
ನವಿ ಮುಂಬೈ: ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಭಾನುವಾರ ಹೊಸ ಚಾಂಪಿಯನ್‌ನ ಉದಯವಾಗಲಿದೆ. ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಟೂರ್ನಿಯಲ್ಲಿ ಹಲವು ಏಳು-ಬೀಳುಗಳನ್ನು ಕಂಡ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಚೊಚ್ಚಲ ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿದ್ದು, ದಶಕಗಳ ನೋವು, ನಿರಾಸೆಗಳನ್ನು ಮರೆಯಲು ಕಾತರಿಸುತ್ತಿವೆ.
ಈ ಟೂರ್ನಿಯನ್ನಷ್ಟೇ ಮುಂದಿಟ್ಟು ಹೇಳುವುದಾದರೆ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡೂ ಹಲವು ಸಲ ಮುಖಭಂಗಕ್ಕೊಳಗಾದವು. ಭಾರತ, ರೌಂಡ್ ರಾಬಿನ್ ಹಂತದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಸೇರಿ ಸತತ 3 ಪಂದ್ಯಗಳಲ್ಲಿ ಸೋಲು ಅನುಭವಿಸಿತು. ತಂಡದ ಸಂಯೋಜನೆ ಬಗ್ಗೆ ಭಾರೀ ಟೀಕೆ ಎದುರಿಸಿತು. ಬ್ಯಾಟಿಂಗ್ ವಿಭಾಗದ ಕುಸಿತ, ಬೌಲಿಂಗ್ ವೈಫಲ್ಯ, ಕಳಪೆ ಫೀಲ್ಡಿಂಗ್ ಎಲ್ಲವೂ ಚರ್ಚೆಗೆ ದಾರಿ ಮಾಡಿಕೊಟ್ಟವು.
ಇನ್ನು, ದ.ಆಫ್ರಿಕಾ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ವಿರುದ್ಧ 69ಕ್ಕೆ ಆಲೌಟ್ ಆಯಿತು. ಆ ಬಳಿಕ ಆಸ್ಟ್ರೇಲಿಯಾ ವಿರುದ್ಧ 97ಕ್ಕೆ ಕುಸಿಯಿತು. ಆದರೀಗ ಟೂರ್ನಿಯಲ್ಲಿ 7 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, 4 ಬಾರಿಯ ಚಾಂಪಿಯನ್ ಇಂಗ್ಲೆಂಡ್ ಉಳಿದುಕೊಂಡಿಲ್ಲ. ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ತಂಡವಿಲ್ಲ. ಆರಂಭದಲ್ಲಿ ತನಗೆ ಅಡ್ಡಿಯಾದ ಇಂಗ್ಲೆಂಡನ್ನು ಸೆಮೀಸ್‌ನಲ್ಲಿ ದ.ಆಫ್ರಿಕಾ ಹೊಸಕಿ ಹಾಕಿದರೆ, ಆಸ್ಟ್ರೇಲಿಯಾ ವಿರುದ್ಧ ದಾಖಲೆ ರನ್ ಚೇಸ್ ಮಾಡಿ ಭಾರತ ಫೈನಲ್‌ಗೇರಿದೆ. ಈ ಪಂದ್ಯ ಎರಡೂ ದೇಶಗಳಲ್ಲಿ ಮಹಿಳಾ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸುವ ಪಂದ್ಯವಾಗಬಹುದು.
ಭಾರತ ಕೊನೆಗೂ ತನ್ನ ತಂಡ ಸಂಯೋಜನೆಯಲ್ಲಿ ಪರಿಪೂರ್ಣತೆ ಕಂಡುಕೊಂಡಂತೆ ಕಾಣುತ್ತಿದೆ. 8ನೇ ಕ್ರಮಾಂಕದ ವರೆಗೂ ಬ್ಯಾಟರ್‌ಗಳಿದ್ದಾರೆ. 6 ಬೌಲಿಂಗ್ ಆಯ್ಕೆಗಳಿವೆ. ಸೆಮಿಫೈನಲ್‌ನಲ್ಲಿ ಆಡಿಸಿದ ತಂಡವನ್ನೇ ಫೈನಲ್‌ನಲ್ಲೂ ಮುಂದುವರಿಸುವ ಸಾಧ್ಯತೆ ಹೆಚ್ಚು ಒಂದು ವೇಳೆ ಬದಲಾವಣೆ ಮಾಡಿದರೆ, ಎಡಗೈ ಸ್ಪಿನ್ನರ್ ರಾಧಾ ಯಾದವ್ ಬದಲು ಆಂಡರ್ ಸ್ನೇಹ್ ರಾಣಾ ಆಡಬಹುದು. ಆದರೆ, ದ.ಆಫ್ರಿಕಾದ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ಬಲಗೈ ಬ್ಯಾಟರ್‌ಗಳಿಂದ ಕೂಡಿರುವ ಕಾರಣ, ಸ್ನೇಹ್ ರಾಣಾರನ್ನು ಆಡಿಸುವ ಸಾಧ್ಯತೆ ಕಡಿಮೆ. ಇನ್ನು, ದ.ಆಫ್ರಿಕಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಬಹುದು. ಅನ್ನೆಕ್ ಬಾಷ್ ಅಥವಾ ಅನರಿ ಡೆರ್ಕ್‌ಸೆನ್ ಬದಲು ಬೌಲರ್ ಮಸಬಾಟ ಕ್ಲಾಸ್‌ರನ್ನು ಆಡಿಸಬಹುದು.
ಭಾರತ: ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್, ಹರ್ಮನ್ ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್, ಅಮನ್‌ಜೋತ್, ರಾಧಾ ಯಾದವ್/ ಸ್ನೇಹ್ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಸಿಂಗ್.
ದ.ಆಫ್ರಿಕಾ: ಲಾರಾ ವೋಲ್ಟಾರ್ಟ್(ನಾಯಕಿ), ತಜ್ಜಿನ್ ಬ್ರಿಟ್ಸ್, ಬಾಷ್ /ಕ್ಲಾಸ್, ಸುನೆ ಲುಸ್, ಮಾರಿಝಾನ್ ಕಾಪ್, ಸಿನಾಲಿ ಜಾಸ್ಟಾ, ಡೆರ್ಕ್ಟಸನ್, ಕ್ಲೋಯಿ ಟ್ರಯೊನ್, ನದಿನ್ ಡೆ ಕ್ಲಿಕ್, ಅಯಬೊಂಗಾ ಖಾಕ, ಎಂಲಾಬಾ.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಜಿಯೋ ಹಾಟ್ ಸ್ಟಾರ್
ಸೋತಾಗ ಎಷ್ಟು ನೋವಾಗುತ್ತದೆ ಎನ್ನುವುದು ನಮಗೆ ಚೆನ್ನಾಗಿ ತಿಳಿದಿದೆ. ಆದರೆ ಗೆಲುವಿನ ಖುಷಿ ಹೇಗಿರಲಿದೆ ಎನ್ನುವುದನ್ನು ತಿಳಿಯಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ನಮ್ಮ ತಂಡದ ಪಾಲಿಗೆ ಇದು ವಿಶೇಷವಾದ ದಿನ. ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ನಂಬಿದೆ ಇದೆ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.