
ಜೋಹಾನ್ಸ್‌ಬರ್ಗ್(ನ.03): ಕ್ರಿಕೆಟ್ ಜಗತ್ತಿನ ಅತ್ಯಂತ ಬದ್ದ ಎದುರಾಳಿಗಳೆಂದೇ ಗುರುತಿಸಿಕೊಂಡಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈಗಿನಿಂದಲೇ ಭಾರಿ ಕ್ರೇಜ್ ಶುರುವಾಗಿದೆ. 2027ರ ಏಕದಿನ ವಿಶ್ವಕಪ್‌ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಬರೋಬ್ಬರಿ 84 ಲಕ್ಷಕ್ಕೂ ಅಧಿಕ ಟಿಕೆಟ್ ಬೇಡಿಕೆ ವ್ಯಕ್ತವಾಗಿದೆ. ಆದರೆ, ಈ ಪಂದ್ಯ ನಡೆಯಲಿರುವ ಕ್ರೀಡಾಂಗಣದ ಆಸನ ಸಾಮರ್ಥ್ಯ ಕೇವಲ 34 ಸಾವಿರ ಮಾತ್ರ!
ಅಕ್ಟೋಬರ್ 10ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ (The Wanderers Stadium) ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಟಿಕೆಟ್‌ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಡೆಸುತ್ತಿರುವ ಟಿಕೆಟ್ ಲಾಟರಿ ಪ್ರಕ್ರಿಯೆಯಲ್ಲಿ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐಸಿಸಿ ನೀಡಿರುವ ಮಾಹಿತಿಯ ಪ್ರಕಾರ, ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್‌ಗಾಗಿ ಒಟ್ಟು 83,97,294 ಅರ್ಜಿಗಳು ಸಲ್ಲಿಕೆಯಾಗಿವೆ. ಅಂದರೆ ಸುಮಾರು 84 ಲಕ್ಷ ಟಿಕೆಟ್ ಬೇಡಿಕೆ ಬಂದಿದೆ. ಕೇವಲ 34 ಸಾವಿರ ಆಸನಗಳಿರುವ ಕ್ರೀಡಾಂಗಣದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಅಭಿಮಾನಿಗಳು ಪಂದ್ಯ ವೀಕ್ಷಿಸಲು ಆಸಕ್ತಿ ತೋರಿಸಿರುವುದು ಕ್ರಿಕೆಟ್ ಮೇಲಿನ ಅಭಿಮಾನಿಗಳ ಹುಚ್ಚು ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಭಾರತ-ಪಾಕಿಸ್ತಾನ ಪಂದ್ಯದ ಬಳಿಕ 2027ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಅತಿ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ. ನವೆಂಬರ್ 21ರಂದು ಇದೇ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ವಿಶ್ವಕಪ್ ಫೈನಲ್ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು ಬರೋಬ್ಬರಿ 79 ಲಕ್ಷಕ್ಕೂ ಅಧಿಕ ಟಿಕೆಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಐಸಿಸಿ ಅಂಕಿ-ಅಂಶಗಳ ಪ್ರಕಾರ, ಫೈನಲ್ ಪಂದ್ಯಕ್ಕೆ 79,00,944 ಟಿಕೆಟ್ ಬೇಡಿಕೆ ಬಂದಿದೆ. ಹೀಗಾಗಿ ಟಿಕೆಟ್ ಬೇಡಿಕೆಯಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಮೊದಲ ಸ್ಥಾನದಲ್ಲಿದ್ದರೆ, ಫೈನಲ್ ಪಂದ್ಯ ಎರಡನೇ ಸ್ಥಾನದಲ್ಲಿದೆ.
2027ರ ಏಕದಿನ ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಸಂಬಂಧಿಸಿದ ಲಾಟರಿ ಪ್ರಕ್ರಿಯೆಗೆ ವಿಶ್ವದಾದ್ಯಂತ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಐಸಿಸಿ ಪ್ರಕಾರ, 193 ದೇಶಗಳ ಅಭಿಮಾನಿಗಳಿಂದ ಒಟ್ಟು 12 ಕೋಟಿಗೂ ಅಧಿಕ ಟಿಕೆಟ್ ಬೇಡಿಕೆಗಳು ಬಂದಿವೆ. ಸುಮಾರು 28 ಲಕ್ಷ ಪ್ರತ್ಯೇಕ ಅಭಿಮಾನಿಗಳು ಪಂದ್ಯ ವೀಕ್ಷಿಸಲು ತಮ್ಮ ಆಸಕ್ತಿಯನ್ನು ನೋಂದಾಯಿಸಿಕೊಂಡಿದ್ದಾರೆ. ಇದು ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಟಿಕೆಟ್ ಬೇಡಿಕೆಯ ವಿಚಾರದಲ್ಲಿ ದೊಡ್ಡ ಪ್ರತಿಕ್ರಿಯೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಭಾರತ-ಪಾಕಿಸ್ತಾನ ಪಂದ್ಯ ಹಾಗೂ ಫೈನಲ್ ಪಂದ್ಯಗಳ ಮೇಲೆ ಅಭಿಮಾನಿಗಳ ಗಮನ ಕೇಂದ್ರೀಕೃತವಾಗಿದೆ.
