Weather Forecast: ಇಂಡೋ-ದ. ಆಫ್ರಿಕಾ ನಡುವಿನ ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?

By Naveen KodaseFirst Published Jun 19, 2022, 12:28 PM IST
Highlights

ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯ
5 ಪಂದ್ಯಗಳ ಸರಣಿಯಲ್ಲಿ 2-2ರ ಸಮಬಲ ಸಾಧಿಸಿರುವ ಉಭಯ ತಂಡಗಳು
ಬೆಂಗಳೂರಿನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ

ಬೆಂಗಳೂರು(ಜೂ.19): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 5ನೇ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು(ಜೂ.19) ಸಂಜೆ ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯವು ಜರುಗಲಿದೆ. ಸೂಪರ್‌ ಸಂಡೇಯ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಈ ಪಂದ್ಯಕ್ಕೆ ವರುಣ ಅಡ್ಡಿ ಪಡಿಸುವ ಆತಂಕ ಎದುರಾಗಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ತಂಡವು ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಡೆಲ್ಲಿ ಹಾಗೂ ಕಟಕ್‌ನಲ್ಲಿ ಗೆಲುವಿನ ನಗೆ ಬೀರಿದ್ದ ಹರಿಣಗಳ ಪಡೆಗೆ ಕಳೆದೆರಡು ಪಂದ್ಯಗಳಲ್ಲಿ ರಿಷಭ್ ಪಂತ್ ನೇತೃತ್ವದ ಟೀಂ ಇಂಡಿಯಾ ತಿರುಗೇಟು ನೀಡುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವಂತೆ ಮಾಡಿದೆ. ಹೀಗಾಗಿ ಬೆಂಗಳೂರಿನಲ್ಲಿಂದು ನಡೆಯಲಿರುವ ನಿರ್ಣಾಯಕ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Latest Videos

ಒಂದು ಕಡೆ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವು ಆರಂಭದಲ್ಲಿ ಸಿಕ್ಕ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಲು ವಿಫಲವಾಗಿದ್ದರೇ, ಮತ್ತೊಂದೆಡೆ ಟೀಂ ಇಂಡಿಯಾ ಕಳೆದೆರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದು, ಹ್ಯಾಟ್ರಿಕ್ ಗೆಲುವು ದಾಖಲಿಸಲು ಹಾತೊರೆಯುತ್ತಿದೆ. ಭಾರತ ತಂಡದ ಪರ ಯುಜುವೇಂದ್ರ ಚಹಲ್ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇವರಿಗೆ ಹರ್ಷಲ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್ ಕೂಡಾ ಉತ್ತಮ ಸಾಥ್ ನೀಡುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಬ್ಯಾಟಿಂಗ್‌ನಲ್ಲಿ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಕೂಡಾ ಉತ್ತಮ ಲಯದಲ್ಲಿದ್ದಾರೆ.

ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಹವಾಮಾನ ವರದಿ ಏನು ಹೇಳುತ್ತೆ?

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನವು ಯಾವಾಗಲೂ ಆಡಲು ಉತ್ತಮ ವಾತಾವರಣವಾಗಿದೆ. ಆದರೆ ಇಂದು ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸದ್ಯದ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇದೆ. ಒಂದು ವೇಳೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸದೇ ಹೋದರೇ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟವು ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ಉಣಬಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Ind vs SA ಬೆಂಗಳೂರಿನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ಟಿ20 ಫೈನಲ್‌ ಫೈಟ್

ಪಿಚ್‌ ರಿಪೋರ್ಚ್‌

ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, ಇಲ್ಲಿ ನಡೆದ 7 ಟಿ20 ಪಂದ್ಯಗಳಲ್ಲಿ 5ರಲ್ಲಿ ರನ್‌ ಬೆನ್ನತ್ತಿದ ತಂಡ ಗೆಲುವು ಸಾಧಿಸಿದೆ. ಸಣ್ಣ ಬೌಂಡರಿಗಳಿರುವ ಕಾರಣ ರನ್‌ ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳಬಹುದು. ನಗರದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾರತ-ದಕ್ಷಿಣ ಆಫ್ರಿಕಾ ಟಿ20, ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಚಾರ ಮಾರ್ಗ ಬದಲಾವಣೆ!

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಇಶಾನ್ ಕಿಶನ್‌, ಋುತುರಾಜ್ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ರಿಷಭ್ ಪಂತ್‌(ನಾಯಕ), ದಿನೇಶ್ ಕಾರ್ತಿಕ್‌, ಹಾರ್ದಿಕ್ ಪಾಂಡ್ಯ‌, ಅಕ್ಷರ್ ಪಟೇಲ್‌, ಭುವನೇಶ್ವರ್ ಕುಮಾರ್‌, ಹರ್ಷಲ್ ಪಟೇಲ್‌, ಆವೇಶ್ ಖಾನ್‌, ಯುಜುವೇಂದ್ರ ಚಹಲ್‌.

ದಕ್ಷಿಣ ಅಫ್ರಿಕಾ: ತೆಂಬಾ ಬವುಮಾ(ನಾಯಕ), ರೀಜಾ ಹೆಂಡ್ರಿಕ್ಸ್‌, ಕ್ವಿಂಟನ್ ಡಿ ಕಾಕ್‌, ರಾಸ್ಸಿ ವ್ಯಾನ್ ಡರ್ ಡುಸೆನ್‌, ಹೆನ್ರಿಚ್ ಕ್ಲಾಸೆನ್‌, ಡ್ವೇನ್ ಪ್ರಿಟೋರಿಯಸ್‌, ಡೇವಿಡ್ ಮಿಲ್ಲರ್‌, ಮಾರ್ಕೊ ಯಾನ್ಸೆನ್‌, ಕೇಶವ್ ಮಹಾರಾಜ್‌, ತಬ್ರೀಜ್ ಶಮ್ಸಿ, ಕಗಿಸೋ ರಬಾಡ, ಏನ್ರಿಚ್ ನೋಕಿಯಾ.

ಪಂದ್ಯ ಆರಂಭ: ಸಂಜೆ 7ಕ್ಕೆ

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಡಿಸ್ನಿ-ಹಾಟ್‌ಸ್ಟಾರ್

click me!