
ನವಿ ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಎರಡೂ ತಂಡಗಳು ಚೊಚ್ಚಲ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಇನ್ನು ಈ ಐತಿಹಾಸಿಕ ಫೈನಲ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.
ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಐಸಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅವು ಸೋಲ್ಡ್ ಔಟ್ ಆಗಿವೆ. ಈಗ ಥರ್ಡ್ ಪಾರ್ಟಿ (ಅನಧಿಕೃತ) ವೆಬ್ ಸೈಟ್‌ಗಳು ಪಂದ್ಯದ ಟಿಕೆಟ್‌ಗಳನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿವೆ. ವರದಿಯೊಂದರ ಪ್ರಕಾರ, ವೆಬ್‌ಸೈಟ್‌ವೊಂದು ಟಿಕೆಟ್‌ಗಳ ದರವನ್ನು ₹16,500ರಿಂದ ₹1,36,000 ವರೆಗೂ ನಿಗದಿ ಮಾಡಿದೆ ಎನ್ನಲಾಗಿದೆ.
ಟಿಕೆಟ್‌ಗಾಗಿ ಭಾರೀ ಬೇಡಿಕೆಯಿದ್ದು, ಶನಿವಾರವೂ ಡಿ.ವೈ.ಪಾಟೀಲ್ ಕ್ರೀಡಾಂಗಣದ ಎದುರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಟಿಕೆಟ್ ಖರೀದಿಸಲು ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಭಾರತದ ನಾಯಕಿ ಹರ್ಮನ್ ಪ್ರೀತ್ ತಾವು ತಮ್ಮವರಿಗೆ ಟಿಕೆಟ್‌ಗಳನ್ನು ಹೊಂದಿಸಲು ಹರಸಾಹಸ ಮಾಡುತ್ತಿರುವುದಾಗಿ ಹೇಳಿದ್ದು, ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಎಷ್ಟರ ಮಟ್ಟಿಗೆ ಆಸಕ್ತಿ ಮೂಡಿಸಿದೆ ಎನ್ನುವುದಕ್ಕೆ ಉದಾಹರಣೆ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್ ಸ್ಟಾರ್
ಅಂ.ರಾ. ಕ್ರಿಕೆಟ್ ಸಮಿತಿ (ಐಸಿಸಿ) ಈ ವರ್ಷ ಮಹಿಳಾ ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಭಾನುವಾರ ಗೆಲ್ಲುವ ತಂಡಕ್ಕೆ 4.48 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 39.77 ಕೋಟಿ ರು.), ರನ್ನರ್-ಅಪ್ ತಂಡಕ್ಕೆ 2.24 ಮಿಲಿಯನ್ ಯುಎಸ್‌ಡಿ (ಅಂದಾಜು 19.88 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ವಿಶ್ವಕಪ್ ಇತಿಹಾಸದಲ್ಲೇ (ಪುರುಷ, ಮಹಿಳಾ) ಇದು ಗರಿಷ್ಠ ಬಹುಮಾನ ಮೊತ್ತ ಎನಿಸಿದೆ.
2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ಬರೋಬ್ಬರಿ 125 ಕೋಟಿ ರು. ಬಹುಮಾನ ನೀಡಿತ್ತು. ವೇತನ ಸಮಾನತೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ಬಿಸಿಸಿಐ, ಮಹಿಳಾ ತಂಡ ಏಕದಿನ ವಿಶ್ವಕಪ್ ಗೆದ್ದರೆ ಪುರುಷರ ತಂಡಕ್ಕೆ ನೀಡಿದಂತೆ 125 ಕೋಟಿ ರು. ಬಹುಮಾನ ನೀಡಲು ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಭಾರತ ತಂಡ 3ನೇ ಬಾರಿಗೆ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಡಲಿದೆ. ತಂಡ ಈ ಹಿಂದೆ 2005, 2017ರ ವಿಶ್ವಕಪ್ ಫೈನಲ್‌ಗಳಲ್ಲಿ ಸೋತಿತ್ತು. ಇನ್ನು 2020ರ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಮುಗ್ಗರಿಸಿತ್ತು. ಮತ್ತೊಂದೆಡೆ ದ.ಆಫ್ರಿಕಾ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್‌ಗೇರಿದೆ. ಆದರೆ ತಂಡ ಕಳೆದೆರಡು ಆವೃತ್ತಿಗಳ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಸೋತು ರನ್ನರ್-ಅಪ್ ಆಗಿತ್ತು. ಹೀಗಾಗಿ, ಎರಡೂ ತಂಡಗಳು ಯಾವುದೇ ಮಾದರಿ ಯಲ್ಲಿ ಚೊಚ್ಚಲ ವಿಶ್ವಕಪ್ ಗೆಲ್ಲುವ ತವಕದಲ್ಲಿವೆ.
ಕಳೆದೊಂದು ವರ್ಷದಲ್ಲಿ ಭಾರತ ಹಾಗೂ ದ.ಆಫ್ರಿಕಾ ನಡುವೆ ಐಸಿಸಿ ಟೂರ್ನಿಗಳಲ್ಲಿ ಇದು 3ನೇ ಫೈನಲ್. 2024ರ ಪುರುಷರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದ. ಆಫ್ರಿಕಾವನ್ನು 7 ರನ್‌ಗಳಿಂದ ರೋಚಕವಾಗಿ ಸೋಲಿಸಿದ್ದ ಭಾರತ 2ನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿತ್ತು. ಇನ್ನು 2025ರಲ್ಲಿ ನಡೆದ 2ನೇ ಆವೃತ್ತಿಯ ಅಂಡರ್ -19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 9 ವಿಕೆಟ್ ಗೆಲುವು ಸಾಧಿಸಿ, ಸತತ 2ನೇ ಟ್ರೋಫಿ ಗೆದ್ದಿತ್ತು. ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ದ.ಆಫ್ರಿಕಾವನ್ನು ಭಾರತ ಸೋಲಿಸುತ್ತಾ ಎನ್ನುವ ಕುತೂಹಲ ಅಭಿಮಾನಿಗಳದ್ದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.