2027ರ ಏಕದಿನ ವಿಶ್ವಕಪ್ ಹಲವು ಕಾರಣಗಳಿಂದ ವಿಶೇಷವಾಗಿದೆ. ಬರೋಬ್ಬರಿ 24 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಆಫ್ರಿಕಾ ಖಂಡಕ್ಕೆ ಮರಳುತ್ತಿದೆ. ಈ ಮೊದಲು ಕೊನೆಯದಾಗಿ 2003ರಲ್ಲಿ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿತ್ತು. ಇದೀಗ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಈ ಟೂರ್ನಿಗೆ ಆತಿಥ್ಯ ವಹಿಸಲಿವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿದ್ದು, 12 ಕ್ರೀಡಾಂಗಣಗಳಲ್ಲಿ 57 ಪಂದ್ಯಗಳು ನಡೆಯಲಿವೆ. ಟೂರ್ನಿಯ ಬಹುತೇಕ ಪಂದ್ಯಗಳಿಗೆ ಈಗಿನಿಂದಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 41 ಪಂದ್ಯಗಳಿಗಾಗಿ ಎಂಟು ಕ್ರೀಡಾಂಗಣಗಳಲ್ಲಿ 10.5 ಕೋಟಿಗೂ ಅಧಿಕ ಟಿಕೆಟ್ ಬೇಡಿಕೆ ವ್ಯಕ್ತವಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಪಾಲ್ಗೊಳ್ಳುವ ಪಂದ್ಯಗಳಿಗೆ ಮಾತ್ರ ಸುಮಾರು 2.6 ಕೋಟಿ ಟಿಕೆಟ್ ಬೇಡಿಕೆ ಬಂದಿದೆ ಎಂದು ಐಸಿಸಿ ತಿಳಿಸಿದೆ.
2027ರ ಏಕದಿನ ವಿಶ್ವಕಪ್ ಪಂದ್ಯಗಳ ಟಿಕೆಟ್‌ಗಾಗಿ ನಡೆಯುತ್ತಿರುವ ಲಾಟರಿ ಪ್ರಕ್ರಿಯೆ ನವೆಂಬರ್ 21, 2026ರವರೆಗೆ ತೆರೆದಿರಲಿದೆ. ಆಸಕ್ತ ಅಭಿಮಾನಿಗಳು ಐಸಿಸಿಯ ಅಧಿಕೃತ ಟಿಕೆಟ್ ವೆಬ್‌ಸೈಟ್ ಮೂಲಕ ತಮ್ಮ ಆಸಕ್ತಿಯನ್ನು ನೋಂದಾಯಿಸಿಕೊಳ್ಳಬಹುದು. ಒಂದು ಪಂದ್ಯಕ್ಕೆ ಲಭ್ಯವಿರುವ ಟಿಕೆಟ್‌ಗಳಿಗಿಂತ ಹೆಚ್ಚಿನ ಅರ್ಜಿಗಳು ಬಂದರೆ, ಲಾಟರಿ ವ್ಯವಸ್ಥೆಯ ಮೂಲಕ ಅದೃಷ್ಟಶಾಲಿ ಅಭಿಮಾನಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಟಿಕೆಟ್ ಸಿಗುವ ಖಾತರಿ ಇರುವುದಿಲ್ಲ.
ಒಟ್ಟಿನಲ್ಲಿ, 2027ರ ವಿಶ್ವಕಪ್ ಆರಂಭಕ್ಕೆ ಇನ್ನೂ ಸಮಯವಿದ್ದರೂ ಭಾರತ-ಪಾಕಿಸ್ತಾನ ಪಂದ್ಯಕ್ಕೆ ವ್ಯಕ್ತವಾಗಿರುವ 84 ಲಕ್ಷ ಟಿಕೆಟ್ ಬೇಡಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಈ ಕದನಕ್ಕಿರುವ ಅಪಾರ ಕ್ರೇಜ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೇ 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ ಆಯೋಜನೆಗೊಂಡಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್‌ಗೇರಿತ್ತು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಇನ್ನು 2023ರಲ್ಲಿ ನಡೆದ ಕಳೆದ ಏಕದಿನ ವಿಶ್ವಕಪ್‌ನಲ್ಲೂ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತಾದರೂ, ಮತ್ತೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. ಇದೀಗ ಟೀಂ ಇಂಡಿಯಾ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.