ್ಜಾಗಿದ್ದಾರೆ. ಒಟ್ಟು 89 ಟೆಸ್ಟ್ ಪಂದ್ಯಗಳನ್ನ ಆಡಿರುವ ಅವರು, 4095 ರನ್‌ಗಳಿಸಿದ್ದಾರೆ. ಒಟ್ಟು 348 ರನ್‌ಗಳಿಸಿದ್ದಾರೆ.
ವಾಷಿಂಗ್ಟನ್ ಸುಂದರ್ ಅವರು ಹ್ಯಾಮ್‌ಸ್ಟ್ರಿಂಗ್ ಗಾಯದಿಂದಾಗಿ ಆಯ್ಕೆಗೆ ಲಭ್ಯವಿಲ್ಲದ ಕಾರಣ, ಅವರ ಸ್ಥಾನಕ್ಕೆ ಸಾರಂಶ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ತಂಡದ ಪರ ಆಡುವ ಇವರು 54 ಪ್ರಥಮ ದರ್ಜೆ ಪಂದ್ಯಗಳಲ್ಲಿ 181 ವಿಕೆಟ್ ಪಡೆದಿದ್ದಾರೆ. ಇವರು ಕೇವಲ ಸ್ಪಿನ್ನರ್ ಮಾತ್ರವಲ್ಲ, ಬ್ಯಾಟಿಂಗ್‌ನಲ್ಲೂ ಮಿಂಚಬಲ್ಲರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇವರು 2,223 ರನ್ ಗಳಿಸಿದ್ದು, ಇದರಲ್ಲಿ 2 ಶತಕ ಹಾಗೂ 14 ಅರ್ಧಶತಕಗಳು ಸೇರಿವೆ. ಇತ್ತೀಚೆಗೆ ಶ್ರೀಲಂಕಾ ಎ ತಂಡದ ವಿರುದ್ಧ ಭಾರತ ಎ ಪರ ನೀಡಿದ ಶ್ರೇಷ್ಠ ಪ್ರದರ್ಶನವೇ ಇವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವಂತೆ ಮಾಡಿದೆ.
ಭಾರತ ಟೆಸ್ಟ್ ತಂಡ: ಶುಭಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಂಶ್ ಜೈನ್.
ಒಟ್ಟಿನಲ್ಲಿ ಜಡೇಜಾ ಅವರ ಅನುಭವ ಮತ್ತು ಸಾರಂಶ್ ಜೈನ್ ಅವರ ಯುವ ಉತ್ಸಾಹ ಶ್ರೀಲಂಕಾ ಪ್ರವಾಸದಲ್ಲಿ ಭಾರತಕ್ಕೆ ಹೇಗೆ ನೆರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.