ಜೋಹಾನ್ಸ್‌ಬರ್ಗ್: ಮುಂದಿನ ತಿಂಗಳು ಭಾರತ ವಿರುದ್ದ ನಡೆಯಲಿರುವ ಟೆಸ್ಟ್ ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕ ತೆಂಬಾ ಬವುಮಾ ತಂಡ ಕೂಡಿಕೊಂಡಿದ್ದಾರೆ. ಎಡತೊಡೆಯ ಗಾಯದಿಂದಾಗಿ ಬವುಮಾ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಬವುಮಾ ಅನುಪಸ್ಥಿತಿಯಲ್ಲಿ, ಏಡನ್ ಮಾರ್ಕ್‌ರಮ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದರು.
ಟೆಸ್ಟ್ ತಂಡ ಕೂಡಿಕೊಳ್ಳುವ ಮುನ್ನ, ಬವುಮಾ ಈ ತಿಂಗಳ 30 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ 'ಎ' ವಿರುದ್ಧದ ನಾಲ್ಕು ದಿನಗಳ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾ 'ಎ' ತಂಡದಲ್ಲಿ ಆಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಆಡಿದ ಹೆಚ್ಚಿನ ಆಟಗಾರರು ಭಾರತ ವಿರುದ್ಧದ ಟೆಸ್ಟ್ ಸರಣಿಯ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಸ್ಫೋಟಕ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಅನುಭವಿ ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ಕೂಡ ತಂಡದಲ್ಲಿದ್ದಾರೆ.
ಸೆನುರಾನ್ ಮುತ್ತುಸ್ವಾಮಿ, ಸೈಮನ್ ಹಾರ್ಮರ್ ಮತ್ತು ಕೇಶವ್ ಮಹಾರಾಜ್ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ ದಾಳಿಯನ್ನು ಮುನ್ನಡೆಸಲಿದ್ದಾರೆ. 36 ವರ್ಷದ ಹಾರ್ಮರ್ 2015 ರಲ್ಲಿ ಭಾರತದಲ್ಲಿ ಟೆಸ್ಟ್ ಸರಣಿ ಆಡಿದ ದಕ್ಷಿಣ ಆಫ್ರಿಕಾ ತಂಡದಲ್ಲಿದ್ದರು. ಆ ಎರಡು ಪಂದ್ಯಗಳ ಸರಣಿಯಲ್ಲಿ ಹಾರ್ಮರ್ 10 ವಿಕೆಟ್ ಪಡೆದಿದ್ದರು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಎಂಟು ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಹಾರ್ಮರ್ ಪ್ರಮುಖ ಪಾತ್ರ ವಹಿಸಿದ್ದರು. ನವೆಂಬರ್ 14 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಆರಂಭವಾಗಲಿದೆ. ನವೆಂಬರ್ 22 ರಿಂದ ಗುವಾಹಟಿಯಲ್ಲಿ ಎರಡನೇ ಟೆಸ್ಟ್ ನಡೆಯಲಿದೆ. ಗುವಾಹಟಿಗೆ ಇದು ಮೊದಲ ಟೆಸ್ಟ್ ಪಂದ್ಯವಾಗಿದೆ. ಇದುವರೆಗೂ ಗುವಾಹಟಿಯ ನೂತನ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯ ನಡೆದಿರಲಿಲ್ಲ.
ತೆಂಬಾ ಬವುಮಾ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜೋರ್ಜಿ, ಜುಬೇರ್ ಹಮ್ಜಾ, ಸೈಮನ್ ಹಾರ್ಮರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಏಡನ್ ಮಾರ್ಕ್‌ರಮ್, ವಿಯಾನ್ ಮುಲ್ಡರ್, ಸೆನುರಾನ್ ಮುತ್ತುಸಾಮಿ, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.