ಭಾರತ-ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಯಾವಗಿಂದ ಆರಂಭ? ಎಷ್ಟು ಗಂಟೆಗೆ ಮ್ಯಾಚ್ ಶುರು? ಯಾವ ಚಾನೆಲ್‌ನಲ್ಲಿ ನೇರ ಪ್ರಸಾರ?

Published : Oct 20, 2026, 08:50 AM ISTUpdated : Oct 20, 2026, 08:54 AM IST
India vs New Zealand

ಸಾರಾಂಶ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಅಕ್ಟೋಬರ್ 22ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಪ್ರಮುಖ ಆಟಗಾರರಿದ್ದಾರೆ. ಈ ಪಂದ್ಯಗಳನ್ನು ಭಾರತೀಯ ಕಾಲಮಾನ ಮಧ್ಯಾಹ್ನ 12:30ಕ್ಕೆ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಕ್ರೈಸ್ಟ್‌ಚರ್ಚ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಗುರುವಾರ (ಅಕ್ಟೋಬರ್ 22) ಶುರುವಾಗಲಿದೆ. ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿಯುತ್ತಿರುವ 16 ಜನರ ಟೀಂ ಇಂಡಿಯಾದಲ್ಲಿ ಕೇರಳ ಮೂಲದ ಆಟಗಾರ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಪ್ರಮುಖ ಆಟಗಾರರಿದ್ದಾರೆ. ತವರಿನಲ್ಲಿ ವೆಸ್ಟ್‌ ಇಂಡೀಸ್ ಎದುರು ಇತ್ತೀಚೆಗಷ್ಟೇ ಅದ್ಭುತ ಪ್ರದರ್ಶನ ತೋರಿದ್ದ ಸಂಜು ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಕಿವೀಸ್ ನಾಡಿನಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಾ ಎನ್ನುವ ಕುತೂಹಲ ಜೋರಾಗಿದೆ.

ಟಿ20 ಸರಣಿಗೆ ಯಾವ ಮೈದಾನಗಳು ಆತಿಥ್ಯ?

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನವು ಸರಣಿಯ ಮೊದಲ ಎರಡು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸುತ್ತಿದೆ. ಶನಿವಾರ ಎರಡನೇ ಪಂದ್ಯ ನಡೆಯಲಿದೆ. ಆಮೇಲೆ ಮೂರನೇ ಪಂದ್ಯ ವೆಲ್ಲಿಂಗ್ಟನ್‌ನ ಎನ್‌ಆರ್‌ವೈ (NRY) ಸ್ಟೇಡಿಯಂನಲ್ಲಿ (ಅಕ್ಟೋಬರ್ 27), ನಾಲ್ಕನೇ ಪಂದ್ಯ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ (ಅಕ್ಟೋಬರ್ 30) ಮತ್ತು ಕೊನೆಯ ಪಂದ್ಯ ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ (ನವೆಂಬರ್ 1) ನಡೆಯಲಿದೆ.

ಎಷ್ಟು ಗಂಟೆಗೆ ಪಂದ್ಯ ಆರಂಭ? ಎಲ್ಲಿ ನೇರ ಪ್ರಸಾರ?

ಟಿ20 ಸರಣಿ ಮುಗಿದ ಮೇಲೆ ಭಾರತ ತಂಡ ನ್ಯೂಜಿಲೆಂಡ್‌ನಲ್ಲಿ 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್‌ನ ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8:00 ಗಂಟೆಗೆ ಎಲ್ಲಾ ಪಂದ್ಯಗಳು ಶುರುವಾಗಲಿವೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:30ಕ್ಕೆ ಟಿ20 ಪಂದ್ಯಗಳು ಆರಂಭವಾಗುತ್ತವೆ. ಭಾರತದ ಕ್ರಿಕೆಟ್ ಫ್ಯಾನ್ಸ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯಗಳನ್ನು ಲೈವ್ ಆಗಿ ನೋಡಬಹುದು. ಸೋನಿ ಲಿವ್ (Sony Liv) ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ರವಿಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ಹರ್ಷ ಭೋಗ್ಲೆ ಅವರಂತಹ ದಿಗ್ಗಜರು ಹಿಂದಿ ಕಾಮೆಂಟರಿ ಮಾಡಲಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಸ್ಕೈ ಸ್ಪೋರ್ಟ್ಸ್, ಹಾಗೇ ಯುಎಸ್ಎ ಮತ್ತು ಕೆನಡಾದಲ್ಲಿ ವಿಲೋ ಟಿವಿಯಲ್ಲಿ ಪಂದ್ಯಗಳು ಪ್ರಸಾರವಾಗಲಿವೆ.

ಗಿಲ್‌ಗೆ ಸ್ವಂತ ಖರ್ಚಿನಲ್ಲಿ ಐವರು ನೆಟ್‌ ಬೌಲರ್ಸ್‌!

ನವದೆಹಲಿ: ಭಾರತ ಟೆಸ್ಟ್‌ ತಂಡದ ನಾಯಕ ಶುಭ್‌ಮನ್‌ ಗಿಲ್‌ ಅವರು ಮುಂಬರುವ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಗೆ 4-5 ವೈಯಕ್ತಿಕ ನೆಟ್‌ ಬೌಲರ್ಸ್‌ಗಳನ್ನು ತಮ್ಮ ಜೊತೆಗೆ ನ್ಯೂಜಿಲೆಂಡ್‌ಗೆ ಕರೆದುಕೊಂಡು ಹೋಗಲಿದ್ದಾರೆ. ಅವರ ವೆಚ್ಚವನ್ನು ಸ್ವತಃ ಗಿಲ್‌ ಭರಿಸಲಿದ್ದಾರೆ.

ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಬಿಸಿಸಿಐ ತನ್ನ ಆಟಗಾರರ ಅನುಕೂಲಕ್ಕಾಗಿ ಪ್ರತ್ಯೇಕ ನೆಟ್‌ ಬೌಲರ್ಸ್‌ಗಳನ್ನು ವ್ಯವಸ್ಥೆ ಮಾಡುತ್ತದೆ. ಆದರೆ ಈ ರೀತಿ ಆಟಗಾರರೊಬ್ಬರು ಸ್ವಂತ ಖರ್ಚಿನಲ್ಲಿ ನೆಟ್‌ ಬೌಲರ್ಸ್‌ಗಳನ್ನು ಕರೆದೊಯ್ಯುತ್ತಿರುವುದು ಇದೇ ಮೊದಲು. ಅವರು ಅ.23 ಅಥವಾ 24ಕ್ಕೇ ನ್ಯೂಜಿಲೆಂಡ್‌ಗೆ ತೆರಳಲಿದ್ದು, ಟೆಸ್ಟ್‌, ಏಕದಿನ ಸರಣಿಗಾಗಿ ಕಠಿಣ ಅಭ್ಯಾಸ ನಡೆಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾ ಆಯ್ಕೆ ಸಮಿತಿಯ ಹೊಸ ಅಧ್ಯಕ್ಷ ಪ್ರಗ್ಯಾನ್ ಓಜಾ ಸಂಬಳ ಎಷ್ಟು?
ಮೈದಾನದಲ್ಲಿ ಕ್ಯಾಪ್ಟನ್ ಕೂಲ್, ಪತ್ನಿ ಜೊತೆ ತುಂಟಾಟದ ಕಿಂಗ್; ವೈರಲ್ ಆಯ್ತು ಧೋನಿ-ಸಾಕ್ಷಿ ಕ್ಯೂಟ್ ವಿಡಿಯೋ!