Ind vs NZ: ಮೂರನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿ, ಟಾಸ್ ಕೊಂಚ ತಡ..!

By Naveen KodaseFirst Published Nov 22, 2022, 11:44 AM IST
Highlights

ಭಾರತ-ನ್ಯೂಜಿಲೆಂಡ್ ಮೂರನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿ
ಮೊದಲ ಪಂದ್ಯವು ಒಂದೂ ಎಸೆತ ಕಾಣದೇ ರದ್ದಾಗಿತ್ತು
ಮೂರನೇ ಟಿ20 ಪಂದ್ಯಕ್ಕೆ ನೇಪಿಯರ್ ಆತಿಥ್ಯ

ನೇಪಿಯರ್(ನ.22): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಟಿ20ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಟಾಸ್‌ಗೂ ಮುನ್ನ ಮಳೆ ಸುರಿದ್ದರಿಂದ ಟಾಸ್ ಕೊಂಚ ತಡವಾಗಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, 3 ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 1-0 ಮುನ್ನಡೆ ಕಾಯ್ದುಕೊಂಡಿದ್ದು, ಟಿ20 ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಇಲ್ಲಿನ ಮೆಕ್‌ಲ್ಯಾನ್ ಪಾರ್ಕ್‌ ಮೈದಾನ ಆತಿಥ್ಯ ವಹಿಸಿದೆ. ಪಂದ್ಯದ ಟಾಸ್‌ಗೂ ಮುನ್ನ ನಿರಂತರವಾಗಿ ಮಳೆ ಸುರಿದಿದ್ದರಿಂದಾಗಿ ಟಾಸ್ ಕೊಂಚ ತಡವಾಗಲಿದೆ. ಈಗಾಗಲೇ ಪಿಚ್‌ನ್ನು ಕವರ್‌ ಮಾಡಲಾಗಿದೆ. ಆದರೆ ಸಂತಸದ ವಿಚಾರವೆಂದರೇ, ಔಟ್‌ಫೀಲ್ಡ್‌ ಡ್ರೈ ಇರುವುದರಿಂದ ಆಟಗಾರರು ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ

Toss in Napier has been delayed due to rain. pic.twitter.com/wyZ5TEi9ao

— BCCI (@BCCI)

ಹೌದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ ಸ್ಪೋಟಕ ಶತಕ ಹಾಗೂ ದೀಪಕ್ ಹೂಡಾ ಮಿಂಚಿನ ದಾಳಿಯ ನೆರವಿನಿಂದ ಟೀಂ ಇಂಡಿಯಾ 65 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Ind vs NZ: ಕಿವೀಸ್‌ ವಿರುದ್ಧ ಟಿ20 ಸರಣಿ ಗೆಲ್ಲುತ್ತಾ ಭಾರತ?

ಉಭಯ ತಂಡಗಳಲ್ಲೂ ಬದಲಾವಣೆ ಸಾಧ್ಯತೆ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಉಭಯ ತಂಡಗಳಲ್ಲೂ ಬದಲಾವಣೆಯಾಗುವ ಸಾಧ್ಯತೆಯಿದ್ದು, ಭಾರತ ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಹಾಗೂ ಉಮ್ರಾನ್ ಮಲಿಕ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಹೀಗಾದಲ್ಲಿ ಇಶಾನ್ ಕಿಶನ್ ಇಲ್ಲವೇ ಶ್ರೇಯಸ್ ಅಯ್ಯರ್ ಇಬ್ಬರಲ್ಲಿ ಒಬ್ಬರು ಬೆಂಚ್ ಕಾಯಿಸಬೇಕಾಗಬಹುದು. ಇನ್ನೊಂದೆಡೆ ಆರ್ಶದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಿ ಮಾರಕ ವೇಗಿ ಉಮ್ರಾನ್ ಮಲಿಕ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿದೆ. ಇನ್ನೊಂದೆಡೆ ಚಿಕಿತ್ಸೆಗೆ ದಾಖಲಾಗಲಿರುವ ಕಾರಣ ಕೇನ್‌ ವಿಲಿಯಮ್ಸನ್‌ ಈ ಪಂದ್ಯಕ್ಕೆ ಗೈರಾಗಲಿದ್ದಾರೆ. ಟಿಮ್‌ ಸೌಥಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಮುನ್ನಡೆಸಲಿದ್ದಾರೆ. ಕೇನ್ ವಿಲಿಯಮ್ಸನ್ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಮಾರ್ಕ್‌ ಚಾಪ್ಮನ್‌ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಸಂಭಾವ್ಯ ತಂಡಗಳು:

ಭಾರತ: ರಿಷಭ್ ಪಂತ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಹಲ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್.

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್‌ವೇ, ಗ್ಲೆನ್ ಫಿಲಿಫ್ಸ್, ಡೇರಲ್ ಮಿಚೆಲ್, ಮಾರ್ಕ್ ಚಾಂಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ(ನಾಯಕ), ಆಡಂ ಮಿಲ್ನೆ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್. 

ಪಂದ್ಯ: ಮಧ್ಯಾಹ್ನ 12ಕ್ಕೆ
ನೇರ ಪ್ರಸಾರ: ಅಮೆಜಾನ್‌ ಪ್ರೈಮ್‌/ಡಿಡಿ ಸ್ಪೋರ್ಟ್ಸ್

click me!