Ind vs NZ Mumbai Test: ಮಯಾಂಕ್‌ ಅಗರ್‌ವಾಲ್ ಶತಕ, ಬೃಹತ್ ಮೊತ್ತದತ್ತ ಭಾರತ

By Suvarna NewsFirst Published Dec 3, 2021, 6:09 PM IST
Highlights

* ಮುಂಬೈ ಟೆಸ್ಟ್‌ನಲ್ಲಿ ಶತಕ ಚಚ್ಚಿದ ಮಯಾಂಕ್ ಅಗರ್‌ವಾಲ್‌

* ಮೊದಲ ಸೆಷನ್ ಆಟ ರದ್ದಾದರೂ ಸಹಾ ಭಾರತ ಮೇಲುಗೈ

* ಮೊದಲ ದಿನದಾಟದಂತ್ಯಕ್ಕೆ ಭಾರತ 221/4

ಮುಂಬೈ(ಡಿ.03): ಮೈದಾನ ಒದ್ದೆಯಾಗಿದ್ದರಿಂದ ಮೊದಲ ಸೆಷನ್‌ ಆಟ ನಡೆಯದಿದ್ದರೂ ಸಹಾ, ಆ ಬಳಿಕ ಟೀಂ ಇಂಡಿಯಾ(Team India) ಅಮೋಘ ಪ್ರದರ್ಶನ ತೋರುವ ಮೂಲಕ ಮೊದಲ ದಿನದಾಟದ ಗೌರವ ಸಂಪಾದಿಸಿದೆ. ಕನ್ನಡಿಗ ಮಯಾಂಕ್‌ ಅಗರ್‌ವಾಲ್ (Mayank Agarwal) ಬರೋಬ್ಬರಿ ಎರಡು ವರ್ಷಗಳ ಬಳಿಕ ಶತಕ ಚಚ್ಚಿ ಅಬ್ಬರಿಸಿದ್ದು, ದ್ವಿಶತಕದತ್ತ ದಾಪುಗಾಲಿಡಲಾರಂಭಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಮುಂಬೈ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಮೊದಲ ದಿನದಾಟದಂತ್ಯದ ವೇಳೆಗೆ 4 ವಿಕೆಟ್‌ ಕಳೆದುಕೊಂಡು 221 ರನ್‌ ಬಾರಿಸಿದೆ.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್‌ ನಡೆಸಿದ ಶುಭ್‌ಮನ್ ಗಿಲ್ (Shubman Gill) ಹಾಗೂ ಮಯಾಂಕ್‌ ಅಗರ್‌ವಾಲ್ ಜೋಡಿ ಮೊದಲ ವಿಕೆಟ್‌ಗೆ 80 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಉತ್ತಮ ಬ್ಯಾಟಿಂಗ್ ಮೂಲಕ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಶುಭ್‌ಮನ್‌ ಗಿಲ್‌ 44 ರನ್‌ ಬಾರಿಸಿ ಅಜಾಜ್ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು.

ಶೂನ್ಯ ಸುತ್ತಿದ ಪೂಜಾರ-ವಿರಾಟ್ ಕೊಹ್ಲಿ: ಈಗಾಗಲೇ ರನ್‌ ಬರ ಅನುಭವಿಸುತ್ತಿರುವ ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara), ಎರಡನೇ ಟೆಸ್ಟ್‌ ಪಂದ್ಯದಲ್ಲೂ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾಗಿದ್ದಾರೆ. ಶುಭ್‌ಮನ್ ಗಿಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಪೂಜಾರ ಕೇವಲ 5 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಕಾನ್ಪುರ ಟೆಸ್ಟ್‌ನ (Kanpur Test) ಮೊದಲ ಇನಿಂಗ್ಸ್‌ನಲ್ಲಿ 26 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 22 ರನ್‌ ಬಾರಿಸಿದ್ದ ಪೂಜಾರ, ಇದೀಗ ಮುಂಬೈ ಟೆಸ್ಟ್‌ನಲ್ಲಿ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಇನ್ನು ಐಸಿಸಿ ಟಿ20 ವಿಶ್ವಕಪ್‌ ಬಳಿಕ ವಿಶ್ರಾಂತಿಗೆ ಜಾರಿದ್ದ ವಿರಾಟ್ ಕೊಹ್ಲಿ (Virat Kohli) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಅಜಾಜ್ ಪಟೇಲ್ ಅವಕಾಶ ನೀಡಲಿಲ್ಲ. ವಿರಾಟ್ ಕೊಹ್ಲಿ ಕೇವಲ 4 ಎಸೆತಗಳನ್ನು ಎದುರಿಸಿ ವಿವಾದಾತ್ಮಕ ಎಲ್‌ಬಿ ಬಲೆಗೆ ಬಿದ್ದರು. ಈ ವೇಳೆ ಟೀಂ ಇಂಡಿಯಾ 80 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Stumps on Day 1 of the 2nd Test. 221/4 (Mayank 120*)

