
ವಿಶಾಖಪಟ್ಟಣ: ನ್ಯೂಜಿಲೆಂಡ್ ವಿರುದ್ಧ ಈಗಾಗಲೇ ಟಿ20 ಸರಣಿ ಗೆದ್ದಿರುವ ಭಾರತ ತಂಡ ಸತತ 4ನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಬುಧವಾರ ವಿಶಾಖಪಟ್ಟಣದಲ್ಲಿ 4ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆತಿಥೇಯ ಭಾರತ ತಂಡ ಕಿವೀಸ್ ಮೇಲಿನ ತನ್ನ ಪ್ರಾಬಲ್ಯ ಹೆಚ್ಚಿಸುವ ಕಾತರದಲ್ಲಿದ್ದರೆ, ಕಿವೀಸ್ ಟೀಮ್ ಸರಣಿಯಲ್ಲಿ ಮೊದಲ ಗೆಲುವಿಗಾಗಿ ಎದುರು ನೋಡುತ್ತಿದೆ.
ಭಾರತ ಈ ಪಂದ್ಯದಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ತಂಡದ ಆಟಗಾರರ ಪ್ರದರ್ಶನದ ಮೇಲೆ ಕೇಂದ್ರೀಕರಿಸಿದೆ. ಪ್ರಮುಖವಾಗಿ ಸಂಜು ಸ್ಯಾಮ್ಸನ್ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದು, ಟಿ20 ವಿಶ್ವಕಪ್‌ಗೂ ಮುನ್ನ ಅವರ ಸ್ಥಾನದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ತಿಲಕ್ ವರ್ಮಾ ಈ ಸರಣಿಯಿಂದ ಹೊರಬಿದ್ದ ಕಾರಣಕ್ಕೆ ಅವರ ಬದಲು ಇಶಾನ್ ಕಿಶನ್ 3ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆದರೆ ಆರಂಭಿಕ ಆಟಗಾರ ಸಂಜು 3 ಪಂದ್ಯಗಳಲ್ಲಿ ಕೇವಲ 16 ರನ್ ಗಳಿಸಿದ್ದಾರೆ. ಸರಣಿಯ ಕೊನೆ 2 ಪಂದ್ಯಗಳಲ್ಲಿ ಸಂಜುಗೆ ಅವಕಾಶ ಸಿಕ್ಕರೆ, ಅದನ್ನು ಅವರು ಸರಿಯಾಗಿ ಬಳಸಿಕೊಳ್ಳಬೇಕಿದೆ. ಒಂದು ವೇಳೆ ಕಳಪೆ ಪ್ರದರ್ಶನ ಮುಂದುವರಿಸಿದರೆ ಟಿ20 ವಿಶ್ವಕಪ್‌ನಲ್ಲಿ ಹೊರಗುಳಿಯಬೇಕಾಗುತ್ತದೆ. ವಿಶ್ವಕಪ್‌ನಲ್ಲಿ ತಿಲಕ್ ತಂಡಕ್ಕೆ ಮರಳಿ 3ನೇ ಕ್ರಮಾಂಕದಲ್ಲಿ ಆಡಿದರೆ, ಇಶಾನ್ ಕಿಶನ್‌ರನ್ನು ಆರಂಭಿಕ ಸ್ಥಾನದಲ್ಲಿ ಆಡಿಸಲು ಆಯ್ಕೆ ಸಮಿತಿ ಮುಂದಾಗಬಹುದು. ಹೀಗಾಗಿ ಸಂಜು ಈಗ ಒತ್ತಡದಲ್ಲಿದ್ದು, ಅವರಿಂದ ದೊಡ್ಡ ಇನ್ನಿಂಗ್ಸ್ ಮೂಡಿಬರಬೇಕಿದೆ. ಉಳಿದಂತೆ ಅಭಿಷೇಕ್ ಶರ್ಮಾ ಮತ್ತೊಮ್ಮೆ ಆರ್ಭಟಿಸಲು ಕಾಯುತ್ತಿದ್ದು, ನಾಯಕ ಸೂರ್ಯಕುಮಾರ್ ಮತ್ತೊಂದು ದೊಡ್ಡ ಇನ್ನಿಂಗ್ಸ್ ಕಟ್ಟಲು ಎದುರು ನೋಡುತ್ತಿದ್ದಾರೆ.
ಕಳೆದ ಪಂದ್ಯದಲ್ಲಿ ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡಲಾಗಿತ್ತು. ಅವರ ಬದಲು ರವಿ ಬಿಷ್ಣೋಯ್‌ಗೆ ಅವಕಾಶ ನೀಡಲಾಗಿತ್ತು. ಉತ್ತಮ ಪ್ರದರ್ಶನ ನೀಡಿದ್ದ ರವಿ 4 ಓವರ್‌ಗಳಲ್ಲಿ 18 ರನ್‌ಗೆ 2 ವಿಕೆಟ್ ಪಡೆದಿದ್ದರು. ಹೀಗಾಗಿ 4ನೇ ಪಂದ್ಯದಲ್ಲಿ ರವಿಯನ್ನು ಹೊರಗಿಟ್ಟು ವರುಣ್ ಚಕ್ರವರ್ತಿಯನ್ನೇ ಆಡಿಸಲಾಗುತ್ತದೆಯೇ ಎಂಬ ಕುತೂಹಲವಿದೆ. ಕುಲ್ದೀಪ್ ಯಾದವ್‌ಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ರವಿಯನ್ನು ಆಡಿಸಲೂಬಹುದು.
ಪಂದ್ಯ ಆರಂಭ: ಸಂಜೆ 7 ಗಂಟೆಗೆ
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಸೂರ್ಯಕುಮಾರ್ ಯಾವದ್ ಈ ಪಂದ್ಯದಲ್ಲಿ ಹೊಸ ಮೈಲುಗಲ್ಲು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ 3000 ರನ್ ಪೂರ್ಣಗೊಳಿಸಲು ಇನ್ನು 41 ರನ್ ಬೇಕಿದೆ. ಇದನ್ನು ಸಾಧಿಸಿದರೆ ಭಾರತದ ಪರ ಟಿ20ಯಲ್ಲಿ 3000 ರನ್ ಗಳಿಸಿದ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಶರ್ಮಾ 4231, ವಿರಾಟ್ ಕೊಹ್ಲಿ 4188 ರನ್ ಕಲೆಹಾಕಿದ್ದಾರೆ.
04 ಪಂದ್ಯ: ಭಾರತ ತಂಡ ವಿಶಾಖಪಟ್ಟಣದಲ್ಲಿ 4 ಟಿ20 ಪಂದ್ಯ ಆಡಿದೆ. ಈ ಪೈಕಿ 3ರಲ್ಲಿ ಗೆದ್ದಿದ್ದರೆ, 1ರಲ್ಲಿ ಸೋತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.