IND vs SA ಭಾರತ-ಸೌತ್ ಆಫ್ರಿಕಾ ಬೆಂಗಳೂರು ಪಂದ್ಯ ಮಳೆಯಿಂದ ರದ್ದು, ಸರಣಿ ಹಂಚಿಕೆ!

By Suvarna NewsFirst Published Jun 19, 2022, 9:45 PM IST
Highlights
  • ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಸರಣಿ
  • ಅಂತಿಮ ಪಂದ್ಯ ಮಳೆಯಿಂದ ರದ್ದು
  • ಸರಣಿ ಹಂಚಿಕೊಂಡ ಭಾರತ ಸೌತ್ ಆಫ್ರಿಕಾ

ಬೆಂಗಳೂರು(ಜೂ.19): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 5ನೇ ಹಾಗೂ ಕೊನೆಯ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಕ್ಕೆ ಬಿಟ್ಟು ಬಿಡದೆ ಕಾಡಿದ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯವನ್ನು ರದ್ಧುಗೊಳಿಸಲಾಗಿದೆ.

ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಬೆನ್ನಲ್ಲೇ ಮಳೆ ಆರಂಭಗೊಂಡಿತು. ಹೀಗಾಗಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 7.50ಕ್ಕೆ ಆರಂಭಗೊಂಡಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಆರಂಭಿಕ ಹಂತದಲ್ಲಿ ಆಘಾತ ಅನುಭವಿಸಿತು.

Latest Videos

ಪೊಲೀಸ್‌ ತಂಡದ ವಿರುದ್ಧ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ಕಿಚ್ಚ ಸುದೀಪ್!

ಇಶಾನ್ ಕಿಶನ್ ಹಾಗೂ ರುತುರಾಜ್ ಗಾಯಕ್ವಾಡ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. 3.3 ಓವರ್ ಆಗುವಷ್ಟರಲ್ಲೇ ಭಾರತ ಪ್ರಮುಖ 2 ವಿಕೆಟ್ ಕಳೆದುಕೊಂಡು 28 ರನ್ ಸಿಡಿಸಿತ್ತು. ಈ ವೇಳೆ ಮಳೆ ಮತ್ತೆ ವಕ್ಕರಿಸಿತ್ತು. ಹೀಗಾಗಿ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು.

ಬೆಂಗಳೂರಿನಲ್ಲಿ ಸುರಿದ ನಿಂತರ ಮಳೆಯಿಂದ ಮತ್ತೆ ಪಂದ್ಯ ಆರಂಭ ಮಾಡಲು ಸಾಧ್ಯವಾಗಲೇ ಇಲ್ಲ. ಮಳೆ ಅನುವು ಮಾಡಿಕೊಡದ ಕಾರಣ ಮ್ಯಾಚ್ ರೆಫ್ರಿ ಪಂದ್ಯ ರದ್ದು ಎಂದು ಘೋಷಿಸಿದರು. ಹೀಗಾಗಿ ಭಾರತ ಹಾಗೂ ಸೌತ್ ಆಫ್ರಿಕಾ 2-2 ಅಂತರದಲ್ಲಿ ಸರಣಿ ಹಂಚಿಕೊಂಡಿದೆ. 

ಬರೋಬ್ಬರಿ 2 ವರ್ಷಗಳ ಬಳಿಕ ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೊಂಡಿತ್ತು. ಪಂದ್ಯ ವೀಕ್ಷಿಸಲು 40,000 ಅಭಿಮಾನಿಗಳು ಕ್ರೀಡಾಂಗಣದಲ್ಲಿ ಹಾಜರಿದ್ದರು. ಆದರೆ ಮಳೆ ಎಲ್ಲರನ್ನೂ ನಿರಾಸೆಗೊಳಿಸಿತು. ಸರಣಿ ನಿರ್ಧರಿಸುವ ಅತೀ ಮಹತ್ವದ ಪಂದ್ಯ ಮಳೆಗೆ ಆಹುತಿಯಾಗಿದೆ.

 

ರಿಷಭ್ ಪಂತ್ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಕಷ್ಟಪಡಬೇಕೆಂದ ಮಾಜಿ ಕ್ರಿಕೆಟಿಗ..!

ಕೊರೋನಾ ವಕ್ಕರಿಸಿದ ಬಳಿಕ ಶೇಕಡಾ 100 ರಷ್ಟು ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಬಿಸಿಸಿಐ ಅವಕಾಶ ನೀಡಿದ ಮೊದಲ ಪಂದ್ಯ ಇದಾಗಿತ್ತು. ಆದರೆ ಈ ಪಂದ್ಯ ಕೇವಲ 3.3 ಓವರ್ ಮಾತ್ರ ಕಂಡಿದೆ. ಕಳೆದ ಮೂರು ದಿನದಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಹಲವು ಹಿನ್ನಡೆ ಅನುಭವಿಸಿತ್ತು. ಐಪಿಎಲ್ ಟೂರ್ನಿ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿಗೂ ವಿಶ್ರಾಂತಿ ನೀಡಲಾಗಿತ್ತು. ಇನ್ನು ನಾಯಕತ್ವ ವಹಿಸಿದ್ದ ಕೆಎಲ್ ರಾಹುಲ್ ಕೂಡ ಇಂಜುರಿಯಿಂದ ಟೂರ್ನಿಯಿಂದ ಹೊರಬಿದ್ದರು. ಅತ್ಯುತ್ತಮ ಫಾರ್ಮ್‌ನಲ್ಲಿದ್ದ ರಾಹುಲ್ ಅಲಭ್ಯತೆ ತಂಡಕ್ಕೆ ಮತ್ತಷ್ಟು ಹಿನ್ನಡೆ ತಂದಿತು.

ರಿಷಬ್ ಪಂತ್ ನಾಯಕತ್ವದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೇ ಮುಗ್ಗರಿಸಿತ್ತು. 7 ವಿಕೆಟ್ ಗೆಲುವು ಸಾಧಿಸಿದ ಸೌತ್ ಆಫ್ರಿಕಾ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಇನ್ನು ದ್ವಿತೀಯ ಪಂದ್ಯದಲ್ಲಿ ಸೌತ್ ಆಫ್ರಿಕಾ 4 ವಿಕೆಟ್ ಗೆಲುವು ಸಾಧಿಸಿತು. ಆದರೆ 3 ಮತ್ತು ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿತು. ಹೀಗಾಗಿ ಬೆಂಗಳೂರಿನ ಅಂತಿಮ ಟಿ20 ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿತ್ತು. ಆದರೆ ಈ ಪಂದ್ಯ ಮಳೆಗೆ ಆಹುತಿಯಾಗಿದೆ. 
 

click me!