Scorecard - https://t.co/KYV5Z1jAEM pic.twitter.com/WL8GGArLEe

— BCCI (@BCCI)

ಕೇವಲ 16 ಎಸೆತಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಮಯಾಂಕ್‌ ಅಗರ್‌ವಾಲ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 80 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕಾನ್ಪುರ ಟೆಸ್ಟ್‌ನಲ್ಲಿ ಆಕರ್ಷಕ ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದ ಶ್ರೇಯಸ್ ಅಯ್ಯರ್, ಮುಂಬೈ ಟೆಸ್ಟ್‌ನಲ್ಲಿ ಕೇವಲ 18 ರನ್‌ ಬಾರಿಸಿ ಅಜಾಜ್ ಪಟೇಲ್‌ಗೆ ನಾಲ್ಕನೇ ಬಲಿಯಾದರು.

ವೃತ್ತಿಜೀವನದ 4ನೇ ಟೆಸ್ಟ್ ಶತಕ ಬಾರಿಸಿ ಅಬ್ಬರಿಸಿದ ಮಯಾಂಕ್‌ ಅಗರ್‌ವಾಲ್‌: ಕಳೆದ ಕೆಲ ಪಂದ್ಯಗಳಲ್ಲಿ ರನ್‌ ಬರ ಅನುಭವಿಸಿದ್ದ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌, ಮಹತ್ವದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಮಯಾಂಕ್‌ ಅಗರ್‌ವಾಲ್ 196 ಎಸೆತಗಳನ್ನು ಎದುರಿಸಿ ವೃತ್ತಿಜೀವನದ ನಾಲ್ಕನೇ ಶತಕ ಸಿಡಿಸಿ ಮಿಂಚಿದರು. ಇದಷ್ಟೇ ಅಲ್ಲದೇ 2019ರ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸುವಲ್ಲಿ ಅಗರ್‌ವಾಲ್ ಯಶಸ್ವಿಯಾಗಿದ್ದಾರೆ. ಬಾಂಗ್ಲಾದೇಶ ವಿರುದ್ದ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ಮಯಾಂಕ್ ಶತಕ ಸಿಡಿಸಿದ್ದರು. ಇದೀಗ ಬರೋಬ್ಬರಿ 2 ವರ್ಷಗಳ ಬಳಿಕ ಮೂರಂಕಿ ಮೊತ್ತ ದಾಖಲಿಸುವಲ್ಲಿ ಮಯಾಂಕ್ ಯಶಸ್ವಿಯಾಗಿದ್ದಾರೆ. ದಿನದಾಟದಂತ್ಯದ ವೇಳೆಗೆ ಮಯಾಂಕ್‌ ಅಗರ್‌ವಾಲ್‌ 246 ಎಸೆತಗಳನ್ನು ಎದುರಿಸಿ 14 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 120 ರನ್‌ ಬಾರಿಸಿ ಎರಡನೇ ದಿನದಾಟಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಅಗರ್‌ವಾಲ್-ಸಾಹ ಜತೆಯಾಟದ ಮೇಲೆ ಎಲ್ಲರ ಚಿತ್ತ: ಶ್ರೇಯಸ್ ಅಯ್ಯರ್ ವಿಕೆಟ್ ಪತನದ ಬಳಿಕ ಅಗರ್‌ವಾಲ್ ಕೂಡಿಕೊಂಡ ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹ (Wriddhiman Saha) ಎಚ್ಚರಿಯ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. 5ನೇ ವಿಕೆಟ್‌ಗೆ ಈ ಜೋಡಿ 134 ಎಸೆತಗಳನ್ನು ಎದುರಿಸಿ ಮುರಿಯದ 61 ರನ್‌ಗಳ ಜತೆಯಾಟ ನಿಭಾಯಿಸಿ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಈ ಜೋಡಿಯನ್ನು ಕಿವೀಸ್‌ ಬೌಲರ್‌ಗಳು ಆದಷ್ಟು ಬೇಗ ಬೇರ್ಪಡಿಸದೇ ಹೋದರೆ ಪಂದ್ಯದ ಮೇಲೆ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸುವುದು ನಿಶ್ಚಿತ.

ಸಂಕ್ಷಿಪ್ತ ಸ್ಕೋರ್
ಭಾರತ: 221/4
ಮಯಾಂಕ್ ಅಗರ್‌ವಾಲ್: 120*
ಅಜಾಜ್ ಅಹಮ್ಮದ್: 73/4
(* ಮೊದಲ ದಿನದಾಟದಂತ್ಯದ ವೇಳೆಗೆ)

click me!